ಲೇಖನ ಸಂಗಾತಿ
“ಬದುಕಿನ ನೆನಪುಗಳೆಂದರೆ”
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮನೆಯ ವರಾಂಡದಲ್ಲಿ ನಾಲ್ಕೈದು ಜನ ಮನೆಯ ಸದಸ್ಯರು ಗುಂಪಾಗಿ ಕುಳಿತುಕೊಂಡು, ಫೋಟೋ ಆಲ್ಬಮ್ ಅನ್ನು ತೆಗೆದು, ಒಂದೊಂದಾಗಿ ಫೋಟೋಗಳನ್ನು ನೋಡುತ್ತಿದ್ದರು. ಅದ್ಯಾಕೋ… ಮನೆಯ ಹಿರಿಯ ಸದಸ್ಯರೊಬ್ಬರ ಕಣ್ಣುಗಳು ಒದ್ದೆಯಾದವು. ಹಾಗೆಯೇ ನಗು ನಗುತ್ತಾ ಫೋಟೋ ನೋಡುತ್ತಿದ್ದ ಮಗುವೊಂದು “ಅಯ್ಯೋ ನಾನ..! ಇಷ್ಟು ಚಿಕ್ಕವಳು ಇದ್ದೆನಾ…? ಎಂದು ಉದ್ಗಾರ ತೆಗೆಯಿತು.
ಮೇಲಿನ ಎರಡು ಸನ್ನಿವೇಶಗಳು ಸುಮಾರು 20-25 ವರ್ಷಗಳ ಹಿಂದೆ ತಮ್ಮ ಮದುವೆಯಲ್ಲಿ ಫೋಟೋಗಳನ್ನು ಸೆರೆಹಿಡಿದ ಅಲ್ಬಮ್ ನೋಡಿದಾಗ… ಪ್ರತಿಯೊಬ್ಬರ ಕುಟುಂಬದಲ್ಲಿ ಇಂತಹ ಸನ್ನಿವೇಶಗಳು ಆಗಾಗ ಜರುಗುತ್ತಿರುತ್ತವೆ.
ತುಂಬು ಯೌವನದಲ್ಲಿದ್ದಾಗ ಮದುವೆ ಸಮಾರಂಭ ಮಾಡಿಕೊಳ್ಳುವಾಗ, ಕುಟುಂಬದ ಸದಸ್ಯರೆಲ್ಲರಿಗೂ ಎಲ್ಲಿಲ್ಲದ ಸಂಭ್ರಮ, ಸಡಗರ ಮನೆ ಮಾತಾಗಿರುತ್ತದೆ. ಇಂತಹ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ತಮ್ಮ ಕೈಚಳಕದಲ್ಲಿ ವಿವಿಧ ಸನ್ನಿವೇಶಗಳನ್ನು, ಸಂಗತಿಗಳನ್ನು, ಕಾರ್ಯಕ್ರಮಗಳ ಘಟನೆಗಳನ್ನು, ಬಂದು ಬಾಂಧವರನ್ನು, ಸ್ನೇಹಿತರು, ಆಪ್ತರು ಬಂದು ಅಕ್ಷತೆ ಹಾಕಿ ಹರಸಿದ ನೆನಪುಗಳ ಬುಗ್ಗೆಯನ್ನು ಎಲ್ಲರೂ ಹೃದಯದೊಳಗೆ ತುಂಬಿ ಬಿಟ್ಟಿರುತ್ತಾರೆ.
ಕಾರಣ ಯಾವುದೇ ಇರಲಿ, “ಒಟ್ಟಾರೆ ನೆನಪುಗಳು ಸದಾ ಇರಲಿ” ಎನ್ನುವ ಬಯಕೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಮದುವೆ ಸಮಾರಂಭ, ಆರತಿ ಸಮಾರಂಭ, ತೊಟ್ಟಿಲು ಕಾರಣ, ಅಲ್ಲದೆ ಬೇರೆ ಬೇರೆ ಪ್ರವಾಸದ ಕ್ಷಣಗಳನ್ನು ಕಣ್ಣತುಂಬಿಕೊಳ್ಳಲು ಹೋದ ಕ್ಷಣಗಳನ್ನು ಸೆರೆ ಹಿಡಿಯಲು… ಫೋಟೋಗ್ರಾಫರ್ ಇಲ್ಲದಿದ್ದರೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಆ ಸುಂದರ ಕ್ಷಣಗಳನ್ನು ಅನುಭವಿಸುತ್ತಾ ಅನುಭವಿಸುತ್ತಾ, ಬದುಕಿನ ಸಂತೋಷದ ಕ್ಷಣಗಳನ್ನು ಆಪ್ತತೆಯಿಂದ ಅನುಭವಿಸುತ್ತೇವೆ. ಆಗ ನಮ್ಮ ಜೊತೆಗೆ ಜೊತೆಯಾದವರು, ಸ್ನೇಹದಲ್ಲಿ ಒಂದಾದವರು, ಕರುಳ ಸಂಬಂಧವನ್ನು ಬೆಸೆಯುವ ಬಂಧುಬಾಂಧವರು, ಕಷ್ಟಕಾಲದಲ್ಲಿದ್ದ ಆಪ್ತಮಿತ್ರರು ಒಂದೆಡೆ ಸೇರಿಕೊಂಡಾಗ, ಅವರು ನಮ್ಮೊಡನೆ ಕೂಡಿಕೊಂಡಾಗ ಅವುಗಳನ್ನು ಭಾವಚಿತ್ರಗಳ ಮೂಲಕ ದೃಶ್ಯವನ್ನು ಸೆರೆಹಿಡಿದು ಬದುಕಿನ ಸೌಂದರ್ಯತೆಯನ್ನು ಹೆಚ್ಚಿಸುತ್ತೇವೆ. ಅಂತಹ ಸುಂದರ ಭಾವಚಿತ್ರಗಳನ್ನು ಕೆಲವು ವರ್ಷಗಳ ನಂತರ ತಿಂಗಳಗಳ ನಂತರ ದಿನಗಳ ನಂತರ ಒಂದು ಕ್ಷಣ ತಿರುಗಿ ಹಾಕಿದರೆ ಏನೆಲ್ಲ ನೆನಪುಗಳು… ನಮ್ಮನ್ನು ಕಾಡುತ್ತವೆ. ಮುಖದಲ್ಲಿ ನಗೆ ಮೂಡಿಸುತ್ತಿವೆ. ಕೆಲವು ಭಾವಚಿತ್ರಗಳು ನಮಗೆ ಗೊತ್ತಾಗದಂತೆ ಹೃದಯವನ್ನು ಹೊಕ್ಕು ಭಾವತೀವ್ರತೆಯಿಂದ ಕಣ್ಣೀರು ತರಿಸುತ್ತೇವೆ. ಮನದ ಮೂಲೆಯಲ್ಲಿ ಆ ಕ್ಷಣಗಳನ್ನು ನೆನಪಿಸಿಕೊಂಡಾಗ ಯಾವುದೋ ಒಂದು ಅವ್ಯಕ್ತ ಭಾವನೆ ನಮ್ಮ ಬದುಕಿಗೆ ತಾಕಿ ನೆನಪುಗಳು ಎಡೆಬಿಡದೆ ಕಾಡುತ್ತವೆ.
20 ರಿಂದ 25 ವರ್ಷಗಳ ಹಿಂದೆ ಸೆರೆ ಹಿಡಿದ ಎಷ್ಟೊಂದು ಭಾವಚಿತ್ರಗಳಲ್ಲಿ ತನ್ಮಯತೆ, ಪ್ರೀತಿ, ವಾತ್ಸಲ್ಯ… ಒಂದು ನವಿರಾದ ಮುಗುಳ್ನಗೆ, ಅವ್ಯಕ್ತವಾದ ಬಾಂಧವ್ಯ ಚಿಗುರು ಹೊಡೆದಿರುತ್ತದೆ. ಯಾರನ್ನೋ ಪಡೆದುಕೊಂಡು ಸಂಭ್ರಮಿಸುವ ಕ್ಷಣದಲ್ಲಿ, ಯಾರ ಯಾರನ್ನೋ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಅನಾಥಭಾವ ನಮ್ಮನ್ನು ಕಾಡುತ್ತಿರುತ್ತದೆ.
ಇಂಥ ಅನೇಕ ಫೋಟೋಗಳನ್ನು ನೋಡುವಾಗ ನಮಗೆ ಅರಿವಿಲ್ಲದಂತೆ ನಾವು ನಮ್ಮನ್ನು ಕಳೆದುಕೊಂಡು ಬಿಟ್ಟಿರುತ್ತೇವೆ. ಆ 25 ವರ್ಷಗಳ ಹಿಂದೆ ನಮ್ಮ ಮದುವೆಯ, ಆರಕ್ಷತೆಯ ಸಂಭ್ರಮದಲ್ಲಿ ಜೊತೆಯಾದವರು ಒಬ್ಬರಲ್ಲ ಇಬ್ಬರಲ್ಲ ಸಾವಿರಾರು ಸಂಬಂಧಿಗಳು, ಸ್ನೇಹಿತರು, ಪಕ್ಕದಲ್ಲಿ ನಿಂತು ಪೋಸ್ ಕೊಟ್ಟಿರುತ್ತಾರೆ, ಕಾಲಚಕ್ರ ಉರುಳಿದಂತೆ ಆ ಭಾವಚಿತ್ರದಲ್ಲಿ ಇರುವವರು ಅಂದಿನ ಮುಖದ ಭಾವ ಮುಗುಳ್ನಗೆ ಇವತ್ತು ಉಳಿದುಕೊಂಡಿರುವುದಿಲ್ಲ. ವಯಸ್ಸಾದಂತೆ ಕಾಲಚಕ್ರದೊಳಗೆ ಸಿಲುಕಿ ಯಾವುದೋ ಒಂದು ರೋಗಕ್ಕೆ ತುತ್ತಾಗಿ ದೇಹವು ಕೃಷಕತೆಯಿಂದ ಬಳಲುತ್ತಿರುತ್ತದೆ. ಇನ್ನೂ ಕೆಲವರು ನೆನಪುಗಳಾಗಿ ಉಳಿದುಬಿಡುತ್ತಾರೆ. ಇನ್ನೂ ಕೆಲವರು ಈ ಲೋಕವನ್ನೇ ತ್ಯಜಿಸಿ ಹೋಗಿರುತ್ತಾರೆ. ಅದನ್ನೆಲ್ಲ ನೆನಪು ಮಾಡಿಕೊಂಡಾಗ ಕಣ್ಣುಗಳು ಕಂಬನಿಯಿಂದ ಮಿಡಿಯುತ್ತವೆ. “ನಮ್ಮ ಹೃದಯ ಎಷ್ಟೊಂದು ವ್ಯಕ್ತಿಗಳನ್ನು ಕಳೆದುಕೊಂಡಿತಲ್ಲ” ಎಂದು ಮರುಗುತ್ತದೆ. ‘ಮದುವೆ’ ಎನ್ನುವ ಸಡಗರ ಸಂಭ್ರಮದಲ್ಲಿ ಅಂದು ತೆಗೆಸಿಕೊಂಡ ಫೋಟೋಗಳು ಬೆಚ್ಚಗೆ ನೆನಪುಗಳನ್ನು ಕಾಪಾಡುತ್ತವೆ ಎನ್ನುವ ಭರವಸೆ ನಮ್ಮ ಎದೆಯೊಳಗೆ ಇಟ್ಟುಕೊಂಡಿರುತ್ತೇವೆ. ಆದರೆ ಆ ಬೆಚ್ಚನೆಯ ನೆನಪುಗಳು ಕೆಲವು ಸಲ ಹೀಗೆ ಕಂಬನಿಗಳಾಗಿ ಒಂದೊಂದೇ ಹನಿಗಳಾಗಿ ನಮ್ಮನ್ನು ಮಾನಸಿಕವಾಗಿ ಮೆತ್ತಗೆ ಮಾಡಿಬಿಡುತ್ತೇವೆ.
ಬದುಕೆ ಹಾಗಲ್ಲವೇ…? ನಮ್ಮ ಬದುಕ ಹಾದಿಯಲ್ಲಿ ಯಾರ ಯಾರೋ ಜೊತೆಯಾಗುತ್ತಾರೆ, ಕೆಲವರು ನಮ್ಮ ಹೃದಯದಲ್ಲಿ ಸೆರೆಯಾಗುತ್ತಾರೆ. ಇನ್ನೂ ಕೆಲವರು ಕೈಹಿಡಿದು ನಮ್ಮೊಂದಿಗೆ ಬರುತ್ತಾರೆ. ಇನ್ನೂ ಕೆಲವರು ಅರ್ಧ ದಾರಿಯಲ್ಲಿ ಕೈಕೊಟ್ಟು ಹೋಗಿಬಿಡುತ್ತಾರೆ. ಆದರೆ ತಮ್ಮ ತಮ್ಮ ಬದುಕಿನ ಆಶಾ ಗೋಪುರಗಳನ್ನು ಕಟ್ಟಿಕೊಡುವಾಗ ಒತ್ತಡದ ಕೆಲಸದಲ್ಲಿ ನಮ್ಮನ್ನು ಮರೆತಿರುತ್ತಾರೆ. ಇನ್ನೂ ಕೆಲವರು ಹಾಗೆಯೇ ನೆನಪಿನಲ್ಲಿ ಉಳಿಯುತ್ತಾರೆ. “ಹಾಯ್ ಹೇಗಿದ್ದೀರಾ..? ಆರಾಮ ಇದ್ದೀರಾ..?” ಎನ್ನುತ್ತಾರೆ ಎಂದು ವಿಷಾದದಿಂದ ನುಡಿಯುವಾಗ, ‘ಸಂಬಂಧ’ ಎನ್ನುವ ಪದ ಮೆಲ್ಲಗೆ ಕಂಪಿಸಿಬಿಡುತ್ತದೆ.
ಬದುಕಿನ ನೆನಪುಗಳಂದರೆ… ಕೇವಲ ಸಂತೋಷವನ್ನು, ಸಂಭ್ರಮ ಸಡಗರವನು ತಂದುಕೊಡಲಾರವು, ಅವುಗಳು ತಮ್ಮೊಳಗೆ ಬದುಕಿನ ಎಲ್ಲಾ ಅವ್ಯಕ್ತ ಭಾವನೆಗಳನ್ನು ನಮಗೆ ಗೊತ್ತಿಲ್ಲದಂತೆ ತಂದುಬಿಡುತ್ತವೆ. ಸಂತೋಷ, ಸಡಗರ, ಸಂಭ್ರಮ ಜೊತೆಗೆ ದುಃಖ, ನೋವು, ಯಾತನೆ, ಅಗಲಿಕೆ, ಒಂದಾಗುವಿಕೆ, ಆಕಸ್ಮಿಕ ಭೇಟಿಗಳ ಕ್ಷಣಗಳು.. ಯಾವುದೋ ಒಂದು ಅವ್ಯಕ್ತ ದೃಶ್ಯವನ್ನು ನೋಡಿ ಕಣ್ಣುಗಳು ತುಂಬಿಕೊಂಡ ಸಂದರ್ಭಗಳು, ಉಪಕಾರ ಮಾಡಿ ಮರಳಿ ತೀರಿಸಲಾರದಂತ ಋಣ ಭಾರವನ್ನು ಹೊತ್ತಾಗ ಕಣ್ಣುಗಳಲ್ಲಿ ಉಂಟಾಗುವ ಆರ್ಧತೆಯ ಕಕ್ಕುಲಾತಿ…
ಒಂದೇ ಎರಡೇ ಬದುಕಿನ ನೆನಪುಗಳಂದರೆ.!! ಹಾಗೆಯೇ ಮೂಟೆ ಮೂಟೆ ಅನುಭವಗಳನ್ನು ಹೊತ್ತು ತರುತ್ತವೆ. ಮೂಟೆ ಮೂಟೆ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳುತ್ತವೆ. ನೀವು ಯಾವತ್ತಾದರೂ ಸಮಯ ಬಿಡುವು ಮಾಡಿಕೊಂಡು ನೀವು ತೆಗೆಸಿಕೊಂಡ ಹಳೆಯ ಭಾವಚಿತ್ರಗಳ ಫೋಟೋ ಆಲ್ಬಮ್ ಗಳನ್ನು ಅಂದರೆ ಅದು ಮದುವೆಯ ಆಲ್ಬಮ್ ಆಗಿರಬಹುದು, ತೊಟ್ಟಿಲು ಕಾರ್ಯಕ್ರಮವಾಗಿರಬಹುದು, ಯಾವುದೇ ಫೋಟೋ ಆಲ್ಬಮ್ ಗಳಾಗಲಿ ಅವುಗಳನ್ನು ಒಂದು ಕ್ಷಣ ಮೆಲ್ಲಗೆ ನೋಡುತ್ತಾ ನೋಡುತ್ತಾ ಬದುಕಿನ ನೆನಪುಗಳನ್ನು ತಿರುವಿಹಾಕಿ ನೋಡಿ, ನಿಮ್ಮ ಎದೆಯೊಳಗೆ ನಿಮಗೆ ಗೊತ್ತಿಲ್ಲದಂತೆ ಆಶ್ಚರ್ಯ, ವಿಷಾದ, ಸಂತೋಷ, ಸಂಭ್ರಮ, ಕುತೂಹಲ… ಇವುಗಳು ಮೂಡದೆ ಇರಲಾರವು. ಬದುಕಿನ ನೆನಪುಗಳಂದರೆ.. ಬಾಳಿನ ಎಲ್ಲಾ ಆಯಾಮಗಳ ಕೋಟಿ ಕೋಟಿ ಆ ನೆನಪುಗಳು ನಿಮ್ಮ ಬದುಕನ್ನು ಮತ್ತೆ ಮತ್ತೆ ವಿಷಾದದಿಂದ ಹೊರಬಂದು, ಸಂಭ್ರಮ, ಸಂತೋಷ ಹಂಚಿಕೊಳ್ಳುವಂತಾಗಲೆಂದು ಹಾರೈಸುತ್ತೇನೆ.
————————————-.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಬದುಕಿನ ಬೆಚ್ಚನೆಯ ನೆನಪುಗಳು ಕೆಲವೊಮ್ಮೆ ಕಣ್ಣೀರ ಹನಿಗಳಾಗಿ ಉದುರುವುದನ್ನು ಸೊಗಸಾಗಿ ನಿರೂಪಿಸಿದ್ದೀರಿ. ತುಂಬಾ ಸೊಗಸಾಗಿದೆ. ಅಭಿನಂದನೆಗಳು.