ಕಾವ್ಯ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಉರಿವ ಕೆಂಡದ ಹಾದಿ..”
ಎಷ್ಟೊಂದು ಕಸಕಡ್ಡಿ ತುಂಬಿತ್ತು
ಮುಳ್ಳುಕಂಟಿಯೆಲ್ಲ ಬೆಳೆದು ಬೆಂಗಾಡಾಗಿತ್ತು
ಕಳ್ಳಿರಕ್ಕಸಿಗಿ ಹುಲುಸಾಗಿ ಕೊಂಬೆಚಾಚಿ ಬೆಳೆದಿತ್ತು
ಇದನೆಲ್ಲ ನೋಡಿದ ಮೇಲೆ
ಹಸನಾಗಬೇಕೆನಿಸಿತ್ತು…!!
ಕೆಸರು ಚೆಲ್ಲಿ ಅಂಗಳವೆಲ್ಲ ರಾಡಿ ರಾಡಿ
ಧೂಳು ಮೆತ್ತಿ ಬಾಗಿಲೆಲ್ಲಾ
ಹುಡಿ ಹುಡಿ
ನೆರಳಿಲ್ಲದೆ ಅನಾಥವಾದ ಮನೆಯೆಲ್ಲ ಬಿಕೋ ಬಿಕೋ…
ಆಗ ನನಗನಿಸಿತು ಮನೆಯ ಸ್ವಚ್ಛವಾಗಿಸಿ ಒಪ್ಪಮಾಡಬೇಕು…!!
ಕರಳು ಬಳ್ಳಿಗಳು ಕಮರಿ ಕರಕಲಾಗಿವೆ
ಸಂಬಂಧಗಳು ಸ್ವಾರ್ಥದ ದಾರಿಯಲಿ ಸುಟ್ಟು ಹೋಗಿವೆ
ಬಾಳು ಸೇಡು ಆಕ್ರೋಶದ ಗರಗಸಕ್ಕೆ ತಲೆಯೊಡ್ಡಿದೆ
ಈಗ ನನಗನಿಸುತಿದೆ
ಉಸಿರ ಹಿಡಿದು ಬದುಕು ದೂಡುವದಾದರೂ ಎಲ್ಲಿಗೆ..?
ಅಪ್ಪಿ ಮುದ್ದಾಡಿದವರ ಮರೆತು ಹೋಗಿ
ಅಹಂನ ಕೋಟೆ ಕಟ್ಟಿದವರ
ಮನ್ನಿಸಲು ಹೋಗಿ
ಬದುಕ ತುಂಬಾ ಅವರ ಹಾದಿಗೆ ಹೂ ಚೆಲ್ಲುತ್ತಲೇ…
ನಾವು…ಉರಿವ ಕೆಂಡದ ಹಾದಿಯೊಳಗೆ ಹೆಜ್ಜೆ ಹಾಕುವದಾದರೂ ಹೇಗೆ..?
————————
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸುಂದರ ಕವಿತೆ. ಅಷ್ಟೇ ಅರ್ಥಗರ್ಭಿತವೂ.
ಅಭಿನಂದನೆಗಳು.