“ಮಾನವತಾವಾದಿಯ ಜೀವಪರ ಕನಸು” ವಿಶೇಷ ಲೇಖನ-ಮೇಘ ರಾಮದಾಸ್‌ ಜಿ

 “ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ”
ಡಾ. ಬಿ. ಆರ್‌. ಅಂಬೇಡ್ಕರ್‌
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 76 ವಸಂತಗಳು ಕಳೆದರೂ ಸಹಾ “ಅಸ್ಪೃಶ್ಯತೆ” ಎನ್ನುವ ದೊಡ್ಡ ಪಿಡುಗು ಇನ್ನೂ ಭಾರತವನ್ನು ಬಿಟ್ಟು ತೊಲಗಿಲ್ಲ. ಇಂದಿಗೂ ಜಾತಿ ಕಲಹಗಳು, ಅಸ್ಪೃಶ್ಯತೆ ಆಚರಣೆಗಳು, ಮರ್ಯಾದಾ ಗೇಡು ಹತ್ಯೆಗಳು ಹೀಗೆ ಜಾತಿಯ ಆಧಾರದ ಮೇಲೆ ಸಾಕಷ್ಟು ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ನಮ್ಮ ದೇಶ ’ಸರ್ವ ಧರ್ಮಗಳ ಶಾಂತಿಯ ತೋಟ’, ದೇಶದಲ್ಲಿ ಜಾತಿ ಎನ್ನುವುದು ಒಂದು ವೈಭವ, ವೈಶಿಷ್ಟ್ಯದ ವಿಚಾರ. ಜಾತಿಗಳಲ್ಲಿ ಬೇಧಭಾವದ ತೆರೆ ಸರಿಸಿ ನೋಡಿದಾಗ ಪ್ರತಿಯೊಂದು ಜಾತಿಯಲ್ಲಿಯೂ ಇರುವ ಒಂದೊಂದು ಶ್ರೇಷ್ಠತೆ ಎದ್ದು ಕಾಣುತ್ತದೆ ಮತ್ತು ಅರ್ಥವಾಗುತ್ತದೆ. ಆದರೆ ಮನುಷ್ಯರು ಒಳಿತಿನ ಬದಲಿಗೆ ಕೆಟ್ಟದಕ್ಕೆ ಬೇಗ ಆಕರ್ಷಿತರಾಗುತ್ತಾರೆ. ಹಾಗಾಗಿ ಶ್ರೇಷ್ಠತೆಯ ಹುಡುಕಾಟದ ಬದಲಿಗೆ, ದ್ವೇಷ, ಅಸೂಯೆ, ಕೋಪ, ಅಸಮಾನತೆ, ಅಹಂಕಾರಗಳೆಂಬ ವಿಷಗಳನ್ನು ಸವಿ ಜೇನು ಎಂಬ ಭ್ರಮೆಯಲ್ಲಿ ಸೇವಿಸಿ ವ್ಯಸನಿಯಾಗುತ್ತಾರೆ.
ಈ ಎಲ್ಲಾ ವಿಷಗಳು ಮನುಷ್ಯರನ್ನು ಮಾತ್ರ ಸಾಯಿಸದೇ ಸಮಾಜದ ಹೃದಯದ ಸ್ವಾಸ್ತ್ಯವನ್ನೇ ಹಾಳುಮಾಡಿ ರೋಗ ತಂದೊಡ್ಡುತ್ತವೆ. ಇದು ಆಗಬಾರದು ಎನ್ನುವ ಕಾರಣಕ್ಕೆ ಸ್ವಾತಂತ್ರ್ಯದ ನಂತರ ಡಾ.ಬಿ.ಆರ್‌.ಅಂಬೇಡ್ಕರ್‌ರವರ ನೇತೃತ್ವದಲ್ಲಿ ಹಲವಾರು ಮೇಧಾವಿಗಳು, ಜ್ಞಾನಿಗಳು ಇದ್ದಂತಹ ರಚನಾ ಸಮಿತಿಯು ನಮ್ಮ ದೇಶಕ್ಕೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುವ ಒಂದು ಜೀವನಕ್ರಮವನ್ನು “ಸಂವಿಧಾನ” ಎಂಬ ಹೆಸರಿನಲ್ಲಿ ರೂಪಿಸಿದರು. ಈ ಸಂವಿಧಾನದ ಮುಖ್ಯ ಆಶಯವೇ ಸಮಾನತೆ, ಬಂಧುತ್ವ, ನ್ಯಾಯ, ಸ್ವಾತಂತ್ರ್ಯಗಳಾಗಿವೆ. ಎಲ್ಲಾ ಪರಿಸರದತ್ತವಾದ ಹಕ್ಕುಗಳು ಎಲ್ಲರಿಗೂ ಸಿಗಬೇಕು ಎನ್ನುವ ಮೂಲ ಉದ್ದೇಶವನ್ನು ಈ ಸಂವಿಧಾನ ಹೊಂದಿದೆ. ಪರಿಸರದ ಎಲ್ಲಾ ಜೀವರಾಶಿಗಳನ್ನೂ ಒಳಗೊಂಡಂತೆ ಶೋಷಿತ ಸಮುದಾಯಗಳಿಗೆ, ಮಹಿಳೆಯರಿಗೆ, ತುಳಿತಕ್ಕೆ ಒಳಗಾದವರಿಗೆ, ಅಸಹಾಯಕರಿಗೆ ಎಲ್ಲಾ ಮಾನವ ಹಕ್ಕುಗಳು ಮತ್ತು ಪರಿಸರದ ಎಲ್ಲಾ ಸಂಪನ್ಮೂಲಗಳು ಸಮಾನವಾಗಿ ಯಾವುದೇ ಅಡ್ಡಿಯಿಲ್ಲದೆ ಸಿಗಬೇಕು ಎನ್ನುವ ಮಹಾ ಇಚ್ಛೆಯಿಂದ ಬಾಬಾ ಸಾಹೇಬರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾದರು.
ಇದಷ್ಟೇ ಅಲ್ಲದೆ ಸ್ವತಂತ್ರ್ಯ ಪೂರ್ವದಲ್ಲಿ ಎಲ್ಲಾ ಹೋರಾಟಗಾರರು ಸ್ವತಂತ್ರ್ಯಕ್ಕಾಗಿ ಸತ್ಯಾಗ್ರಹ, ಕ್ರಾಂತಿ, ಚಳುವಳಿಗಳನ್ನು ನಡೆಸಿದರೆ, ಬಾಬಾ ಸಾಹೇಬರು ಈಗ ಇರುವ ಬ್ರಿಟೀಷರು ದೇಶ ಬಿಟ್ಟು ಹೋದ ಮೇಲೆ ನಮ್ಮ ದೇಶದ ಯಾರೋ ಮೇಲ್ಸ್ಥರದ ಜನರು ದೇಶವನ್ನು ಆಳತೊಡಗಿದರೆ ಶೋಷಿತ ಸಮುದಾಯಗಳಿಗೆ ಯಾವುದೇ ಸ್ವಾತಂತ್ರ್ಯ ಸಿಗದೇ ಮತ್ತದೇ ಕೂಪದಲ್ಲಿ ಬೆಂದು ಸೊರಗಬೇಕಾಗುತ್ತದೆ. ಆದ್ದರಿಂದ ನೆಲಮೂಲ ಸಮುದಾಯಗಳಿಗೆ ಬೇಕಿರುವ ಸ್ವಾತಂತ್ರ್ಯವೇ ಬೇರೆಯದ್ದಾಗಿದೆ. ಭೂಮಿಯಲ್ಲಿ ಸ್ವಚ್ಛಂದವಾಗಿ ಓಡಾಡುವ ಅವಕಾಶ, ಕೆರೆನದಿಗಳ ನೀರನ್ನು ಬಳಸುವ ಅವಕಾಶ, ಶಿಕ್ಷಣ ಪಡೆಯುವ ಅವಕಾಶ, ರಾಜಕೀಯ ಪಾಲ್ಗುಳ್ಳುವಿಕೆಯ ಅವಕಾಶ, ಮತ ಚಲಾಯಿಸುವ ಅವಕಾಶಗಳಂತಹ ಮಾನವೀಯ ಹಕ್ಕುಗಳನ್ನು ನೀಡಿದಾಗ ಮಾತ್ರ ಅವರಿಗೆ ನಿಜವಾದ ಸ್ವತಂತ್ರ್ಯ ಸಿಗುತ್ತದೆ ಎಂಬ ದೊಡ್ಡ ಹೋರಾಟ ಕಟ್ಟಿದರು. ಈ ಹೋರಾಟ ಸಾಕಾರಗೊಂಡಿದ್ದು 1950ರಲ್ಲಿ ಸಂವಿಧಾನ ಜಾರಿಗೊಂಡಾಗ. ಆದರೆ ಇಂದಿಗೂ ಬಾಬಾ ಸಾಹೇಬರ ಆಶಯ ಎಲ್ಲೋ ಒಂದು ಕಡೆ ಸಂಪೂರ್ಣವಾಗಿ ಈಡೇರಿಲ್ಲ ಎನ್ನುವುದೇ ದುಃಖದ ಸಂಗತಿ. ತನ್ನ ಇಡೀ ಜೀವನವನ್ನೇ ದಮನಿತರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್‌ ವ್ಯಕ್ತಿತ್ವದ ಶ್ರಮಕ್ಕೆ ಜಯ ಸಿಗಬೇಕಾದರೆ ಆ ಹೋರಾಟದ ಫಲಾನುಭವಿಗಳಾದ ನಾವುಗಳು ಅವರ ಆಶಯಕ್ಕೆ ಕೈಜೋಡಿಸಬೇಕಿದೆ. ಶೋಷಿತ ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡಿದರೆ, ಧ್ವನಿಯೆತ್ತಿದರೆ, ಇತರ ಸಮುದಾಯಗಳು ಅವರ ಬೆನ್ನಿಗೆ ನಿಲ್ಲುವ ತುರ್ತು ಎದುರಾಗಿದೆ. ಎಲ್ಲರು ಸಂವಿಧಾನ ನೀಡಿರುವ ಹಕ್ಕು, ಕಾನೂನುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮನ್ನು ತಾವು ಸುಭದ್ರಗೊಳಿಸಿಕೊಳ್ಳಬೇಕಿದೆ. ಏಕೆಂದರೆ ಪ್ರತೀ ಬಾರಿಯೂ ಯಾರೋ ಬಂದು ನಮ್ಮನ್ನು ಉದ್ಧಾರ ಮಾಡಲಿ ಎಂದು ಕಾಯುವ ಬದಲು ನಾವೇ ನಾಲ್ಕು ಜನರನ್ನು ಬೆಳೆಸುವ ಎತ್ತರಕ್ಕೆ ಬೆಳೆಯಬೇಕಿದೆ. ಇದು ಎಲ್ಲದಕ್ಕಿಂತ ದೊಡ್ಡ ಆತ್ಮಶಕ್ತಿ ನೀಡುತ್ತದೆ. ಇದನ್ನೇ ಬಾಬಾ ಸಾಹೇಬರು ಸಹಾ ಬಯಸಿದ್ದು.  
ಈ ಬಾರಿಯ ಬಾಬಾ ಸಾಹೇಬರ 133ನೇ ಜನ್ಮದಿನವನ್ನು ಆರಂಭವೆಂದು ಪರಿಗಣಿಸಿ ಸಂವಿಧಾನವನ್ನು ಅರ್ಥೈಸಿಕೊಂಡು, ಬಳಸಿ, ಬೆಳೆಸಲು ಮುಂದಾಗೋಣ. ಈ ದಿನವನ್ನು ಹಲವೆಡೆ ’ಸಮಾನತೆಯ ದಿನ’ ಎಂದು ಆಚರಿಸುತ್ತಾರೆ. ಇದರ ಜೊತೆಗೆ ಬಾಬಾ ಸಾಹೇಬರ ಜಯಂತಿಯೂ ಪ್ರಪಂಚದಲ್ಲೇ ಅತಿ ದೊಡ್ಡ ಜಯಂತಿ ಎಂಬ ಗೌರವ ಪಡೆದಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಹಾ ಈ ದಿನವನ್ನು ಅದ್ದೂರಿಯಾಗಿ ಹೆಮ್ಮೆಯಿಂದ ಸಂಭ್ರಮಿಸುತ್ತಾರೆ. ಹೀಗಿರುವಾಗ ಅವರ ಆಶಯವಾದ ಸಮ ಸಮಾಜವನ್ನು ಕಟ್ಟಲು ಎಲ್ಲರೂ ಅವರ ಹಾದಿಯಲ್ಲಿ ಸಾಗಬೇಕಿದೆ. ಇದು ಇಂದಿನ ದೇಶದ ಪರಿಸ್ಥಿತಿಯಲ್ಲಿ ಅನಿವಾರ್ಯವೂ ಸಹಾ ಆಗಿದೆ.

—————————–

Leave a Reply

Back To Top