ಕಾವ್ಯ ಸಂಗಾತಿ
ಬಡಿಗೇರ ಮೌನೇಶ್
ವೃಕ್ಷಸ್ವಗತ
ನಾನು ಯಾರೋ…
ಬೀದಿಬದಿಯಲ್ಲಿ
ಹಣ್ಣು ತಿಂದೆಸೆದ ಬೀಜ.
ಮೊಳೆತು,ಸಸಿಯಾಗಿ
ಫಲಬಿಟ್ಟ ಮರವಾದೆ
ಯಾರೊಬ್ಬರೂ ನೀರುಣಿಸಲಿಲ್ಲ
ಗೊಬ್ಬರವಿಡಲಿಲ್ಲ
ನೀರೆರೆಯಿತು ಮಳೆ
ಬೆಳಕಾದ ನೇಸರ
ನೆಲದಿಂದ ಹರಿದು ಬಂದ
ಮಣ್ಣು,ಕಸಕಡ್ಡಿಗಳೇ ಗೊಬ್ಬರ
ಬುವಿಯೊಡಲಿಗೆ ಬೇರನಿಳಿಸಿ
ಹಸಿರಿಂದ ಕಂಗೊಳಿಸಿ
ಎಲೆಯೆಲ್ಲ ಹರಡಿ
ಹೂ ಹಣ್ಣುಗಳಿಂದೊಡಲ ತುಂಬಿದೆ
ಯಾರೊಬ್ಬರೂ ಸುಳಿಯಲಿಲ್ಲ
ನಾ ಬೆಳೆವಾಗ ನನ್ನ ಬಳಿ
ಬೆಳೆದ ಮೇಲೆ ಬರುವುದು
ನರಜನ್ಮಕಂಟಿದ ನಂಟು
ಸ್ವಾರ್ಥ ತುಂಬಿದ ನೀವು
ಹೂ ಹಣ್ಣುಗಳ ತೆರೆತೆರೆದು
ಬರಿದು ಮಾಡುವಿರಿ
ರೆಂಬೆಕೊಂಬೆಗಳ ಕಡಿಕಡಿದು
ಬರಡು ಮಾಡುವಿರಿ ನನ್ನ
ಚಿಂತೆಯಿಲ್ಲ!
ಜೀವದುಸಿರ ಹಿಡಿದು
ಬತ್ತದ ಹಸಿರು ಹಾಸುವುದು
ನನ್ನ ಜನ್ಮಕಂಟಿದ ನಂಟು
ಮರೆಯದಿರಿ!
ನನ್ನ ಬದುಕು ನಿಮಗಾಗಿ ಎಂಬುದ
ವಿಷಾನಿಲವ ಪಡೆದು
ಜೀವಾನಿಲವ ನೀಡುವೆ
ಭರಸಿಡಿಲ ಬಡಿತಗಳ ಸಹಿಸುವೆ
ಬಿರುಗಾಳಿಯ ಮೆಟ್ಟಿ ನಿಲ್ಲುವೆ
ನಿಮ್ಮ ಅತಿಯಾಸೆಗಳ ಮಿತಿಗೊಳಿಸಿ
ಕಾಪಾಡಿರಿ ನನ್ನ
ಹಸಿರಾಗಿ,ಉಸಿರಾಗಿ
ನೆರಳಾಗಿ ನೆರವಾಗುವೆ ನಿಮಗೆ
ಪ್ರಾಣ ನೀಗುವವರೆಗೆ.
—————————
ಬಡಿಗೇರ ಮೌನೇಶ್
ನಿಮ್ಮ ಹೋಲಿಕೆಗಳಿಗೆ ಸರಿಸಾಟಿನೇ ಇಲ್ಲ ಸರ್
Super sir
ಧನ್ಯವಾದ ಸರ್