ಕಾವ್ಯ ಸಂಗಾತಿ
ಇಂದಿರಾ.ಕೆ
‘ಈ ಬಾಳ ಪಯಣ’
ಈರನ್ನೆರಡು ಸಂವತ್ಸರಗಳು ದಾಟಿತು
ಈ ಬಾಳ ಪಯಣ
ಸುಮಧುರ ನೆನಪುಗಳ ಮೆಲುಕು ಹಾಕಿತು
ಈ ಪ್ರೇಮ ಪರಿಣಯ…
ಆಗಾಗ ಜಗಳ – ಕಾದಾಟ
ಒಂದಿಷ್ಟು ಕೋಪ
ಒಂಚೂರು ಮುನಿಸು
ಒಮ್ಮೊಮ್ಮೆ ಮೌನ
ಮಗದೊಮ್ಮೆ ಸಲಿಗೆ
ಅಧರದೀ ಹಾಗೇ ಸಣ್ಣ ಕಿರುನಗೆ
ಬದುಕಿನ ಎಲ್ಲ ಜವಾಬ್ದಾರಿಗಳು
ಬಹಳ ಹಗುರ ನೀ ಜೊತೆಗಿರಲು
ಪ್ರತಿ ಗೆಲುವಿನ ಸೋಪಾನ ನೀನಾಗಿರಲು…
ದಾಂಪತ್ಯದ ಯಾನ ಸಾಗಿತು
ನೋವು – ನಲಿವುಗಳ ಜೊತೆ
ಸರಸ – ವಿರಸಗಳ ಜೊತೆ…
ಏಳು – ಬೀಳುಗಳಲ್ಲಿ ಜೊತೆ ಸಾಗುವ ಸಾಮರಸ್ಯವಿರಲು
ಯಾವ ಭಯವು ಆವರಿಸದು
ನಿನ್ನ ಸಾಂಗತ್ಯವಿರಲು
ಬದುಕಿನ ಬಂಡಿ ಸಾಗಿತು
ಆಸೆ – ನಿರಾಸೆಗಳ ಜೊತೆ
ಮಮತೆ – ವಾತ್ಸಲ್ಯದ ಜೊತೆ…
ಎಲ್ಲ ಕಷ್ಟಗಳಲೂ ಸುಖ ಕಾಣುವೆ
ನಿನ್ನ ಸಾಮೀಪ್ಯವಿರಲು
ಪ್ರತಿ ರಾಗದಲು ನಿನ್ನ ಪ್ರೇಮದೊಲವಿನ
ಸಾಹಿತ್ಯವಿರಲು
ಬದುಕು – ಬವಣೆ ಸಾಗಿತು
ಪ್ರೀತಿ – ವಿಶ್ವಾಸಗಳ ಜೊತೆ
ನಂಬಿಕೆ – ಭರವಸೆಗಳ ಜೊತೆ…
ಈ ಅನುಬಂಧವು ಬೆಸೆಯಿತು
ಬೆಸುಗೆ
ಈ ಮಧುರ ಸಂಬಂಧಕೆ ಬೇರಿಲ್ಲ ಹೋಲಿಕೆ
ನಿಜ ಅರಿತು ಬಾಳಿದರೆ
ಬದುಕೆಲ್ಲ ಹೂನಗೆ
ಅದುವೇ ಸಮಂಜಸ ಹೊಂದಾಣಿಕೆ….
—————————
ಇಂದಿರಾ.ಕೆ