ದಿನಕ್ಕೊಂದು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.

ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ.

      ಶರಣೆ ಅಕ್ಕಮಹಾದೇವಿ

*********

ಅಪ್ಪ ಬಸವಣ್ಣನವರ ನೇತೃತ್ವದಲ್ಲಿ ಉದಯಿಸಿದ ಆಧ್ಯಾತ್ಮಿಕ ಬೆಳಕಿನ ಪ್ರಭೆಗೆ ಪ್ರಭಾವಿತರಾಗಿ  ಜಗಜ್ಯೋತಿ ಬಸವೇಶ್ವರರ  ಶರಣ ಸಾಂಗತ್ಯ ಬಯಸಿ ನಾಡಿನ ಮೂಲೆ ಮೂಲೆಗಳಿಂದ ಜನರು ಸಾಗರೋಪ ಸಾಗರವಾಗಿ ಹರಿದು ಬಂದರು.

               ವ್ಯಕ್ತಿಯ ಅಂತರಂಗ ಬಹಿರಂಗಗಳೆರಡರಲ್ಲಿಯೂ ಸುಖದ ಫಲ ಪ್ರಾಪ್ತಿ ದೊರೆಯಬೇಕಾದರೆ  ‘ಸಂಗ ಸಹವಾಸ ‘ ಬಹಳ ಮುಖ್ಯವಾದುದು. ಪರಮ ಸುಖಕ್ಕೆ ಎಂಥವರ ಸಂಗ ಬೇಕು ಎಂಬುದನ್ನು ವಚನ ಸ್ಪಷ್ಟಪಡಿಸುತ್ತದೆ.

ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.

     ಎರಡು ವಸ್ತುಗಳ ಕೂಡುವಿಕೆಯ ಮೂಲಕ ನಡೆಯುವ ಘರ್ಷಣೆಯ ಸಹವಾಸದಿಂದ ಬೆಂಕಿ ಹುಟ್ಟುತ್ತದೆ.  ಬೆರೆಯುವಿಕೆಯ ಸಂಗವಿಲ್ಲದಿದ್ದರೆ ಬೆಂಕಿ ಎಂದಿಗೂ ಹುಟ್ಟಲಾರದು. ಅದೇ ರೀತಿ ಬೀಜವೊಂದು ಮೊಳಕೆ ಒಡೆಯಬೇಕಾದರೆ ಅದಕ್ಕೆ ಮಣ್ಣು ನೀರಿನ ಸಹವಾಸ ಸೇರುವಿಕೆ ಬೇಕೇ ಬೇಕು. ಮೊಳಕೆಯೊಡೆದ ನಂತರ ಗಾಳಿ ಬೆಳಕುಗಳ ಸಂಗವೂ ಬೇಕಾಗುತ್ತದೆ.  ಹೂವೊಂದು  ಅರಳಬೇಕಾದರೂ ಸಂಗ ಬೇಕೇ ಬೇಕು.

ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು
ಪರಮಸುಖಿಯಾದೆನಯ್ಯಾ.

ಹೀಗೆ ನಿಸರ್ಗದ ಚರಾಚರ ವಸ್ತುಗಳು ಸಂಗ ಸಹವಾಸ ಮಾಡದಿದ್ದರೆ ಸೃಷ್ಟಿಯ ಬೆಳವಣಿಗೆ ಕುಂಠಿತವಾಗಿ ಸರ್ವನಾಶಕ್ಕೆ ದಾರಿ ಮಾಡಿಕೊಡುತ್ತದೆ.
 ಕಾರಣ ಸಕಲ ಸುಖ ಸಂತೋಷಗಳು ಮೂಡಿ ಬರಬೇಕಾದರೆ ಸಂಗ ಅವಶ್ಯಕ  ಓ ! ಚೆನ್ನಮಲ್ಲಿಕಾರ್ಜುನನೇ ನಿಮ್ಮ ಮಹಾನುಭಾವಿಗಳ ಶರಣರ ಸಂಗದಿಂದ ನಾನು ಪರಮಸುಖಿಯಾದನೆಂದು ಅಕ್ಕಮಹಾದೇವಿ ಕೃತಜ್ಞತೆ ಅರ್ಪಿಸುತ್ತಾರೆ.

       ಅಕ್ಕಮಹಾದೇವಿಯ ಈ ವಚನ ಪರಮ ಸುಖಿಯಾಗುವ ಬಗೆಯನ್ನು ಒಂದೆರಡು ಉದಾಹರಣೆಗಳ ಮೂಲಕಮನಗಾಣಿಸುತ್ತದೆ.  ಮಾನವನ ಸುಖ ದುಃಖಗಳಿಗೆ ಸಂಗದ ಪಾತ್ರ ತುಂಬಾ ಮಹತ್ವದ್ದಾಗಿದೆ ಸತ್ಸಂಗವಾದರೆ ಸುಖವೂ ,ದು:ಸಂಗವಾದರೆ ದುಃಖವವೂ ಪ್ರಾಪ್ತಿಯಾಗುತ್ತದೆ.  ನಿಸರ್ಗದ ಮಡಿಲಲ್ಲಿ ನಿತ್ಯ ನಡೆಯುತ್ತಿರುವ ಸಂಗ ಸಹವಾಸದ ಕ್ರಿಯೆಯ ಘಟನೆಗಳ ಮೂಲಕ ನಮ್ಮ ಸಂಗ ಯಾರೊಂದಿಗೆ ಹೇಗಿರಬೇಕೆಂಬುದನ್ನು ವಿವರಿಸುತ್ತಾ ವಚನ ಮುಂದಕ್ಕೆ ಸಾಗುತ್ತದೆ .

  ಅಗ್ನಿಯ ಉಗಮಕ್ಕೆ ಸಂಗ  ಬೇಕು,
ಬೀಜ ಮೊಳಕೆ ಒಡೆಯಲಿಕ್ಕೆ ಸಂಗ ಬೇಕು,
ಹೂವು  ಅರಳುವುದಕ್ಕೆ ಸಂಗ ಬೇಕು,


ಕ್ರಿಯೆ ಮತ್ತು ಸಂಗಗಳು ಜೊತೆ ಜೊತೆಯಾಗಿಯೇ ಹೋಗುವಂತವುಗಳಾಗಿವೆ, ಒಂದನ್ನು ಬಿಟ್ಟು ಮತ್ತೊಂದರ ಅಸ್ತಿತ್ವವೂ ಇರದು. ವಚನದಲ್ಲಿ ಉಲ್ಲೇಖಿಸಿದ ಮೂರು ಉದಾಹರಣೆಗಳು ಅಪ್ಪಟ ವೈಜ್ಞಾನಿಕ ತತ್ವವನ್ನೊಳಗೊಂಡ ಕ್ರಿಯೆಗಳಾಗಿವೆ.  ಇವೆಲ್ಲ ಬಾಹ್ಯ ಲೋಕಕ್ಕೆ ಸೇರಿದ್ದು, ಪ್ರಾಯೋಗಿಕವಾಗಿ ನಮ್ಮ ಅನುಭವಕ್ಕೆ ಬರುವಂತಹುಗಳಾಗಿವೆ. ಹೀಗೆ ಬಹಿರಂಗದಲ್ಲಿ ನಿಸರ್ಗದ ಮಡಿಲಲ್ಲಿ ನಡೆಯುವ ಸಂಗ ಹಾಗೂ ಅದರ ಪ್ರತಿಫಲಗಳನ್ನು ಮನವರಿಕೆ ಮಾಡುವ ವಚನವು ಅಂತರಂಗದಲ್ಲಿಯೂ ಸಂಗವನ್ನು ಮಾಡಿದರೆ ಸುಖ ನೆಮ್ಮದಿ  ಖಂಡಿತ ದೊರೆಯುತ್ತದೆ.  ಆ ಸಂಗ ಹೇಗಿರಬೇಕು? ಯಾರ ಜೊತೆಗಿರಬೇಕು? ಎಂಬ ಸಂದೇಹಗಳಿಗೆ,  ‘ ನಿಮ್ಮ ಮಹಾನುಭವಿಗಳ ಸಂಗದಿಂದಲಾನು ಪರಮಸುಖಿಯಾದೆನಯ್ಯ’ ಎಂಬ ಶರಣೆ ಅಕ್ಕಮಹಾದೇವಿಯವರ ನುಡಿ ಸಮಾಧಾನ ನೀಡುತ್ತದೆ.

ಸಜ್ಜನರ ಸಂಗ ಹೆಜ್ಜೇನು ಸವಿದಂತೆ

      ಅಮೂರ್ತವೂ  ಅನುಭಾವವೇದ್ಯವೂ ಆದ ಸುಖವೆಂಬುದು ಅಂತರಂಗಕ್ಕೆ ಸಂಬಂಧಿಸಿದ್ದು. ಅದರ ಅನುಭೂತಿ ಆತ್ಮನುಭೂತಿಯಿಂದ ಮಾತ್ರ ಸಾಧ್ಯ.  ಈ ಆತ್ಮಾನುಭೂತಿಗೆ ಸಜ್ಜನರ, ಸಂತರ,ಶರಣರ ಮಹಾನುಭಾವಿಗಳ ಸಂಗ ಸಹವಾಸ ಅತ್ಯವಶ್ಯ. ಆತ್ಮ ಸಾಧನೆಯ ಅನುಭವದ ನುಡಿಗಳನ್ನು ಅವುಚಿಕೊಂಡು ಸತ್ಯ ಶುದ್ಧ ಮನದಿಂದ, ಕಾಯಕವನ್ನು ಆಚಾರ ರೂಪಕ್ಕೆ  ತಂದಾಗ ಮಾತ್ರ ಸುಖದ ದಾರಿ ಗೋಚರಿಸುತ್ತ ಮುಂದಕ್ಕೆ ಸಾಗುತ್ತದೆ.  ನಿಜಶರಣರ ನಿರಂತರ ಸಂಗ ಹಾಗೂ ಅವುಗಳನ್ನು ಆಚಾರಕ್ಕೆ ಇಳಿಸಿದರೆ  ಕ್ರಿಯೆಗಳ ಮೂಲಕ ಪರಮ ಸುಖವನ್ನು ಹೊಂದಲು ಸಾಧ್ಯವಾಗುತ್ತದೆ.


One thought on “ದಿನಕ್ಕೊಂದು ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

Leave a Reply

Back To Top