ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”

ಬಂದು ಹೋಗುವ ನಡುವೆ
ನಕ್ಕು ಹಗುರಾಗಬೇಕು
ಅರೆಗಳಿಗೆ ನೋವಿದೆ
ಮರುಗಳಿಗೆ ನಲಿವಿದೆ
ಸೋಲಿದೆ ಗೆಲುವಿದೆ
ಬದುಕಿಗೊಂದು ವೇಗವಿದೆ
ಬದುಕಿಗೊಂದು ಲಯವಿದೆ
ಜೀವನಕ್ಕೊಂದು ಅರ್ಥವಿದೆ
ಸುತ್ತಮುತ್ತಲು ಕಣ್ಮನ
ಸೆಳೆಯುವ ಚೆಲುವಿದೆ
ಖುಷಿಯ ಹರಡುವ ಅಲೆಯಿದೆ
ನೋವ ನೀಡುವ ಜಾಲವಿದೆ
ಕಷ್ಟ ನಷ್ಟಗಳ ಮರೆತು
ಜೀವಿಸಲು ಒಂದಿಷ್ಟು ಸಮಯವಿದೆ
ಪ್ರತಿ ನೋವಿಗೂ ಕೊನೆಯಿದೆ
ಪ್ರತಿ ಗೆಲುವಿಗೂ ಒಂದು ಅಂತ್ಯವಿದೆ ನೋವಿರಲಿ ನಲಿವಿರಲಿ
ಬದುಕಿನ ಪಯಣ ಸಾಗುತ್ತಿರಲಿ
ಅಂಜದೆ ಅಳುಕದೆಯೇ
ಮುನ್ನುಗ್ಗುವ ಛಲವಿರಲಿ
ಸೋಲನ್ನು ಸೋಲಿಸುವ
ಚೈತನ್ಯವು ತುಂಬಿರಲಿ
ಗೆಲುವನ್ನು ಹಂಚಿ
ಆಸ್ವಾದಿಸುವ ಗುಣವಿರಲಿ
ಬರುವುದೆಲ್ಲವೂ ಬರಲಿ
ಎದುರಿಸುವ ತಾಕತ್ತು
ನಮ್ಮದಾಗಿರಲಿ
ಮನವ ಹಿಂಡುವ ಕಹಿಗಳಿಗೆ
ಖುಷಿಯ ಚಿಮ್ಮುವ ಸಿಹಿಗಳಿಗೆ
ಎಲ್ಲವನ್ನು ಸಮಾನವಾಗಿ
ಸ್ವೀಕರಿಸುವ ಮನೋಭಾವ
ತುಂಬಿರಲಿ
ಪ್ರೀತಿಯ ಹಂಚುತ್ತ
ದ್ವೇಷವ ಮರೆಯುತ್ತ
ಸಾರ್ಥಕತೆಯ ಜೀವನ ಹೊಂದುತ್ತ
ಜೀವರಥವ ಸಂಭ್ರಮದಿ
ಎಳೆಯಬೇಕು
ಜೀವನ್ಮುಖಿ ಪಯಣ
ನಗುನಗುತ ಮುಗಿಸಬೇಕು
ಮರಳಿ ಮಣ್ಣಿಗೆ ಸೇರಬೇಕು

One thought on “ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..”

  1. ಒಂದು ಚೆಂದದ ಕವನ. ಕವನದ ಉದ್ದಕ್ಕೂ ಸರಳ ಸಾಲುಗಳಲ್ಲಿ ಸಹಜ ಬದುಕಿನ ಸ್ಫೂರ್ತಿಯಾಗಿ ಭರವಸೆಯಾಗಿ ಆಪ್ತವಾಗಿ ನಿಲ್ಲುವ ನಿಲುವು ಇದೆ. ಎಲ್ಲವನ್ನೂ ಪ್ರೀತಿಸುವ,ತಾಳಿ ಬದುಕುವ, ಬದುಕಿಸುವ ನಗುವೊಂದು ಕವನ ಪರಿಚಯಿಸುತ್ತದೆ. ಬದುಕಿನ ಸೂಕ್ಷ್ಮಗಳಲ್ಲಿ ಆಪ್ತತೆಯ ಅನುಬಂಧವನ್ನು ಕಟ್ಟಿಕೊಡುತ್ತಾ ಒಂದು ಒಳ್ಳೆಯ ಸಂಭ್ರಮವಾಗಿ ಬದುಕು ಭಾವಗಳಿಗೆ ಆರಾಧನೆಯಾಗುತ್ತದೆ.

Leave a Reply

Back To Top