ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ

ಹದಿಹರೆಯದ ವೈದ್ಯರಿಂದ
ಮುಗಿಬಿದ್ದ ವೃದ್ಧರ ತನಕ
ಕೊಡಚಾದ್ರಿ ನೆತ್ತಿ ಮೂಸುವ ತವಕ

ಅದೇನು ರಣೋತ್ಸಾಹ ಅದೇನು  ಕಂಡ ಕಂಡ ಗಿಡಮರಗಳ ಗಿರಿಕಂದರಗಳ
ಪ್ರಕೃತಿ ಗೀತೆಗಳ ಸ್ವಾಹಾ !

ನಿಂತ ನೆಲದ ಬುಡದಿಂದ
ಬುಗ್ಗೆಯಾದ ಹಸಿ ಹಸಿ ಮೇಘ
ಕುಂತ ನೆಲೆಯಿಂದ  ಧುತ್ತೆಂದೆದ್ದು ಕುಣಿದು ಕುಪ್ಪಳಿಸಿದ ಕಲೆ
ರಾಗ ಅಮೋಘ!
ನಾಟ್ಯರಾಣಿ ಹಸಿರಾಣಿ ನಮ್ಮೀ
ಕೊಡಚಾದ್ರಿ ಸುಂದರಿ


 
ಮಂಜಿನ ಚಿತ್ತಾರ  ಮೂಡಿಸುವ
ಕಲೆಗಾರ ಭೂಮ್ಯಾಕಾಶ ಒಮ್ಮೆಲೇ
ಕಣ್ತುಂಬಿಸಿ ಕೊಳ್ಳುವ ಚುಂಬನ
ಸಾಕ್ಷಾತ್ಕಾರ
ದೃಶ್ಯ ಕಾವ್ಯ
ಸದೃಶ್ಯ ಗೀತ ಗಾಯನ!

ಚುಮು ಚುಮು ನಸುಕಿನ ಜೀಪಿನ
ಪ್ರವಾಸ ಸಾಹಿತ್ಯ
ಮಂಡಿಯೂರಿ ಚಲಿಸಿ ಗಿರಿ ಪಂಕ್ತಿಯ
ನೆತ್ತಿಯೆತ್ತರಕ್ಕೂ ಹಾರಾಡಿ
ನೆಗೆದಾಡಿ ದಾರಿಗುಂಟ ಕೈ ಕಾಲು
ತೆಳು ಧೂಳು!
ಮನ ಮಾತ್ರ ಅನೂಚನ ಅನುಭವದ ದೃಶ್ಯ ಕಾವ್ಯ

ರವಿ ಕಂಡಾಗ  ಕಾಣಿಸಿದ್ದು ಅವನ ಪ್ರಖರ ಕಿರಣ  ಹೊಂಗಿರಣ
ಚೇತೋಹಾರಿ ಬೆಳಕಿನ ಮುನ್ನುಡಿ
ಬೆಳಗಾಗುವ ಮುನ್ನಿನ ಚೆನ್ನುಡಿ

ಸೂರ್ಯನಿಗೆ ನಮಸ್ಕಾರ
ಸರ್ವಜ್ಞನ ಸಾಕ್ಷಾತ್ಕಾರದ ಹೊಳಪು
ಮೋಡಗಳ ಮೇಲಿಂದ
ಕಾಮನ ಬಿಲ್ಲಿನ ಕಾಮನೆಯಿಂದ
ಕಂಡಿದ್ದು ದಿಕ್ ದಿಗಂತ
ಅನಂತ ಆತ್ಮೋನ್ನತಿ!
ಶಂಕರರ ಸ್ತೋತ್ರ ಸ್ತುತಿ

ನೆನಪಾಗಿದ್ದು ಕವಿವರ್ಯರ ಕವನ
“ಸಾಯೋದ್ರೊಳಗೆ ಒಮ್ಮೆ ಕಾಣು
ಜೋಗದ ಗುಂಡಿ”
ಮತ್ತೆ ನಾವ್ ಹಾಡಿದ್ದು
“ಇರೋದ್ರೊಳಗೆ ಮತ್ತೊಮ್ಮೆ ಕಾಣು  ಕೊಡಚಾದ್ರಿ ನೆತ್ತಿ”

——————————————

2 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಕೊಡಚಾದ್ರಿ ನೆತ್ತಿ

  1. ಪ್ರಿಯ ವೆಂಕಟೇಶ್,
    ನಿಮ್ಮ “ಇರೋದ್ರೊಳಗೆ ಕಾಣು ಇನ್ನೊಮ್ಮೆ ಕೊಡಚಾದ್ರಿ ನೆತ್ತಿ” ಸಾಲು “ಸಾಯೋದ್ರೊಳಗೆ ಕಾಣು ಜೋಗಾದ್ಗುಂಡಿ” ಅನ್ನುವ ಅಣ್ಣಾವರ ಹಾಡಿನಷ್ಟೇ ಚೆನ್ನಾಗಿದೆ ಮತ್ತು ಅಷ್ಟೇ ಪ್ರಚಾರ ಯೋಗ್ಯ! ಪ್ರಕೃತಿಯ ಬಗ್ಗೆ ಕೂಡ ನೀವು ಇಷ್ಟೊಂದು ಉತ್ತಮ ಕವಿತೆ ರಚಿಸಿರುವುದಕ್ಕೆ ನಿಮಗೊಂದು ಹೊಸ ಸಲಾಂ.

Leave a Reply

Back To Top