ಕನ್ನಡ ಚಿತ್ರರಂಗದ ವಾಮನ…. ತ್ರಿವಿಕ್ರಮನಾಗಿ ಬಾಳಿದ್ದು-ವೀಣಾ ಹೇಮಂತ್ ಗೌಡ ಪಾಟೀಲ್

ನಿನ್ನೆ ಮಧ್ಯಾಹ್ನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದಾಗ ಪತ್ರಕರ್ತರೊಬ್ಬರು ಕರೆ ಮಾಡಿ ದ್ವಾರಕೀಶ್ ಅವರ ಮರಣದ ವಿಷಯವನ್ನು ಹೇಳಿ ನಿಮ್ಮ ಬಳಿ ಅವರ ಕುರಿತ ಲೇಖನ ಇದೆಯೇ ಎಂದು ಕೇಳಿದರು.
ನಿಜ ಅವರ ಕುರಿತು ಈವರೆಗೂ ಬರೆಯುವ ಪ್ರಮೇಯ ಬಂದಿರಲಿಲ್ಲ. ಆದರೆ ಇದೀಗ ಮರಣ ಹೊಂದಿರುವ ಅವರಿಗೊಂದು ಗೌರವದ ಬೀಳ್ಕೊಡುಗೆ ನೀಡಲು ಬರೆಯಲೇಬೇಕು ನಾವು.

ಕನ್ನಡ ಚಿತ್ರರಂಗದ ವಾಮನ, ಕುಳ್ಳ, ದ್ವಾರ್ಕಿ ಎಂದೇ ಹೆಸರಾದ ದ್ವಾರಕೀಶ್ ಸರಿಸುಮಾರು ಆರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಮದರಾಸಿನಲ್ಲಿ ಮಾತ್ರ ಚಿತ್ರೀಕರಣ ಮಾಡುತ್ತಿದ್ದಂತಹ ದಿನಮಾನಗಳಲ್ಲಿಯೇ ಆಫ್ರಿಕಾದಲ್ಲಿ ಶೀಲಾ, ಸಿಂಗಪೂರ್‌ನಲ್ಲಿ ರಾಜಾಕುಳ್ಳ ಎಂಬಂತಹ ಚಲನಚಿತ್ರಗಳನ್ನು ದೂರದ ವಿದೇಶಗಳಲ್ಲಿ ಚಿತ್ರೀಕರಣ ಮಾಡಿದ ಮೊದಲ ನಿರ್ಮಾಪಕ ಎಂಬ ಹೆಗ್ಗಳಿಕೆ ಅವರದು.

ಇಂದಿನ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19 ರಂದು ಬಂಗ್ಲೆ ಶಾಮರಾಯರ ಮಗನಾಗಿ ಜನಿಸಿದ ದ್ವಾರಕೀಶ್ ಅವರು ತಮ್ಮ ಶಿಕ್ಷಣವನ್ನು ಮೈಸೂರಿನ ಬನುಮಯ್ಯ ಶಾಲೆ, ಶಾರದಾ ವಿಲಾಸ್ ಶಾಲೆಗಳಲ್ಲಿ ಪೂರೈಸಿ ಡಿಪ್ಲೋಮಾ ಶಿಕ್ಷಣವನ್ನು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪಡೆದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅಣ್ಣ ಹಾಕಿ ಕೊಟ್ಟ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿಯನ್ನು ಮುನ್ನಡೆಸಿದವರಿಗೆ ಸಿನಿಮಾದ ಗುಂಗು ಬಹಳವೇ ಇತ್ತು. ಈ ಕುರಿತು ಸೋದರಮಾವನಾದ ಹುಣಸೂರು ಕೃಷ್ಣಮೂರ್ತಿ ಅವರಲ್ಲಿ ಅಲವತ್ತುಕೊಂಡಾಗ ಮೊದಲು ವಿದ್ಯಾಭ್ಯಾಸ ಪೂರ್ಣವಾಗಲಿ ನಂತರವೇ ಸಿನಿಮಾ ಎಂದು ಅವರು ತಾಕೀತು ಮಾಡಿದರು. ಅಂತೆಯೇ ೧೯೬೯ರಲ್ಲಿ ಪಿವಿ ಶಿವಶಂಕರ್ ನಿರ್ದೇಶನದ ವೀರ ಸಂಕಲ್ಪ ಚಿತ್ರದಲ್ಲಿ ಅಭಿನಯಿಸಿದರು. ಮುಂದೆ ಅವರೆಂದೂ ಹಿಂತಿರುಗಿ ನೋಡದ ತೆರದಲ್ಲಿ ಅದ್ಭುತವಾಗಿ ಬೆಳೆದರು.
ಮಂಕುತಿಮ್ಮ ಚಿತ್ರದ ಅವರ ಪಾತ್ರ ಪೋಷಣೆಯಂತೂ ಅತ್ಯದ್ಭುತವಾದುದು. ಮಂಕುತಿಮ್ಮ ಚಿತ್ರದ ಮುಗ್ಧ ತಿಮ್ಮನಾಗಿ ಗುರು-ಶಿಷ್ಯರು ಚಿತ್ರದ ಮೂರ್ಖ ಶಿಷ್ಯರಲ್ಲಿ ಒಬ್ಬನಾಗಿ ಮಂತ್ರ ಮುಗ್ಧಗೊಳಿಸುವಂತಹ ಅಭಿನಯವನ್ನು ಅವರು ಮಾಡಿದರು. ಮುಂದೆ ಡಾ. ರಾಜ್ ರವರ ಅಭಿನಯದ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ಮಾಣ ಕಾರ್ಯಕ್ಕಿಳಿದರು. ವೀರ ಸಂಕಲ್ಪ, ದೂರದ ಬೆಟ್ಟ,ಸತ್ಯಹರಿಶ್ಚಂದ್ರ, ಪರೋಪಕಾರಿ, ಗಾಂಧಿನಗರ, ಬಹದ್ದೂರ್ ಗಂಡು, ಬಂಗಾರದ ಮನುಷ್ಯ ಮುಂತಾದ ಚಿತ್ರಗಳಲ್ಲಿ ಡಾಕ್ಟರ್ ರಾಜ್ ಮತ್ತು ದ್ವಾರಕೀಶ್ ಜೊತೆಯಾಗಿ ಕಾರ್ಯನಿರ್ವಹಿಸಿದರು. ಡಾಕ್ಟರ್ ರಾಜರಂತಹ ದಿಗ್ಗಜರು ಇದ್ದಾಗ್ಯ್ಯೂ ಕೂಡ ಜನರನ್ನು ಆಕರ್ಷಿಸಿದರು. ಬಂಗಾರದ ಮನುಷ್ಯ ಚಲನಚಿತ್ರವಂತೂ ಆ ಕಾಲದ ಅದ್ಭುತ ದಾಖಲೆಯ ಚಿತ್ರವಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಮನೆ ಮಾತಾಗಿ ಡಾಕ್ಟರ್ ರಾಜ್ ರವರಿಗೆ ಅದ್ಭುತ ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಟ್ಟಿತು.

ಕನ್ನಡ ಚಿತ್ರರಂಗದ ಇನ್ನೊರ್ವ ಪ್ರಮುಖ ನಾಯಕ ನಟ ದಿವಂಗತ ಡಾಕ್ಟರ್ ವಿಷ್ಣುವರ್ಧನರನ್ನು ನಾಯಕನಾಗಿ ಇಟ್ಟುಕೊಂಡು ಹಲವಾರು ಚಿತ್ರಗಳನ್ನು ದ್ವಾರಕೀಶ ಅವರು ನಿರ್ಮಿಸಿ ನಟಿಸಿದರು ಹಲವಾರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು.
ಕಳ್ಳ ಕುಳ್ಳ, ಕಿಟ್ಟು ಪುಟ್ಟು, ಸಿಂಗಪೂರಿನಲ್ಲಿ ರಾಜಾಕುಳ್ಳ, ಗುರು ಶಿಷ್ಯರು, ಆಪ್ತಮಿತ್ರ ಮುಂತಾದ ಚಿತ್ರಗಳು ಕನ್ನಡದಲ್ಲಿ ಜನಪ್ರಿಯತೆಯನ್ನು ಗಳಿಸಿದವು.ರಜನಿಕಾಂತ್ ಶ್ರೀದೇವಿ ಮುಂತಾದ ನಾಯಕ ನಟನಟಿಯರನ್ನು ಹಾಕಿಕೊಂಡು ಚಲನಚಿತ್ರ ನಿರ್ಮಿಸಿದ ದಾಖಲೆ ದ್ವಾರಕೀಶ್ ಅವರದು. ವಿಷ್ಣುವರ್ಧನ್ ರಿಂದ ಬೇರ್ಪಟ್ಟ ನಂತರ ವಿನೋದ್ ರಾಜ್ ಅವರೊಂದಿಗೆ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು ಕನ್ನಡಕ್ಕೆ ಮತ್ತೋರ್ವ ಅದ್ಭುತ ನಾಯಕ ನಟ ನೃತ್ಯಪಟುವಾಗಿ ಹೊರಹೊಮ್ಮಿದ್ದು ಅವರ ಡ್ಯಾನ್ಸ್ ರಾಜ ಡ್ಯಾನ್ಸ್ ನಲ್ಲಿ.

ಮುಂದೆ ತಮಿಳಿನ ಪುದುವಸಂತಂ ಚಲನಚಿತ್ರವನ್ನು ಕನ್ನಡಕ್ಕೆ ಶೃತಿ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ ದ್ವಾರಕೀಶ್ ಇನ್ನಿಲ್ಲದ ಯಶಸ್ಸನ್ನು ಗಳಿಸುವುದರ ಜೊತೆ ಜೊತೆಗೆ ಕನ್ನಡಕ್ಕೆ ಶೃತಿ, ಸುನಿಲ್ ರಂತಹ ಪ್ರತಿಭಾನ್ವಿತ ಕಲಾವಿದರನ್ನು ಪರಿಚಯಿಸಿದರು. ಇತ್ತೀಚಿನ ವರ್ಷಗಳಲ್ಲಿಯೂ ಕೂಡ ಆಟಗಾರ, ಚೌಕ, ಆಯುಷ್ಮಾನ್ ಭವ, ಅಮ್ಮ ಐ ಲವ್ ಯು ಮುಂತಾದ ಚಿತ್ರಗಳನ್ನು ನಿರ್ಮಿಸಿದರು.

ತ್ರಿವಿಕ್ರಮ ವಾಮನನಾಗಿ ಬೆಳೆದ ಬಗೆ .. ತಮ್ಮ ಕುಬ್ಜ ವ್ಯಕ್ತಿತ್ವ, ದಪ್ಪನೆಯ ದೊಡ್ಡ ಮೂಗನ್ನು ಹೀಗಳೆದು ಮಾತನಾಡಿದ ಚಲನಚಿತ್ರ ರಂಗದ ಇನ್ನಿತರ ನಾಯಕ ನಟರ ಮುಂದೆ ಪೆದ್ದು ಪೆದ್ದಾದ ನಟನೆಗಳ ಮೂಲಕ ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ಬೆಳೆದ ಪರಿ ಅನನ್ಯ ಮತ್ತು ಅದ್ಭುತವಾದದ್ದು. ಅದೆಷ್ಟೇ ವಿದೇಶಗಳಲ್ಲಿ ವಿದೇಶಿ ನಟ ನಟಿಯರೊಂದಿಗೆ ಚಿತ್ರೀಕರಣ ಮಾಡಿದರೂ ಅವರ ಕನ್ನಡ ಪ್ರೇಮ ಅದ್ಬುತ. ಅದನ್ನು ತಮ್ಮ ಚಲನಚಿತ್ರದ ಹಾಡುಗಳಲ್ಲಿಯೂ ತೋರ್ಪಡಿಸಿದ ಅವರು ಕನ್ನಡ ನಾಡು ಬಲು ಚೆನ್ನ ಕನ್ನಡ ಭಾಷೆ ಬಲುಚಂದ ಅಲ್ಲಿಯೇ ಬದುಕೋಣ ಎಂಬ ಮಾತನ್ನು ಹೇಳಿದರು.

ತಮ್ಮ ವೃತ್ತಿ ಬದುಕಿನ 63 ವರ್ಷಗಳಲ್ಲಿ ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ 53ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ದ್ವಾರಕೀಶ್ ಅವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ತರುವ ಪ್ರಯತ್ನ ಮಾಡಿದರು ಅವರ ನಾಲ್ಕು ಮಕ್ಕಳಲ್ಲಿ ಒಬ್ಬರೂ ಕೂಡ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ನೂರಾರು ಜನ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ದ್ವಾರಕೀಶ್ ಅವರು ಸ್ವಂತ ಮಕ್ಕಳಿಗೆ ನೆಲೆ ಒದಗಿಸುವಲ್ಲಿ ವಿಫಲವಾದದ್ದು ವಿಪರ್ಯಾಸವಲ್ಲದೆ ಮತ್ತಿನ್ನೇನು??

ದ್ವಾರಕೀಶ್ ಓರ್ವ ಅಭಿಜಾತ ಕಲಾವಿದ. ಅಸೀಮ ಸಾಹಸಿ, ಅದ್ಭುತ ನಟ. ಒಳ್ಳೆಯ ನಿರ್ದೇಶಕ,ನಿರ್ಮಾಪಕರಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಚಲನಚಿತ್ರರಂಗದಲ್ಲಿ ಯಶಸ್ಸು ಎಂಬುದು ಹಾವು ಏಣಿಯ ಆಟ ಇದ್ದಂತೆ ಎಂಬುದರ ಅರಿವಿದ್ದು ಕೂಡ ಚಲನಚಿತ್ರರಂಗದಲ್ಲಿಯೇ ಅತಿ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಹಣ ಗಳಿಸಿದ ದ್ವಾರಕೀಶ್ ಎಲ್ಲವನ್ನು ಕಳೆದುಕೊಂಡದ್ದು ಇದೇ ಚಿತ್ರರಂಗದಲ್ಲಿ. ಎಲ್ಲವನ್ನು ಕಳೆದುಕೊಂಡ ಮೇಲೂ ಚಿತ್ರ ನಿರ್ಮಾಣ, ನಿರ್ದೇಶನ ಮತ್ತೆ ಮತ್ತೆ ತಮ್ಮನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅದ್ಭುತ ಸಾಹಸಿ ಆತ. ಅವರ ಮೊದಲ ಪತ್ನಿ ಅಂಬುಜ ಮತ್ತು ಎರಡನೇ ಪತ್ನಿ ಶೈಲಜಾ.ಅವರಿಗೆ ಒಟ್ಟು ಐದು ಜನ ಮಕ್ಕಳಿದ್ದು ತನ್ನನ್ನು ಅಪಾರವಾಗಿ ಪ್ರೀತಿಸುವ ತನ್ನ ಮಕ್ಕಳು ತಾನು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಸೋಲಿನಿಂದ
ಧರಾಶಾಹಿಯಾಗಿದ್ದಾಗಲೂ ತನ್ನ ಜೊತೆಗಿದ್ದು ತನಗೆ ಬೆಂಬಲ ನೀಡಿದ್ದು ತನ್ನ ಅದೃಷ್ಟ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಆತ್ಮಕಥೆಯನ್ನು ಬರೆದಿರುವ ದ್ವಾರಕೀಶ್ ಅದರಲ್ಲಿ ಹಲವಾರು ವಿಷಯಗಳನ್ನು ಮುಚ್ಚಿಟ್ಟು ಬರೆದಿರುವುದಾಗಿ ಹೇಳಿದ್ದಾರೆ.

1960ರ ದಶಕದಿಂದ ಹಿಡಿದು 2020 ರ ವರೆಗೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಸೋಲಿನಲ್ಲಿ ಕುಗ್ಗದೇ, ಗೆಲುವಿನಲ್ಲಿ ಹಿಗ್ಗದೆ ಚಲನಚಿತ್ರ ನಿರ್ಮಾಣ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇಡೀ ಜೀವನವನ್ನು ಚಿತ್ರರಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಅತ್ಯುನ್ನತ ಚಿತ್ರಗಳು ಎಂದು ಕರೆಸಿಕೊಳ್ಳುವ ಹಲವಾರು ಚಲನಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ದ್ವಾರಕೀಶ್ ನೆನ್ನೆಯ ದಿನ ನಿಧನ ಹೊಂದಿದರು. ಅವರ ಅವಿರತ ಶ್ರದ್ಧೆ, ಉತ್ಸಾಹ, ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ, ಇದ್ದುದನ್ನು ಇದ್ದಂತೆಯೇ ಹೇಳುವ ನಿಷ್ಟುರತೆ ಚಿತ್ರರಂಗದ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ.

Leave a Reply

Back To Top