ಸವಿತಾ ಮುದ್ಗಲ್ ಅವರ ಸಂಕಲನ “ನೆರಳಿಗಂಟಿದ ಭಾವ” ಒಂದು ಅವಲೋಕನ ನಾರಾಯಣಸ್ವಾಮಿ (ನಾನಿ) ಅವರಿಂದ

ಅವಸರದಲ್ಲಿ ಹುಟ್ಟಿದ ಕವಿತೆ ಅರೆಬೆಂದ ಅನ್ನದಂತೆ
ನಿರಂತರವಾದ ಓದಿನಿಂದ ಮಾತ್ರ ಗಟ್ಟಿ ಕಾವ್ಯ ಕಟ್ಟಲು ಸಾಧ್ಯ. ಕಾವ್ಯವೆಂದರೆ ಹೊಸ ವಿಚಾರ,ಕನಸು, ಹಾಗೂ ಬದಲಾವಣೆಯ ತಾತ್ವಿಕ ಚಿಂತನೆಯಾಗಿದೆ….

                              ಡಾ. ಮುಮ್ತಾಜ್ ಬೇಗಂ

ನನಗೆ ಕಥೆ ಕವಿತೆ ಬರೆಯಲು ಯಾರು ಪ್ರೇರಣೆಯಿಲ್ಲ ನಾನು ಸಾಹಿತ್ಯವನ್ನು ಕೂಡ ಅಷ್ಟೊಂದು ಓದಿಕೊಂಡಿಲ್ಲ ಸಮಯ ಸಿಕ್ಕಾಗ ಪ್ರಕೃತಿ, ಗಿಡಮರ, ಪಕ್ಷಿಗಳನ್ನು ನೋಡುತ್ತಾ ನನ್ನ ಮನದೊಳಗೆ ಮೂಡಿದ ಭಾವನೆಗಳನ್ನು ಬರಹವಾಗಿ ಮೂಡಿಸುತ್ತಿರುವೆ ಎಂದು ಹೇಳುವ ಶ್ರೀಮತಿ ಸವಿತಾ ಮುದ್ಗಲ್ ರವರು ಚೊಚ್ಚಲ ಕವನಸಂಕಲನವಾಗಿ ನೆರಳಿಗಂಟಿದ ಭಾವ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ.

ಬ್ಯಾಂಕಿನ ಉಪ ವ್ಯವಸ್ಥಾಪಕಿಯ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಗೃಹಿಣಿಯಾಗಿ, ಬಿಡುವಿನ ಸಮಯದಲ್ಲಿ ಸಾಹಿತ್ಯದ ಕಡೆಗೆ ಒಲವನ್ನು ಬೆಳೆಸಿಕೊಂಡು  ಮುಖಪುಟದಲ್ಲಿರುವ ಹಲವಾರು ಸಾಹಿತ್ಯದ ಗುಂಪುಗಳಲ್ಲಿ ಬರೆಯುತ್ತಾ, ಎರಡು ಕನ್ನಡದ ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿದವರು ಶ್ರೀಮತಿ, ಸವಿತಾ ಮುದ್ಗಲ್ ರವರು.

ನೆರಳಿಗಂಟಿದ ಭಾವ ಕವನಸಂಕಲನದಲ್ಲಿ ಸುಮಾರು ಎಂಬತ್ತ ನಾಲ್ಕು ಕವಿತೆಗಳಿವೆ. ಈ ಕವನಸಂಕಲನವನ್ನು ನಿರಂತರ ಪ್ರಕಾಶನ ಗದಗದವರು ಪ್ರಕಟಿಸಿದ್ದಾರೆ. ಈ ಕವನಸಂಕಲನಕ್ಕೆ ಡಾ. ಮುಮ್ತಾಜ್ ಬೇಗಂ ಸಹಾಯಕ ಪ್ರಾಧ್ಯಾಪಕರು ಗಂಗಾವತಿ ಇವರು ಮುನ್ನುಡಿಯನ್ನು ಬರೆಯುತ್ತಾ ಕೃತಿಯ ಬಗ್ಗೆ ಹೇಳುತ್ತಾರೆ..ಸಮಾಜಮುಖಿ ಮೌಲ್ಯಗಳ ಮರುಕಟ್ಟುವಿಕೆಯ ಕ್ರಿಯೆಯ ಜರೂರಿಯ ಬಗ್ಗೆ ಕವಿತೆಗಳು ಮಾತನಾಡುತ್ತವೆ. ಕವಿತೆಯನ್ನು ಮತ್ತೆ ಮತ್ತೆ ಓದಿನ ಮೂಲಕ ಪರಿಷ್ಕರಿಸುವ ಶುದ್ದಿಗೊಳಿಸುವ ಕ್ರಿಯೆ ಪ್ರತಿ ಕವಿಯ ಜವಾಬ್ದಾರಿಯೂ ಹೌದು. ಈ ಕ್ರಿಯೆಯು ಸವಿತಾ ರವರ ಕವಿತೆಗೆ ಇನ್ನೂ ಬೇಕಿತ್ತು ಅನಿಸುತ್ತದೆ. ಕವಿತೆಗಳು ಆಶಯದ ದೃಷ್ಟಿಯಿಂದ ಕವಿತೆಗಳು ಓದಿಸಿಕೊಳ್ಳುತ್ತವೆ ಎಂದು ಹೇಳಿ ಶುಭ ಹಾರೈಸಿದ್ದಾರೆ.

ಬೆನ್ನುಡಿಯನ್ನು ಬರೆದಿರುವ ಹಿರಿಯ ಕವಯಿತ್ರಿ ಅನಸೂಯಾ ಜಹಗೀರದಾರ ರವರು ಈ ಕೃತಿಯ ಬಗ್ಗೆ ಹೇಳುತ್ತಾ ಸವಿತಾ ಮುದ್ಗಲ್ ರವರ ಕವಿತೆಗಳಲ್ಲಿ ಸಮಾನತೆ ಸಹಜ ಬದುಕು ಸ್ನೇಹ ಒಲವಿನ ಭಾವನೆಗಳನ್ನು ಸ್ಫುರಿಸುತ್ತವೆ. ಎಂದು ಹೇಳಿದ್ದಾರೆ.

ನೆರಳಿಗಂಟಿದ ಭಾವ ಈ ಕೃತಿಗೆ  ಶ್ರೀಮತಿ ಆಶಾ ಶಿವು, ಜಿ ಎಂ ಆರ್ ಆರಾಧ್ಯ, ಲಕ್ಷಣ ಬಾರಿಕೇರ್, ಸೂರ್ಯಸಖ ಪ್ರಸಾದ್ ಕುಲಕರ್ಣಿ, ಮೀನಾ ನಾಗರಾಜ್ ಮುಂತಾದ ಕವಿ ಕವಯಿತ್ರಿಯರು ಆಶಯ ನುಡಿಗಳನ್ನು ಬರೆದು ಶುಭ ಹಾರೈಸಿದ್ದಾರೆ.

ಇತ್ತೀಚೆಗೆ ಬರೆಯುತ್ತಿರುವ ಬಹಳಷ್ಟು ಕವಯಿತ್ರಿಯ ಕವನಸಂಕಲನದ ಮೊದಲ ಕವಿತೆಯಾಗಿ ದೇವರ ಬಗ್ಗೆ ಬರೆದಿರುವ ಕವಿತೆಯನ್ನು ಮೊದಲಿಗೆ ಹಾಕುತ್ತಾರೆ. ಅದು ಶುಭಸಂಕೇತದ ಫಲವೇನೋ ಗೊತ್ತಿಲ್ಲ. ಈ ಕವನಸಂಕಲನದಲ್ಲಿಯೂ ಕೂಡ ಕವಯಿತ್ರಿ ಸರಸ್ವತಿ ಮಾತೆಯ ಶೀರ್ಷಿಕೆಯಲ್ಲಿ ಕವಿತೆಯನ್ನು ಮೊದಲ ಕವಿತೆಯಾಗಿ ಬರೆದಿದ್ದಾರೆ.


ಜಗದ ಮನದ ಅಜ್ಞಾನ ತೊಲಗಿಸು
ಜಗದಲಿ ತುಂಬಿರುವ ಮೂಢರನು ಅಳಿಸು
ಅಕ್ಷರದ ಜೋಳಿಗೆಯ ಭಿಕ್ಷೆ ಬೇಡುವೆವು
ನೀಡುವ ಜ್ಞಾನದಿ ಬದುಕ ಕಟ್ಟುವೆವು…

.ಭಾರತ ಸಂಸ್ಕೃತಿಯಾ ನೆಲೆಯಲ್ಲಿ ಸರಸ್ವತಿಯನ್ನು ವಿದ್ಯಾಮಾತೆಯಂತೆ ಪೂಜಿಸುತ್ತೇವೆ. ಸರಸ್ವತಿ ಮಾತೆಯು ನಮಗೆ ಅಕ್ಷರದ ಜ್ಞಾನ, ಬುದ್ದಿಯನ್ನು ದಯಪಾಲಿಸುತ್ತಾಳೆ ಅಂತ ವಿದ್ಯಾಮಾತೆಯನ್ನು ಕವಯಿತ್ರಿ ಕೇಳಿಕೊಳ್ಳುತ್ತಾರೆ. ಈ ಜಗದ ಜನರ ಮನದೊಳಗೆ ತುಂಬಿರುವ  ಅಜ್ಞಾನವನ್ನು ತೊಲಗಿಸಿ, ಈ ಸಮಾಜದಲ್ಲಿ ತುಂಬಿರುವ ಮೂಢ ಮನಸ್ಥಿತಿಯ ಮನುಕುಲವನ್ನು ಸರ್ವನಾಶ ಮಾಡಿ ಬಿಡು…ಅಕ್ಷರದ ಜೋಳಿಗೆಯನ್ನು ಹಿಡಿದು ನಿನ್ನ ಮುಂದೆ ಭಿಕ್ಷೆಯನ್ನು ಬೇಡುತ್ತವೆ. ನಮಗೆ ಜ್ಞಾನವನ್ನು ದಯಪಾಲಿಸು ಈ ಭೂಮಿಯ ಮೇಲೆ ಬದುಕನ್ನು ಕಟ್ಟಿಕೊಂಡು ಜೀವಿಸುತ್ತೇವೆ. ಎನು ಅರಿಯದ ಮನಸ್ಸಿಗೆ ನೀನು ಒಳ್ಳೆಯ ಬುದ್ಧಿಯನ್ನು ಕೊಡು, ಯಾವ ನಕ್ಷತ್ರದಲ್ಲಿ ಜನನವಾದರೂ ಯಾವ ಸಮಯದಲ್ಲಿ ಜನನವಾದರೂ ಕೂಡ ಅಶುಭವೆನಲ್ಲಾ, ನಾವು ನಡೆದುಕೊಳ್ಳುವ ರೀತಿ ನಮ್ಮ ವ್ಯಕ್ತಿತ್ವ ಮಾತ್ರ ನಮ್ಮನ್ನು ಕೈಯಿಡಿದು ನಡೆಸುತ್ತದೆ ಎಂದು ಸೊಗಸಾದ ಭಾವನೆಗಳ ಮುಖಾಂತರ ಕವಿತೆಯ ಸಾಲುಗಳನ್ನು ರಚಿಸಿದ್ದಾರೆ.

ನೆರಳು ಶೀರ್ಷಿಕೆಯ ಕವನದಲ್ಲಿ ಮನುಷ್ಯನ ಪ್ರಾಮಾಣಿಕತೆಯ ಬಗ್ಗೆ ಹೇಳುತ್ತಾರೆ.
ಕಷ್ಟಕ್ಕೆ ನೆರವಾಗು, ಪ್ರಾಮಾಣಿಕ ವ್ಯಕ್ತಿತ್ವದ ಸಾಲಿನಲಿ
ಆಪತ್ತಿಗೆ ಆಸರೆಯಾಗು ದಯಾ ದಾಕ್ಷಿಣ್ಯ ತೋರುತಲಿ
ಒಂಟಿಯಾದರೂ ಮರುಗಬೇಡ ಸಮಾಜದ ನಡೆಯಲಿ
ಸದಾ ಕಾಲ ಜೊತೆಗೆ ಇರುವುದು ನಿನ್ನಿ ಆತ್ಮವಿಶ್ವಾಸದಲಿ


ಮನುಜನೇ ಈ ಭೂಮಿಯ ಮೇಲೆ ಹುಟ್ಟಿದ್ದಿಯಾ ಇತರರ ಕಷ್ಟಕ್ಕೆ ನೆರವಾಗು ಸಹಾಯ ಮಾಡು, ಒಳ್ಳೆಯದನ್ನು ಮಾಡುತ್ತಾ ಬದುಕು, ನೀನು ಪ್ರಾಮಾಣಿಕನಾಗಿರು ನಿನ್ನ ವ್ಯಕ್ತಿತ್ವದಲ್ಲಿ ಮನಸ್ಸು ಸಹಾನುಭೂತಿಯಿಂದ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಜೀವಗಳಿಗೆ ನೀನು ಆಸರೆಯಾಗು. ನಿನ್ನೆದೆಯಲ್ಲಿ ದಯೆ ಕರುಣೆ ಅನುಕಂಪ ತುಂಬಿರಲಿ. ಈ ಸಮಾಜ ನಿನ್ನನ್ನು ಯಾವ ರೀತಿಯಾದರೂ ನೋಡಲಿ ನಿನ್ನನ್ನು ನೋಡಿ ಅಪಹಾಸ್ಯ ಮಾಡಲಿ ನೀನು ಒಂಟಿಯಾದರೂ ಚಿಂತೆಯಿಲ್ಲ ಅದಕ್ಕಾಗಿ ಬೇಸರ ಪಡಬೇಡ, ನಿನ್ನ ಸತ್ಕಾರ್ಯಗಳಿಂದ ಒಳ್ಳೆಯ ಕಾಲ ನಿನ ಜೊತೆಯಲ್ಲಿಯೇ ಇರುತ್ತದೆ ಆತ್ಮ ವಿಶ್ವಾಸ ನಿನಗಿರಲಿ. ಈ ಪ್ರಕೃತಿಯ ಮಡಿಲಲ್ಲಿ ಬೆಳೆದಿರುವ ಮರಗಳು ಹೊಂಗೆಯ ಮರವಾಗಲಿ ಆರಳಿ ಮರವಾಗಲಿ ಒಂದೇ ತೆರೆನಾದ ನೆರಳು ನೀಡುತ್ತದೆ ಅಲ್ಲವೇ? ಗಂಡಗಾಗಲಿ ಹೆಣ್ಣಾಗಲಿ ಇಬ್ಬರೂ ಮನುಷ್ಯರೇ ಅಲ್ಲವೆ? ಇಲ್ಲಿ ಭೇದಭಾವ ಯಾಕೆ? ಇಬ್ಬರನ್ನೂ ಸಮಾನವರಲ್ಲವೆ? ಪ್ರಕೃತಿಯ ಮುಂದೆ ನಾವು ಶಾಶ್ವತವಲ್ಲದ ಜೀವಗಳು ಎಂದು ಅರ್ಥವತ್ತಾಗಿ ಕವಿತೆಯನ್ನು ರಚಿಸಿದ್ದಾರೆ.

ಮನದ ಭಾವ ಕವನದ ಶೀರ್ಷಿಕೆಯಲ್ಲಿ ತಾಯಿಯ ಬಗ್ಗೆ ವರ್ಣಿಸಿದ್ದಾರೆ ಈ ಸಾಹಿತ್ಯಲೋಕದಲ್ಲಿ ತಾಯಿಯ ಬಗ್ಗೆ ಕವನ ಬರೆಯದಿರುವವರೇ ಇಲ್ಲವೇನು? ಪ್ರತಿಯೊಬ್ಬ ಲೇಖಕ ಕೂಡ ಅಮ್ಮನ ಬಗ್ಗೆ ಕಥೆ ಲೇಖನ ಕವಿತೆ ಕಾದಂಬರಿಯನ್ನು ಕೂಡ ಬರೆದಿದ್ದಾರೆ. ಈ ಕವನಸಂಕಲನದಲ್ಲಿ ಕೂಡ ಕವಯಿತ್ರಿ ಅಮ್ಮನ ಗುಣಗಾನವನ್ನು ಮಾಡಿದ್ದಾರೆ.


ತಾಯಿ ನಿನ್ನ ಮಡಲಿನಲ್ಲಿ ನಾನೆಂದಿಗೂ ಕಂದನು
ನಿನ್ನ ಪ್ರೀತಿಗಾಗಿ ಹಂಬಲಿಸಿ ಓಡೋಡಿ ಬಂದೆನು
ಮಾತೆಯ ಮಡಿಲ ಪ್ರೀತಿಯ ಇನ್ನೆಲ್ಲೂ ನಾ ಕಾಣೆನು
ಮುಪ್ಪಿನಲ್ಲೂ ಕುಡಿಗಳ್ಮೇಲೆ ತೋರುವೆ ಅರ್ತಿಯನು


ಮನುಷ್ಯ ನೀನು ಖರ್ಚು ವೆಚ್ಚ ಲೆಕ್ಕಹಾಕಿ ಸಂಪತ್ತನ್ನು ಕೂಡಿಡ ಬೇಡಿ ನೀವು ಸತ್ತಾಗ ಕೊನೆಯಲ್ಲಿ ಆ ನೀವು ಕೂಡಿಟ್ಟ ಸಂಪತ್ತು ನಿಮ್ಮ ಜೊತೆಯಲ್ಲಿ ಬರಲಾರದು. ನಿಮ್ಮಲ್ಲಿ ಸಂಪತ್ತು ಇಲ್ಲದಿದ್ದರೂ ಪರವಾಗಿಲ್ಲ ಪ್ರೀತಿ ವಿಶ್ವಾಸವಿರಲಿ ಸದಾ ನಿನ್ನವರು ನಿನ್ನ ಜೊತೆಯಲ್ಲಿ ಇರಲಿ ಎಂದು ಈ ಶೀರ್ಷಿಕೆಯ ಕವನದಲ್ಲಿ ಹೇಳುತ್ತಾರೆ.

ರಾಮ ನಾಮ ಜಪ ಮಾಡಿದರೆ ಸಾಕೇ
ಒಳ್ಳೆಯ ನಡತೆ ಜೀವನಕೆ ಬೇಕಲ್ಲವೆ
ಕಾಲ ಪರಿವರ್ತನೆಯಾದರೂ ಮನಸ್ಸಲ್ಲಿ
ಭೇದಭಾವದ ಕೊಳಕು ತುಂಬಿದೆಯಿಲ್ಲಿ….  

ಪರಿವರ್ತನೆ ಜಗದ ನಿಯಮ ಶೀರ್ಷಿಕೆಯಲ್ಲಿ ಕವಯಿತ್ರಿ ಬಲು ಸೊಗಸಾಗಿ ಮಾನವನ ಅಂತ:ಕರಣ ಸೋಗಲಾಡಿತವನ್ನು ತಮ್ಮ ಸಾಲುಗಳಲ್ಲಿ ಹೇಳುತ್ತಾರೆ. ಬರೀ ದೇವರ ಧ್ಯಾನ ರಾಮನ ನಾಮವನ್ನು ಪಠಿಸುತ್ತಾ ಸಾಗಿದರೆ ಸಾಕೇ ನಮ್ಮಲ್ಲಿ ಒಳ್ಳೆಯ ಗುಣಲಕ್ಷಣಗಳು ಒಳ್ಳೆಯ ನಡತೆ ನಮ್ಮ ಜೀವನದಲ್ಲಿ ಬೇಕಾಗಿದೆ. ಪ್ರಪಂಚದಲ್ಲಿ ತಾಂತ್ರಿಕ ಯಾಂತ್ರಿಕವಾಗಿ ಯುಗವು ಕಾಲವು ಬದಲಾಗುತ್ತಿದ್ದರೂ ಇನ್ನೂ ನಮ್ಮ ಮನಸ್ಸಿನಲ್ಲಿ  ಮೇಲು ಕೀಳು ಶ್ರೇಷ್ಠ ಕನಿಷ್ಠ ಶ್ರೀಮಂತ ಬಡವ ಆ ಜಾತಿ ಈ ಧರ್ಮ ಎಂಬ ಭೇದಭಾವಗಳು ತುಂಬಿವೆಯಲ್ಲಾ ಅಂತ ಪ್ರತಿರೋಧಿಸುತ್ತಾರೆ.

ನೆರಳಗಂಟಿದ ಭಾವ ಕವನಸಂಕಲನದಲ್ಲಿ ಬಹಳಷ್ಟು ಕವಿಗಳು ಪ್ರಾಸವನ್ನು ಹೊಂದಿದ ಕವಿತೆಗಳಾಗಿವೆ. ಕುರುಡು ಕಾಂಚಾಣ, ನಂದಾದೀಪ, ರಸ ಋಷಿ ಕುವೆಂಪು
ಸ್ವಾತಂತ್ರ್ಯದ ಅಮೃತ ಮಹೋತ್ಸವ, ಲಿಪಿಗಳ ರಾಣಿ ಕನ್ನಡ,  ಸೋತ ಪ್ರೇಮಕೆ ಸಾವಿನ ಪಲ್ಲಕ್ಕಿ ಇನ್ನೂ ಮುಂತಾದ ಕವಿತೆಗಳು ಸ್ವಾದಭರಿತ ಸಾಲುಗಳಾಗಿ ಹೊರಹೊಮ್ಮಿವೆ. ಕನ್ನಡ ಕಂಪನು ಸೂಸುವ ಬಹಳಷ್ಟು ಕವಿತೆಗಳು ಈ ಕವನಸಂಕಲನದಲ್ಲಿವೆ. ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಸಾಗಿದೆ ಕೃತಿಯಲ್ಲಿನ ಕವಿತೆಗಳ ಸ್ವಾದ ಕಡಿಮೆಯಾಗಬಹುದು. ಇಂತಹ ಹೊಸ ಕವಯಿತ್ರಿಯರನ್ನು ಪ್ರೋತ್ಸಾಹಿಸುವ ಗುಣ ಪ್ರತಿಯೊಬ್ಬ ಓದುಗನಲ್ಲಿಯೂ ಮೂಡಬೇಕಿದೆ.

 ಈ ಕೃತಿಯ ಬಹಳಷ್ಟು ಕವಿತೆಗಳು ಹೆಣ್ಣುಮಕ್ಕಳ ಮನೋಗಾಥೆ ಆಗಿದೆ ಬರಹ ಚಿಗರೊಡೆಯುತಿದೆ. ಶ್ರೀಮತಿ ಸವಿತಾ ಮುದ್ಗಲ್ ರವರಿಂದ ಮತ್ತಷ್ಟು ಉತ್ತಮವಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಲಿ ಇವರ ಪ್ರತಿಭೆಯನ್ನು ಈ ಸಮಾಜ ಗುರುತಿಸಲಿ ಗೌರವಧಾರಗಳು ಸಿಗಲಿ ಎಂದು ಹಾರೈಸುವೆ.


One thought on “ಸವಿತಾ ಮುದ್ಗಲ್ ಅವರ ಸಂಕಲನ “ನೆರಳಿಗಂಟಿದ ಭಾವ” ಒಂದು ಅವಲೋಕನ ನಾರಾಯಣಸ್ವಾಮಿ (ನಾನಿ) ಅವರಿಂದ

  1. ಕೃತಿ ವಿಮರ್ಶೆ ಮಾಡಿದ ನಾನಿ sir ರವರಿಗೂ ಹಾಗೂ ಪ್ರಕಟಣೆ ಮಾಡಿದ ಸಂಗಾತಿ ಸಂಪಾದಕರಿಗೂ ಹೃತ್ಪೂರ್ವಕ ಧನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಸದಾ ಜೊತೆಗಿರಲಿ ಎಂದು ಕೇಳಿಕೊಳ್ಳುತೇನೆ, ಧನ್ಯವಾದಗಳು ಮಗದೊಮ್ಮೆ

Leave a Reply

Back To Top