‘ಗ್ರಹಚಾರ’ ರೂಪೇಶ್ ಅವರ ಸಣ್ಣ ಕಥೆ

ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ…! ಒಂದೂ ಕೆಲಸವೂ ಸರಿಯಾಗಿ ಅಗುತ್ತಿಲ್ಲ. ರಾತ್ರಿ ಅಲರಾಮ್ ವ್ಯವಸ್ಥೆ ಮಾಡಿಟ್ಟು ಮಲಗಿದರೂ, ಬೆಳಗ್ಗೆ ಏಳುವಾಗ ಹದಿನೈದು ನಿಮಿಷ ತಡವಾಗಿತ್ತು. ಇದರಲ್ಲಿ ಯಾರ ತಪ್ಪು ಹುಡುಕುವುದು? ಪಾಪ ಆ ಗಡಿಯಾರದ್ದೇನೂ ತಪ್ಪಿಲ್ಲ. ಅದು ತನ್ನ ಕೆಲಸವನ್ನು ಸರಿಯಾಗಿಯೇ ಮಾಡಿತ್ತು. ಆದರೆ ಅದಕ್ಕೇನು ಗೊತ್ತಿತ್ತು? ತಾನು ಇತರ ಗಡಿಯಾರಗಳಿಗಿಂತ ಹದಿನೈದು ನಿಮಿಷ ನಿಧಾನವಾಗಿದ್ದೇನೆಂದು..! ನನ್ನನ್ನು ಎಬ್ಬಿಸಿ ತಾನೇನೂ ತಪ್ಪು ಮಾಡಿಲ್ಲವೆಂಬಂತೆ ತನ್ನ ಕಾರ್ಯದಲ್ಲಿ ತೊಡಗಿತ್ತು ಆ ನನ್ನ ಮುಗ್ಧ ಗಡಿಯಾರ. ಎಲ್ಲಾ ನನ್ನ ಗ್ರಹಚಾರ…!
 ಅಲ್ಲಿಂದಲೇ ಶುರುವಾಯಿತು ನೋಡಿ ನನ್ನ ಶುಭ ಗಳಿಗೆ. ಎದ್ದು ಹೊಟ್ಟೆ ಹಗುರ ಮಾಡಲೆಂದು ಹೋದರೆ ಆ ಪವಿತ್ರ ಜಾಗದಲ್ಲಿ ನಳ್ಳಿ ಮಹಾರಾಜರು ಸತ್ಯಾಗ್ರಹದಲ್ಲಿದ್ದರು. ಮಾಡಿದ ಕರ್ಮವನ್ನು ತೊಳೆಯಲು ನೀರಿನ ಅವಶ್ಯಕತೆ ಇದೆಯಲ್ಲ…! ಪುಣ್ಯಕ್ಕೆ ಪಕ್ಕದಲ್ಲೇ ಬಾವಿಯ ವ್ಯವಸ್ಥೆ ಇತ್ತು. ಭಾರವಾದ ಹೊಟ್ಟೆಯನ್ನು ಹೊತ್ತುಕೊಂಡು ಹಾಗೋ ಹೀಗೋ ಮಾಡಿ ಬಾವಿಯಿಂದ ನೀರೆಳೆದೆ. ನನ್ನ ಅವಸ್ಥೆಯನ್ನು ನೋಡಿ, ನನಗೇ ನನ್ನ ಮೇಲೆ ಮರುಕ ಹುಟ್ಟಿತ್ತು. ನನ್ನ ಶತ್ರುವಿಗೂ ಇಂತಹ ಅವಸ್ಥೆ ಬರಬಾರದು..
ಹೇಗೋ ಕಷ್ಟಪಟ್ಟು ಒಂದು ಕೈಯಲ್ಲಿ ಭಾರವಾದ ತಂಬಿಗೆ, ಮತ್ತೊಂದು ಕೈಯಲ್ಲಿ ನನ್ನ ಭಾರವಾದ ಹೊಟ್ಟೆ ಒತ್ತಡವನ್ನು ಸಮಾಧಾನ ಮಾಡುತ್ತಾ, ನೀರಿನ ವ್ಯವಸ್ಥೆ ಮಾಡಿದೆ. ಇನ್ನೇನು ಸ್ವರ್ಗದ ಕಡೆ ಹೋಗಬೇಕೆನಿಸುವಷ್ಟರಲ್ಲಿ, ನೋಡಿದ್ರೆ ಅಲ್ಲಿ ಟಾಯ್ಲೆಟ್‌ನ ಬಾಗಿಲು ಮುಚ್ಚಿತ್ತು. ಯಾರೊ ಅದಾಗಲೇ ಜಾಗವನ್ನು ಆಕ್ರಮಿಸಿಕೊಂಡಿದ್ದರು. ಅಲ್ಲ, ಆ ದೇವರಿಗೆ ತಮಾಷೆ ಮಾಡಲು ಇದೇ ಸಮಯ ಬೇಕಿತ್ತಾ? ಹೊಟ್ಟೆಯೊಳಗಿನ ಭಾರವನ್ನು ಹೊರ ಹಾಕುವ ತರಾತುರಿಯಲ್ಲಿದ್ದ ನನಗೆ ಅವನ ಮೇಲಿನ ಸಿಟ್ಟನ್ನು ಹೊರಹಾಕುವ ಹುಮ್ಮಸ್ಸು ಇರಲಿಲ್ಲ. ಒಂದರ್ಥದಲ್ಲಿ ಹುಮ್ಮಸ್ಸಿಗಿಂತ ಭಯ ಜಾಸ್ತಿ ಇತ್ತು ಎನ್ನಬಹುದಿತ್ತೇನೊ?
ಮನದಾಳದ ಸಿಟ್ಟನ್ನು ಹೊರಹಾಕುವ ಉತ್ಸಾಹದಲ್ಲಿ, ಹೊಟ್ಟೆಯೊಳಗಿನ ಭಾರ ಹೊರಬಿದ್ದರೆ..! ಒಳಗಡೆ ನಡೆಯಬೇಕಾದ ಕ್ರಿಯೆ ಅಲ್ಲೇ ಹೊರಗಡೆ ನಡೆಯಬಹುದೇ ಎಂಬ ಭಯ..! ಅದಕ್ಕೆ ಆ ಸಮಯದಲ್ಲಿ “ತಾಳಿದವನು-ಬಾಳಿಯಾನು” ಎಂಬ ಹಿರಿಯರ ಮಾತಿನಂತೆ ತಾಳ್ಮೆಗೆ ಶರಣಾದೆ. ಎರಡು ನಿಮಿಷ ಕಾದೆ, ಅಲ್ಲಲ್ಲ ತಡ್ಕೊಂಡೆ.
ಹಾಗೆಯೇ ಎಷ್ಟು ಹೊತ್ತು ತಡ್ಕೊಂಡು ಕಾಯೋಕಾಗುತ್ತೆ ಅಂತ, ಒಳಗಿನ ಮಹಾನುಭಾವ ಯಾರೆಂದು ತಿಳಿಯಲು ಎರಡು ಬಾರಿ ಬಾಗಿಲು ತಟ್ಟಿದೆ. ಒಳಗಿನಿಂದ ನನ್ನಪ್ಪನದೇ ಮಧುರವಾಣಿ ಕೇಳಿಸಿತು “ಯಾವನ್ಲೋ ಅವನು ಮರ್ಯಾದೆ ಇಲ್ಲದವ? ಒಳಗಡೆ ಇದ್ದಾರೆಂಬ ಪರಿಜ್ಞಾನನೂ ಇಲ್ಲ? ನಾಯ್…ಽಽಽಽ” ಮುಂದಿನ ಆ ಮಧುರವಾಣಿ ಕೇಳುವ ತಾಕತ್ತು ನನ್ನ ಕಿವಿಗಳಿಗಿರಲಿಲ್ಲ, ನನ್ನನ್ನು ಹುಟ್ಟಿಸಿದರೆಂಬ ಒಂದೇ ಒಂದು ಕಾರಣಕ್ಕೆ ಸುಮ್ಮನಿದ್ದೆ.
ಹತ್ತು ನಿಮಿಷ ಕಾದೆ. ಮುಂದಿನ ಐದು ನಿಮಿಷದಲ್ಲಿ ನನ್ನ ಜನ್ಮದಾತ ಎನಿಸಿಕೊಂಡವರು ಹೊರಗಡೆ ಬಂದರು. ಆಗ ಇಬ್ಬರ ಮುಖದಲ್ಲೂ ಸಮಾಧಾನದ ಚಿಹ್ನೆ ಎದ್ದು ಕಾಣುತ್ತಿತ್ತು. ಇನ್ನೇನು ಒಳಗಡೆ ಹೋಗಿ ಕುಳಿತುಕೊಳ್ಳಬೇಕೆನಿಸುವಷ್ಟರಲ್ಲಿ..! ಹಿಂದಿನಿಂದ ಅದೇ ಮಧುರವಾಣಿ ಕೇಳಿಸಿತು “ಲೋ, ನಳ್ಳಿಯಲ್ಲಿ ನೀರಿಲ್ಲ. ಬಾವಿಯಿಂದ ತೆಗೆದು ಹಾಕು”.
ನಾನಾಗಲೇ ತಂದಿಟ್ಟ ನೀರೆಲ್ಲಾ ಅಪ್ಪನ ಪಾದದ ಅಡಿಯಿಂದ ಹೋಗುತ್ತಿತ್ತು. ನನ್ನ ಗ್ರಹಚಾರ ಅಲ್ಲೂ ಬಿಡಲಿಲ್ಲ. ಬೇರೇನೂ ಉಪಾಯವಿಲ್ಲದೆ ಪುನಃ ಅದೇ ಬಾವಿಗೆ ಶರಣಾದೆ. ಅಷ್ಟೊತ್ತಿಗಾಗಲೇ ನನ್ನ ಹೊಟ್ಟೆ ಆರೇಳು ಬಾರಿ ಎಚ್ಚರಿಕೆಯ ಗಂಟೆ ಬಾರಿಸಿತ್ತು.
ಅಂತೂ ಇಂತೂ ನನ್ನ ಗುರಿ ತಲುಪಿದೆ. ಆ ಬ್ರಿಟಿಷರು ಮೈಸೂರು ಗೆದ್ದಾಗಲೂ ಅಷ್ಟೊಂದು ಖುಷಿಯಾಗಿರಲಿಕ್ಕಿಲ್ಲ. ಅಂತಹ ದಿಗ್ವಿಜಯದ ನಗು ನನ್ನ ಮುಖದಲ್ಲಿತ್ತು. ಒಂದು ಮಹಾಯುದ್ದವನ್ನು ಗೆದ್ದು ಬಂತೆ ಎದೆಯುಬ್ಬಿಸಿ ಹೊರಬಂದೆ. ಗಜ ಗಾಂಭೀರ್ಯದಿಂದ ಮನೆ ಕಡೆ ನಡೆದೆ.

***

ಇಷ್ಟೆಲ್ಲಾ ಮುಗಿಸಿ ಮನೆ ಒಳಗೆ ಬರುವಾಗ, ಕಾಲೇಜಿಗೆ ಲೇಟಾಗುವ ಮುನ್ಸೂಚನೆ ನೀಡುತಿತ್ತು ಆ ನನ್ನ ಮುಗ್ಧ ಗಡಿಯಾರ. ನನ್ನಿಂದಾಗಿ ಬೇರೆಯವರಿಗ್ಯಾಕೆ ತೊಂದರೆ ಎಂಬ ಪರೋಪಕಾರ ಭಾವನೆಯಿಂದ ಸ್ನಾನ ಮಾಡಲು ಬಚ್ಚಲು ಮನೆ ಕಡೆ ಹೋದರೆ…! ಅಲ್ಲಿ ಅದಾಗಲೇ ನನ್ನಕ್ಕನ ಆಕ್ರಮಣವಾಗಿತ್ತು. ಗ್ರಹಚಾರ ಅಲ್ಲಿಯೂ ಬೆನ್ನಟ್ಟಿಸಿಕೊಂಡು ಬಂದಿತ್ತು. ಕೊನೆಗೂ ಸ್ನಾನ ಮಾಡಿ, ಬೆಳಗ್ಗಿನ ಉಪಹಾರ ಮುಗಿಸಿ ಕಾಲೇಜಿನ ಕಡೆಗೆ ಹೊರಟೆ.
 ಮನೆಯಿಂದ ಎಷ್ಟೇ ಒದ್ದಾಡಿ ಒದ್ದಾಡಿ ಹೊರಡಿದರೂ ಬಸ್ ಸ್ಟಾಂಡ್ ತಲುಪುವಾಗ ಇಪ್ಪತ್ತು ನಿಮಿಷ ಲೇಟಾಗಿತ್ತು. ನನ್ನ ಗೆಳೆಯರೆಲ್ಲ ಅದಾಗಲೇ ಹೋಗಿದ್ದರು. ಒಂದೇ ಒಂದು ನರಪಿಳ್ಳೆಯೂ ಅಲ್ಲಿರಲಿಲ್ಲ. ಬೆಳಗ್ಗೆಯಿಂದ ಆದದ್ದಕ್ಕೆಲ್ಲಾ ಆ ದೇವರಿಗೆ ಶಾಪ ಹಾಕಬೇಕೆಂದೆನಿಸಿತು. ದೇವರ ಮೇಲಿನ ಸಿಟ್ಟು ಬಸ್ಸ್ ಮಿಸ್ಸಾಗಿ ಲೇಟಾಯಿತೆಂದಲ್ಲ, ಬದಲಾಗಿ ನಮ್ಮ ರೋಸಿ ಮಿಸ್ಸ್ನ ಕ್ಲಾಸ್ ತಪ್ಪಿ ಹೋಗುತ್ತಲ್ಲಾ ಎಂದು. ನಮ್ಮಂತಹ ಹುಡುಗರು ವಾರದಲ್ಲಿ ಆರು ದಿನನೂ ಅವರ ಕ್ಲಾಸಿಗೆಂದೇ ಹೋಗುತ್ತಿದ್ದೆವು. ನಾನ್ಯಾವ ಪಾಪ ಮಾಡಿದ್ದೆ, ಇವತ್ತು ಅವರನ್ನು ನೋಡುವ ಭಾಗ್ಯ ಇಲ್ಲವೆ..? ಇನ್ನೊಂದು ತಾಸಿನಲ್ಲಿ ಅವರ ಪಾಠ ಶುರುವಾಗುತ್ತದೆ. ಆದಷ್ಟು ಬೇಗ ಇನ್ನೊಂದು ಬಸ್ಸ್ ಬಂದ್ರೆ, ಅವರನ್ನು ನೋಡುವ ಅವಕಾಶ ಇದೆ. ಆದರೆ ಬಸ್ಸ್ ಬರಬೇಕಲ್ಲಾ. ಇಷ್ಟೊತ್ತಿಗೆ ಬಸ್ಸ್ ಬರಬಹುದಾ? ಎಲ್ಲಾ ಆ ದೇವರ ಆಟ… ಎಲ್ಲಾ ಮಾಡಿ ಈಗ ಮರೆಯಲ್ಲಿ ನಿಂತಿದ್ದಾನೆ. ಇನ್ನೂ ಏನೆಲ್ಲಾ ನಡೆಯಲ್ಲಿಕ್ಕಿದೆಯೋ ಅವನೇ ಬಲ್ಲ. ಎಲ್ಲಾ ನನ್ನ ಗ್ರಹಚಾರ…!
 ಇವತ್ತು ಯಾರ ಮುಖ ನೋಡ್ಕೊಂಡು ಎದ್ದಿದ್ದೆನೋ, ಬಹುಷಃ ಅಕ್ಕನದ್ದಿರಬೇಕು ಅಥವಾ ಅಪ್ಪನದ್ದಿರಬೇಕು.. ಇಲ್ಲಾ, ನನ್ನ ಮುಖ…? ಛೆ! ಇಲ್ಲ ಇಲ್ಲ, ನನ್ನ ಮುಖ ಅಷ್ಟೊಂದು ಸುಂದರವಾಗಿಲ್ಲದಿದ್ದರೂ, ಗ್ರಹಚಾರ ಕೆಡಿಸುವಂತಹದ್ದಲ್ಲ.
 ಎಷ್ಟು ಹೊತ್ತು ಕಾದರೂ ಬಸ್ಸಿನ ಸುಳಿವೇ ಇಲ್ಲ. ಸ್ವಲ್ಪ ರಿಲ್ಯಾಕ್ಸ್ ಆಗೋಣವೆಂದು ಪಕ್ಕದಲ್ಲಿದ್ದ ಅಂಗಡಿಗೆ ಹೋದೆ. ನನ್ನ ಬ್ರಾಂಡ್‌ನ ಸಿಗರೇಟ್ ಸೇದುತ್ತಾ ಪುನಃ ಬಸ್ಸ್ಸ್ಟಾಂಡ್ ಕಡೆ ತಿರುಗಿದೆ. ಒಂದು ಕ್ಷಣ ಅವಕ್ಕಾಗಿ ನಿಂತೆ. ನನ್ನ ಕಣ್ಣುಗಳಿಂದ ನಂಬಲಿಕ್ಕಾಗಲಿಲ್ಲ. ಒಬ್ಬಳು ಸುಂದರವಾದ ಹತ್ತೊಂಬತ್ತು  ಇಪ್ಪತ್ತು ವಯಸ್ಸಿನ ( ಅಷ್ಟಕ್ಕೂ ಹುಡುಗಿಯರ ವಯಸ್ಸಲ್ಲೇನಿದೆ ) ಹುಡುಗಿ ಬಂದು ಅದೇ ಬಸ್ಸ್ ಸ್ಟಾಂಡ್ ಪಕ್ಕದಲ್ಲಿ ನಿಂತಿದ್ದಳು. ಅವಳ ಆ ಟೈಟ್ ಫಿಟ್ ಜೀನ್ಸ್ ಮತ್ತು ಅದಕ್ಕೆ ಒಪ್ಪುವಂತ ಟಾಪ್, ಆ ಬೆಳ್ಳನೆಯ ಮುಖ, ಬಣ್ಣ ಹಚ್ಚಿದ ಆ ಕೆಂಪು ತುಟಿ, ಜೊತೆಗೆ ಮತ್ತೇರಿಸುವ ಮುಗುಳ್ನಗೆ, ಒಂದು ಕ್ಷಣ ನನ್ನನ್ನು ಹುಚ್ಚನನ್ನಾಗಿಸಿತು. ಅವಳ ಮುಖಕ್ಕೆ ಒಪ್ಪುವಂತ ತಂಪು ಕನ್ನಡಕ ಆ ಸೌಂದರ್ಯವನ್ನು ಇನ್ನೂ ಹೆಚ್ಚಿಸಿತ್ತು. ತಂಪು ಕನ್ನಡಕದೊಳಗಿನ ಆ ನೋಟ ನನ್ನನ್ನು ಅವಳ ಹತ್ತಿರ ಸೆಳೆಯುತ್ತಿತ್ತು. ಬ್ರಹ್ಮ ಈ ಹೆಣ್ಣನ್ನು ರೂಪಿಸಲು ಎಷ್ಟೊಂದು ಸಮಯ ತೆಗೆದುಕೊಂಡಿರಬಹುದಲ್ಲ…! ಪ್ರಪಂಚದ ಎಲ್ಲ ಸೌಂದರ್ಯ ರಾಶಿಯನ್ನು ಇವಳೊಬ್ಬಳಿಗೆ ಕೊಟ್ಟಿದ್ದಾನೆಂದು ಕಾಣುತ್ತದೆ.
 ಸುತ್ತಮುತ್ತ ಯಾರೂ ಇರಲಿಲ್ಲ. ನಾನು, ಮತ್ತೊಂದಷ್ಟು ದೂರದಲ್ಲಿ ಅವಳು. ಇಷ್ಟೊತ್ತು ನನ್ನ ಗ್ರಹಚಾರಕ್ಕೆ ಬೈಯುತ್ತಿದ್ದ ಆ ದೇವರಿಗೆ ಎಷ್ಟು ಧನ್ಯವಾದ ಸಮರ್ಪಿಸಿದರೂ ಸಾಕಾಗುವುದಿಲ್ಲವೆಂದೆನಿಸಿತು. ಇಷ್ಟು ವರ್ಷದ ನನ್ನ ಏಕಾಂಗಿ ಜೀವನ ನೋಡಿ ಅವನಿಗೂ ಬೇಜಾರಾಗಿ ಇವಳನ್ನು ಇಲ್ಲಿಗೆ ಕಳುಹಿಸಿರಬೇಕು. ಇಂತಹ ಅವಕಾಶವನ್ನು ಸದುಪಯೋಗಗೊಳಿಸದಿದ್ದರೆ ನನ್ನಂತಹ ಮುಟ್ಠಾಳ ಬೇರೊಬ್ಬನಿರಲಿಕ್ಕಿಲ್ಲ. ಅಷ್ಟಕ್ಕೂ ನಾನಿರುವ ವಿಷಯ ಅವಳಿಗೆ ಗೊತ್ತಾಗಿದೆಯೋ ಇಲ್ಲವೋ? ಒಂದು ಬಾರಿಯೂ ನನ್ನ ಕಡೆ ನೋಡಲೇ ಇಲ್ಲವಲ್ಲ…! ನಾನಾಗಿಯೆ ಹೋಗಿ ಮಾತಾಡಲೇ ಅಥವಾ ಅವಳಿಗಾಗಿ ಕಾಯಲೆ..! ಸಂದಿಗ್ಧ ಪರಿಸ್ಥಿತಿ ನನ್ನದ್ದಾಗಿತ್ತು.
 ಎರಡು ನಿಮಿಷ ಕಾದು ನೋಡಿದೆ. ಯಾವ ಚಲನೆಯು ಅವಳಿಂದ ಕಾಣಲಿಲ್ಲ. ಇನ್ನು ಕಾದರೆ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲವೆಂದೆನಿಸಿ, ಅವಳ ಹತ್ತಿರ ಹೋದೆ. ಎಷ್ಟಾದರೂ ಹೆಣ್ಣು ಜೀವವಲ್ಲವೇ, ಸ್ವಲ್ಪ ನಾಚಿಕೆ, ಸಂಕೋಚ ಇದ್ದಿರಬೇಕು. ಅದಕ್ಕೇ ಮಾತಾಡಲು ಹಿಂಜರಿಯುತ್ತಿರಬಹುದು.
 ಅಯ್ಯೋ…! ಇದೇ ಹೊತ್ತಿಗೆ ಬಸ್ಸ್ ಬರಬೇಕಾ..! ಇಷ್ಟೊತ್ತು ಇಲ್ಲದವ ಈವಗ್ಯಾಕೆ ಬಂದ? ಈ ಶುಭ ಗಳಿಗೆಯಲ್ಲೂ ನನ್ನ ಗ್ರಹಚಾರ ನನ್ನನ್ನು ಬಿಡಲಿಲ್ಲವೇ? ಧರ್ಮ ಸಂಕಟದಲ್ಲಿ ಸಿಕ್ಕಿಬಿದ್ದೆ. ಬಸ್ಸ್ ಮಿಸ್ಸ್ ಆದ್ರೆ, ರೋಸಿ ಮಿಸ್ ನೋಡುವ ಅವಕಾಶ ಮಿಸ್ಸ್ ಆಗುತ್ತೆ. ಬಸ್ಸ್ ಹತ್ತಿದ್ರೆ ಇವಳತ್ರ ಗೆಳೆತನ ಬೆಳೆಸುವ ಅವಕಾಶ ಕೈ ತಪ್ಪಿ ಹೋಗುತ್ತೆ.! ಕೈಗೆ ಬಂದ ತುತ್ತು ಮತ್ತೊಮ್ಮೆ ಬಾಯಿಗೆ ಬರದಂತಾಗುತ್ತದೆ.
 ಜಾಸ್ತಿ ಯೋಚಿಸದೆ ಹೊಸೊಬ್ಬಳಿಗಾಗಿ ಅಲ್ಲೇ ನಿಂತೆ. ಯಾವ ಜನ್ಮದ ಪುಣ್ಯನೋ, ಬಸ್ಸ್ ನಮ್ಮಿಬ್ಬರನ್ನು ಅಲ್ಲೇ ಬಿಟ್ಟು ಹೋಯಿತು. ಆ ಬ್ರಹ್ಮ ನನಗಾಗಿ ಇನ್ನೊಂದು ಅವಕಾಶ ಕೊಟ್ಟಿದ್ದ. ಕಳೆದುಕೊಳ್ಳಲು ನಾನು ತಯಾರಿರಲಿಲ್ಲ. ಇನ್ನೂ ಎಷ್ಟು ವರ್ಷ ಅಂತ ಇದೇ ರೀತಿ ಒಬ್ಬಂಟಿಯಾಗಿ ಬಾಳಲಿ..! ನನ್ನ ಹೆತ್ತವರಿಗಾಗಿ ಒಬ್ಬ ಸೊಸೆಯನ್ನು ಹುಡುಕುವುದು ನನ್ನ ಜವಬ್ದಾರಿಯಲ್ಲವೇ? ನನ್ನ ಎಲ್ಲಾ ಗೆಳೆಯರು ತಮ್ಮ ತಮ್ಮ ಗೆಳತಿಯರೊಡನೆ ತಿರುಗಾಡುತ್ತಿದ್ದರೆ, ನಾನೊಬ್ಬ ಮಾತ್ರ ಮನೆಯಲ್ಲೇ ಇರುತ್ತಿದ್ದೆ. ನನಗೂ ಆ ತರಹದ ಆಸೆ ಆಕಾಂಕ್ಷೆಗಳು ಇವೆ. ಆದರೆ ಏನು ಮಾಡುವುದು, ಯಾವ ಹುಡುಗಿಯರು ನನ್ನಲ್ಲಿ ಆ ರೀತಿಯ ಪ್ರೀತಿ ಭಾವನೆಯಿಂದ ಗೆಳೆತನ ಬೆಳೆಸಿರಲಿಲ್ಲ.
 ಹಾಂ..! ಅಷ್ಟೊಂದು ಸುಂದರವಾಗಿಲ್ಲದಿದ್ದರೂ, ತಕ್ಕಮಟ್ಟಿಗೆ ಸುಮಾರಾಗಿದ್ದೇನೆ. ಇಪ್ಪತ್ತು ವಯಸ್ಸಿಗೆ, ನಲವತೈದು ಕಿಲೊ ತೂಕವಿದ್ದೇನೆ. ನನ್ನನ್ನು ಬಿಟ್ಟು ಬೇರೆಯವರಿಗೆ ನಾನೊಬ್ಬ ಸಣಕಲು ದೇಹದವನಾಗಿದ್ದೆ. ಅಷ್ಟಕ್ಕೂ ದೇಹ ಬೆಳೆಸಿ ಏನು ಸಾಧಿಸಲಿಕ್ಕಿದೆ? ಎಲ್ಲವೂ ನಮ್ಮ ಒಳಗಿರಬೇಕು. ಅಂದರೆ ನಮ್ಮ ಮನಸ್ಸಿನಲ್ಲಿರಬೇಕು. ಇದು ನನ್ನ ನಂಬಿಕೆ.
 ನಂಬಿಕೆಗಿಷ್ಟು ಬೆಂಕಿ ಹಾಕ.! ಇನ್ನೂ ಹೆಚ್ಚು ಯೋಚಿಸುತ್ತ ಕೂತರೆ ಇನ್ನೊಂದು ಬಸ್ಸ್ ಬಂದು ಅವಳನ್ನು ಕರ್ಕೊಂಡು ಹೋಗಬಹುದು. ಮೊದಲೇ ನನ್ನ ಈ ದಿನದ ಗ್ರಹಚಾರ ಬಹಳ ಚೆನ್ನಾಗಿತ್ತು, ಅದು ಇನ್ನೂ ಕೆಟ್ಟೋಗೋದಕ್ಕೆ ಮೊದಲೇ ಇವಳತ್ರ ಹೋಗಿ ಮಾತಾಡಬೇಕು. ಮಾತಾಡಿ ಗೆಳೆತನ ಬೆಳೆಸಬೇಕು. ಗೆಳೆತನ ಮದುವೆಯಲ್ಲಿ ಮುಕ್ತಾಯಗೊಳಿಸಬೇಕು. ಆಮೇಲೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳು.
 ನನ್ನ ಕನಸುಗಳೆಲ್ಲಾ ಅವಳ ಆ ಒಂದು ಮುಗುಳ್ನಗೆಗೆ ನಿಂತು ಹೋಯಿತು. ಅವಳಿಗೆ ನಾನಲ್ಲಿರುವ ವಿಷಯ ಗೊತ್ತಾಯಿತೆಂದು ಕಾಣುತ್ತದೆ. ಅವಳ ಆ ಮುಗುಳು ನಗೆ ನನ್ನನ್ನು ಕರಗಿಸಿತ್ತು. ನಾನೂ ನಗುತ್ತಲೇ ಅವಳ ಹತ್ತಿರ ಹೋದೆ.
                “ ಹೈ, ನಾನು ರೂಪ್, ಇಲ್ಲೇ ಪಕ್ಕದ ಬೀದಿಯಲ್ಲಿ ಮನೆ. ಎರಡನೆ ವರ್ಷದ ಎಂ.ಎಸ್ಸಿ. ಮಾಡುತ್ತಿದ್ದೇನೆ. ಇವತ್ತು ಕಾಲೇಜಿಗೆ ಲೇಟಾಯಿತು, ಅದಕ್ಕೇ ನಿಮ್ಮ ಭೇಟಿ ಆಗುವ ಅವಕಾಶ ಸಿಕ್ಕಿತು. ಇಷ್ಟು ದಿನ ಬೇಗ ಹೋಗುತ್ತಿದ್ದೆನಲ್ಲ, ಅದಕ್ಕೆ ನಿಮ್ಮನ್ನು ನೋಡಿರಲಿಲ್ಲ. ಇದೇ ಮೊದಲ ಬಾರಿ ನೋಡುತ್ತಿದ್ದೇನೆ” ಇನ್ನೂ ಏನೇನೋ ಹೇಳಬೇಕೆನಿಸಿತು. ಆದರೆ ನನ್ನ ಬಾಯಿ ನನ್ನ ಮನಸ್ಸಿಗೆ ಸಹಕರಿಸಲಿಲ್ಲ. ಮನಸ್ಸಿನ ಮಾತು ಮನಸ್ಸಲ್ಲೇ ಉಳಿಯಿತು.
 ಕೊನೆಗೂ ಧೈರ್ಯ ಮಾಡಿ ಅವಳ ಹತ್ತಿರ ಬಂದು, “ ಹೈ, ಹೆಲೊ, ನಾನು…” ಅಷ್ಟಕ್ಕೇ ಮಾತು ನಿಂತು ಹೋಯಿತು. ನನ್ನ ಮಾತು ಕೇಳಿ ಅವಳು “ ನಮಸ್ತೆ ಅಣ್ಣಾ, ನನ್ನನ್ನು ಸ್ವಲ್ಪ ಆ ಬಸ್ಸ್ಡ್ ಸೀಟ್ ತನಕ ಕರ್ಕೊಂಡು ಹೋಗ್ತೀರಾ? ನನಗೆ ಕಣ್ಣು ಕಾಣುವುದಿಲ್ಲ… ದಿನಾ ನನ್ನ ಗಂಡ ಬಂದು ಬಿಟ್ಟು ಹೋಗುತ್ತಿದ್ದರು. ನಿನ್ನೆಯಿಂದ ಅವರಿಗೆ ಜ್ವರ. ಅದಕ್ಕೆ ಬರಲಿಲ್ಲ. ದೇವರ ಹಾಗೆ ಬಂದಿದ್ದೀರ, ದಯವಿಟ್ಟು ಅಲ್ಲಿ ತನಕ …”
 ಅವಳ ಮಾತು ಮುಂದುವರಿದಿತ್ತು. ಆದರೆ ಅವಳ ಬಾಯಿಂದ ಬಂದ “ಅಣ್ಣಾ” ಎಂಬ ಮಾತು ಕೇಳಿ ಅಷ್ಟೂ ಹೊತ್ತು ನಮ್ಮಿಬ್ಬರ ಬಗ್ಗೆ ಕಟ್ಟಿದ್ದ ಕನಸೆಲ್ಲಾ ನುಚ್ಚು ನೂರಾಯಿತು. ದೇವರು ಒಳ್ಳೆಯದು ಮಾಡುತ್ತಾನಂತೆ..! ಬೆಳಗ್ಗೆಯಿಂದ ಅವನು ಕೊಟ್ಟಂತಹ ಒಳ್ಳೆಯ ಕ್ಷಣ ನೋಡಿ ನೋಡಿ ಸಾಕಾಯಿತು. ಒಂದರ ಹಿಂದೆ ಒಂದು ಪೆಟ್ಟು ಕೊಡುತ್ತಲೇ ಬಂದಿದ್ದಾನೆ. ಯಾಕಾದ್ರೂ ಇಂತಹ ದಿನವನ್ನು ನನ್ನ ಜೀವನದಲ್ಲಿ ಬರೆದಿದ್ದಾನೋ..!
 ಅವಳ ಮಾತುಗಳನ್ನು ಕೇಳಿ, ನಾನು ನನ್ನ ಗಂಡನ ಸ್ಥಾನವನ್ನು ಬಿಟ್ಟು ಅಣ್ಣನ ಸ್ಥಾನದಲ್ಲಿ ನಿಂತೆ. ಈಗ ತಾನೇ ಹುಟ್ಟಿದ್ದ ಆರತಿ – ಕೀರ್ತಿ ಮಕ್ಕಳಿಬ್ಬರಿಗೆ ಮಾವನಾಗಿ ಬಿಟ್ಟಿದ್ದೆ. ಮೊದಲೇ ನಮ್ಮದು ಪರೋಪಕಾರದ ಜೀವ…! ಇಂತಹ ಕೆಲಸಗಳಿಗಾಗಿಯೇ ಈ ಜೀವವನ್ನು ಸೃಷ್ಟಿಸಿದ್ದಾನೆಂದು ಕಾಣುತ್ತದೆ. ಕೊನೆಗೂ ಒಬ್ಬ ಅಣ್ಣನಂತೆ ಅವಳನ್ನು ಬಸ್ಸ್ ಸ್ಟಾಂಡ್‌ನಲ್ಲಿ ಬಿಟ್ಟು ಬಂದೆ.

***

 ಮದುವೆಯಾದವರೆಲ್ಲಾ ಯಾಕೆ ಹಾಗೆ ಇರುತ್ತಾರೆ? ಸುಂದರವಾಗಿರುವವರೆಲ್ಲ ಇಷ್ಟು ಬೇಗ ಮದುವೆಯಾದರೆ ನಮ್ಮಂಥವರ ಗತಿಯೇನು? ನಮಗೂ ಆಸೆ ಆಕಾಂಕ್ಷೆಗಳು ಇರುತ್ತದೆ. ನಮಗೂ ನಮ್ಮ ಹೆಂಡತಿ ಹೀಗೆಯೇ ಇರಬೇಕೆಂಬ ಕನಸುಗಳಿರುತ್ತವೆ. ಯಾಕೆ ಇಂತವರು ನಮ್ಮ ಜೀವನದಲ್ಲಿ ಬಂದು, ಒಂದೈದು ನಿಮಿಷ ಕನಸು ಕಟ್ಟಿ, ಆಮೇಲೆ ಅದನ್ನೇ ಒಡೆದು ಹೋಗುತ್ತಾರೆ? ಇನ್ನೂ ಎಷ್ಟು ವರುಷ ಹೀಗೆಯೇ ಬೇರೆಯವರ ಅಣ್ಣನಾಗಿ ಬದುಕಲಿ. ನಮ್ಮ ಜೀವನದ ಶಬ್ದಕೋಶದಲ್ಲಿ ಈ ಗೆಳೆಯ, ಪ್ರೇಮಿ, ಗಂಡ ಎನ್ನುವ ಪದಗಳೇ ಇಲ್ಲವೇ? ಆ ದೇವರು ಇದನ್ನೆಲ್ಲಾ ನನ್ನ ಲೈಫಲ್ಲಿ ಬರೆಯಲಿಕ್ಕೆ ಮರೆತು ಹೋದನೇ?
 ಬಂದ ದಾರಿಗೆ ಸುಂಕವಿಲ್ಲವೆಂದು, ಆಗಲೆ ಬಂದ ಬಸ್ಸ್ ಏರಿ ಕಾಲೇಜ್ ಸೇರಿದೆ. ನಿಜವಾಗಿಯೂ ಈ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನವಾಗಿತ್ತು. ಇವತ್ತಿನ ದಿನವೇ ನನ್ನ ಎಲ್ಲಾ ಕೆಟ್ಟ ಗ್ರಹಗಳು ಒಂದರ ಹಿಂದೆ ಒಂದರಂತೆ ಬಂದು ಬಡಿದಿದ್ದವು.
 ಸಪ್ಪೆ ಮುಖ ಮಾಡಿ ಸೀದಾ ಕ್ಲಾಸ್ ರೂಮ್ ಸೇರಿದೆ. ಮನದಲ್ಲೇ ಈ ದಿನಕ್ಕಾಗಿ, ಈ ದಿನವನ್ನು ನನ್ನ ಜೀವನದಲ್ಲಿ ಸೇರಿಸಿದವರಿಗಾಗಿ ಶಾಪ ಹಾಕುತ್ತಾ, ಕ್ಲಾಸ್‌ನ ಕೊನೆಯ ಬೆಂಚಲ್ಲಿ ಹೋಗಿ ಕುಳಿತೆ. ಗೆಳೆಯರೆಲ್ಲಾ ಕ್ಲಾಸಲ್ಲಿ ಯಾರದ್ದೋ ಬರ್ತ್ ಡೇ ಸಲೆಬ್ರೇಷನ್ ಪದ್ಯ ಹೇಳ್ಕೊಂಡು ಗಲಾಟೆ ಮಾಡುತ್ತಾ ಇದ್ರು. ನನಗಂತೂ ಮೂಡೇ ಹೋಗಿತ್ತು. ಬೆಳಗ್ಗೆಯಿಂದ ನಡೆದ ಒಂದೊಂದು ಘಟನೆಯೂ ನನ್ನ ಮನಸ್ಸನ್ನ ಕುಕ್ಕುತ್ತಿತ್ತು. ಇಂತಹುದರ ನಡುವೆ, ಅವನ್ಯಾವನದೋ ಹುಟ್ಟಿದ ದಿನ ಆಚರಿಸಲು ನನ್ನ ಮನಸ್ಸು ಸಹಕರಿಸುತ್ತಿರಲಿಲ್ಲ. ಇಂತಹ ಕೆಟ್ಟ ದಿನದಲ್ಲೂ ಯಾರದ್ರೂ ಹುಟ್ಟುತ್ತಾರಾ..! ನಿಜವಾಗಿಯೂ ಅವನ ಗ್ರಹಚಾರವೂ ನನ್ನ ತರಹ ಸರಿ ಇರಲಿಕ್ಕಿಲ್ಲವೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲೆ ನನ್ನ ಗೆಳೆಯ ಬಂದು “ಹುಟ್ಟು ಹಬ್ಬದ ಶುಭಾಶಯಗಳು ರೂಪ್” ಎಂದು ಹೇಳಿ ಹೋಗಬೇಕೇ…!


Leave a Reply

Back To Top