ಕಾವ್ಯ ಸಂಗಾತಿ
ಡಾ. ಜಿ. ಪಿ. ಕುಸುಮಾ, ಮುಂಬಯಿ
ಹೊರಟು ಹೋದ ಲೋಕಲ್
ಎರಡೇ ಹೆಜ್ಜೆಗಳು ಉಳಿದಿದ್ದವು
ಲೋಕಲ್ ಹೊರಟು ಹೋಯಿತು
ಸಮಯದ ದಾಸನಾಗಿ.
ಎಲ್ಲ ಭರವಸೆಗಳ, ಆಸೆ,
ಕನಸುಗಳ ಮುಖಕ್ಕೆ ಬಡಿದು
ಕಾಲದೊಂದಿಗೆ ಲೋಕಲ್ ಓಡಿತು.
ಹತ್ತಿದವರೆಲ್ಲ ಸಂಭ್ರಮಿಸಿದರು.
ಹತ್ತದವರೆಲ್ಲ ಚಡಪಡಿಸಿದರು.
ಒಳಗೆ ಸೀಟುಗಳಿದ್ದವು ಖಾಲಿ
ಕಿಟಕಿಗಳು ತೆರೆದಿದ್ದವು
ನಿಲ್ಲದೆ ಸಾಗಿದ ಲೋಕಲ್ನೆದುರಿಗೆ
ಆಗ ತಾನೆ ಬಂದು ನಿಂತ
ಸಣ್ಣ ಸಣ್ಣ ಕನಸುಗಳು
ಬಾಗಿಲು ಬಿದ್ದ ಮನೆಯಂತೆ
ದೂಳಿಗಾಹುತಿಯಾದವು
ಸೂರ್ಯಾಸ್ತದ ನಂತರ ಉಳಿವ
ಕೆಂಬಣ್ಣದಲ್ಲಿ
ಹೊಸ ಮಳೆ ಬಿದ್ದು ನಿಂತಾಗಿನ
ಮಣ್ಣ ಪರಿಮಳದಲ್ಲಿ
ಕಣ್ಣೊಳಗೆ ಆಗಾಗ್ಗೆ ಜಿನುಗುವ
ಹನಿಮಳೆಯ ಉಪ್ಪುನೀರಲಿ
ಅದ್ದಿತೆಗೆದ ಕನಸುಗಳವು.
ಲೋಕಲ್ ಕೈತಪ್ಪಿ ಹೋಗುವುದು
ಬಿಟ್ಟು ಹೋಗುವುದೇನೂ ಹೊಸದಲ್ಲ
ಅರ್ಧ ತಾಸು ಗೇಣುದ್ದ ಮಾಡಿದ್ದೇ ಬಂತು.
ಬೇರೆ ಲೋಕಲ್ ಬರುತ್ತಿಲ್ಲ
ಬಂದ ಲೋಕಲ್ ಸಿಕ್ಕಿಲ್ಲ
ಒಳಗೆಲ್ಲ ಸದ್ದು
ಯಾರದು? ಯಾಕೆ ಬಂದರು?
ಖಾಲಿ ಮನದೊಳಗೆ
ಕನಸುಗಳಿಗಷ್ಟೇ ಜಾಗ ಉಳಿದಿದೆ
ಅವುಗಳ ನಾಳೆಗಳಿಗೆ ಬೆಳಕಿಲ್ಲ
ಇಂದಿನ ಬೆಳಕ ಕುಡಿದು
ಅನಾಥರನ್ನಾಗಿಸದಿರಿ.
ಬರುವ ಲೋಕಲ್ ಗಾಗಿ
ಕಣ್ಣಾಡಿಸುತ್ತಾ
ಹೊರಟು ಹೋದ ಲೋಕಲ್ ನ
ಚಿತ್ರ ಅಳಿಸುತ್ತಾ ಸುತ್ತಾಡುತ್ತಿವೆ ಅವು
ನನ್ನ ಒದ್ದೆ ಕಣ್ಣುಗಳ ಸುತ್ತ.
———————
ಡಾ.ಜಿ.ಪಿ. ಕುಸುಮಾ, ಮುಂಬಯಿ.