ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ

ಪಕ್ಷ ವಿಪಕ್ಷಗಳ ಜಾತಕವನು ತೆರೆದು
ಪೂರ್ವಾಪರಗಳ ಗ್ರಹಗತಿಯನು ತಿಳಿದು
ಮನೆಮನಗಳ ಕದವನು ತಟ್ಟುವಾಗ
ಪುಟ್ಟ ಅಂಗೈಯಲ್ಲಿ ದೊಡ್ಠ ನಕಾಶೆಯನಿಟ್ಟವರೇ ಮಹಾದೊರೆಗಳು

ಉರಿಯುವ ಬೆಂಕಿ ಕುದಿಯುವ ಎಣ್ಣೆ ಎಡಬಲಕೆ
ಬೆಂಕಿ ಸುಡುವುದಿಲ್ಲ  ಎಣ್ಣೆ ಕುದಿಸುವುದಿಲ್ಲ
ಎಲ್ಲೆಲ್ಲೂ ನಯ ವಿನಯಗಳ ಮಾತಿನ ಬೆಲ್ಲ
ದೇಶಸೇವೆಯೇ ಈಶಸೇವೆಯೆನ್ನುವವರ ಮೆರವಣಿಗೆ ಹೊರಟಿದೆಯಲ್ಲ!

‘ನಮಗೂ ಒಂದು ಕಾಲ ಬರುತ್ತದೆ’ಯೆಂದು
ಕಾಯುವವರ ಕಾಲವೂ ಬಂದಾಗಿದೆ
ಒಪ್ಪು ತಪ್ಪುಗಳನು ತಕ್ಕಡಿಯಲ್ಲಿಟ್ಟು ತೂಗಿ
ಯಾರನಾರಿಸಿ ಗದ್ದುಗೆಯೇರಿಸಬೇಕೆಂದರಿಯಲು
ರಾಮನಾದರೆ ಸಾಲದು ದಶಾವತಾರ ತಾಳಬೇಕು



ಇನ್ನು ಕೆಲವೇ ದಿನಗಳು ಮತ್ತೆ ಹಿಂದಿನಂತೆಯೇ
ಕರೆದಾಗ ಎದ್ದು ಹೋಗಿ ಘೋಷಣೆ ಕೂಗುವುದು
ಸಭೆ ಸಮಾರಂಭಗಳಿಗೆ ಜೀವ ತುಂಬುವುದು
ರಾಜಬೀದಿಯಲ್ಲಿ ಗತ್ತು ಗಮ್ಮತ್ತಿನ ಒಡ್ಡೋಲಗಕೆ
ಬದಿಗೆ ಸರಿದು ನಿಲ್ಲುವುದು.
ಪರವಾಗಿರದವುಗಳಿಗೆ ಮುಷ್ಕರ ಹೂಡುವುದು

ಓಟಿನೋಟದ ಬರದಲಿ
ಹಾಲು ಜೇನಿನ ಬಂಧ – ಸ್ನೇಹ ಸೌಹಾರ್ದತೆಯ ಚಂದ
ಕಳೆದು ಹೋಯಿತೆಷ್ಟೋ…!
ಈಗೀಗ ಸದ್ದು ಗದ್ದಲದ ನಡುವೆ ದುಮುಗುಡುವ ದಗೆ
 ಮನಸ್ಸಿನ ತುಂಬೆಲ್ಲ ಮತಬೇಧಗಳದೇ ಹೊಗೆ


10 thoughts on “ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ

  1. ಪ್ರಸ್ತುತ ಪರಿಸ್ಥಿತಿಗೆ ಚೆನ್ನಾಗಿ ಹೊಂದುವಂತಹ ಕವಿತೆ

Leave a Reply

Back To Top