ರಣರಣ ಸುರಿಯೋ ಬಿಸಲ್ನಾಗಿಂದ ಮದ್ಯಾನ್ಹ ನಡಕೊಂತ ಬರತಿರೋ ಸುಮನ ನೋಡಿ , ಎನೇ ಸುಮಾ ಇಷ್ಟು ಉರಿ ಬಿಸಲಾಗ ಎಲ್ಲಿಂದ ಬರಲತೀದ್ದಿ ಅಂದೆ . ಮಾರಿ ಮ್ಯಾಲಿನ ಬಸಿಯುವ ಬೆವರು ಕರ್ಚಿಫನಿಂದ ಒರೆಸಕೊಂತ , ಟೀಚರ ಮನ್ಯಾಗ ಫಂಕ್ಷನ್ ಇತ್ತಲ್ರೀ ಅಲ್ಲಿಗೇ ಹೋಗಿ ಬರಲತಿನೀ , ನೀವು ಯಾಕೋ ಬರಲಿಲ್ಲಲ , ಆರಾಮ ಇದ್ರೀಲ್ಲ ಅಂತ ಕೇಳ್ದಳು.
ಆರಾಮೇ ಇದ್ದೀನೀ , ಆದ್ರ ಈ ಬಿಸಲಿಗಿ ಅಂಜಿ ಹೊರಗ ಬರಲಕ್ಕ ಆಗತಿಲ್ಲ. ಆ ಫಂಕ್ಷನ್ ಊಟ ಒಂದು ನಮೂನಿ ಅಜೀರ್ಣ ಮಾಡತದ , ಬರೀ ನೀರು ಕುಡದೇ ಹೊಟ್ಟಿ ತುಂಬಿ ಬಿಡಲತದ , ಊಟನೇ ಸೇರತಿಲ್ಲ ಈ ಬಿಸಲಿಗಿ , ಅದಕ್ಕ ಬರಬೇಕ ಅನಿಸಲಿಲ್ಲ ನೋಡು. ರೊಟ್ಟಿ ಉಳಾಗಡ್ಡಿ ಖಾರ ಮಾಡಿದ್ದ ಅದೇ ಊಟ ಮಾಡಿಬಿಟ್ಟ , ಅದಕ್ಕ ಬರಲಿಲ್ಲ ಅಂದೆ.
ಖರೇರಿ , ಆದ್ರ ಕರದ್ರ ಹೋಗಲೇ ಬೇಕಲ್ಲ , ನಮ ಸಲುವಾಗಿ ಅಡುಗಿ ಮಾಡಸಿರತಾರ , ಎಲ್ಲರೂ ಬಿಸಲಿಗಿ ಅಂಜಿ ಹೋಗದಿದ್ರ ಅವರು ಅಡಿಗಿ ಮಾಡಸಿದ್ದು ದಂಡನೆ ಅಗತದ ಅಲ್ಲ. ಮತ್ತ ಇಜ ಫಂಕ್ಷನ್ ಗಳು ಬಿಸಲಾಗ ಯಾಕರೆ ಇಟ್ಟಕೋತಾರ ಅಂಬೋಹಂಗ ಆಗತದ. ಕರದ್ರ ಹೋಗಲಾಕ ಲೆಕ್ಕ ಹಾಕತೀವಿ. ಕರೆದಿದ್ರ ಕೆರದೇ ಇಲ್ಲ ನೋಡ್ರಿ ಅಂತ ದಿಟ್ಟಗತೀವಿ. ಅಂದಳು ನಕ್ಕೋತ.

ನೀನ ಅಂಬೋದು ಖರೇನೆ ಅದ ಬಿಡು. ಬಿಸಿಲ ನಾಡಿನಾಗಿರೋ ನಮ್ಮಂತವರಿಗೇ ಈ ಬಿಸಲು ಇಷ್ಟ ಸಾಕಮಾಡ್ಯಾದ. ಹೋಸ ಬಟ್ಟೆ ಹಾಕ್ಕೊಂಡು ಫಂಕ್ಷನ್ ಗ ಹೋಗಿ ಬರೋಷ್ಟರಲ್ಲಿ ಮೈ ತೋಯ್ದ ತೊಪ್ಪಿ ಆಗಲತದ. ಇನ್ನ ಆ ಸ್ಟೇಜ್ ಮ್ಯಾಲ್ ನಿಂತೋರ ಪಾಡ ಕೇಳಬಾರದು. ಎ ಸಿ ಗಳು ಕೆಲಸ ಮಾಡಲ್ಯಾಗ್ಯಾವ ಈ ಬಿಸಲಿಗಿ ಅಂದೆ , ಬಿಸಿಲಿಗಿ ಬೈಕೋಂತ.

ಪಕ್ಕದಲ್ಲಿ ಕಟ್ಟಡ ಕೆಲಸ ಮಾಡೋ ಕಾರ್ಮಿಕರು ಬಿಸಿಲಾಗ ಮಣ್ಣು ಕಲ್ಲು ‌ಬುಟ್ಟಿ ಹೊತ್ತುಕೊಂಡು ಕೆಲಸ ಮಾಡತಿದ್ರೂ , ನಾವು ನೆರಳಾಗ ಬಿಸಿಲಿಗಿ ಬೈಕೊಂತ ನಿಂತ್ರ ಅವರು ಬಿಸಿಲಿಗಿ ಮೈ ಒಡ್ಡಿ ದುಡಿತಿದ್ರೂ , ಬಿಸಲಿನ ಬಗ್ಗೆ ಯಾವ ಮುನಿಸು ಇರದೆ.

ಯಾಕೋ ಮನಸ್ಸು ಒಜ್ಜಿ ಆಯಿತು.ಸೌಲಭ್ಯ ಹೆಚ್ಚಾದಷ್ಟು ನಮ್ಮ ಮೈ ಮನಸ್ಸು ಆರಾಮ ಬೇಡತದ.ಅನಿವಾರ್ಯ ಸಂದರ್ಬಗಳು ಎಂತಾ ಬಿಸಿಲು ಮಳಿ ಚಳಿದಾಗೂ ನಡಿತಾ ಇರತಾವ. ಬೇಡವಾದದಕ್ಕ ಇವೆಲ್ಲವೂ ನಮಗ ಒಂದು ನೆವ ಅಷ್ಟ.

ಹಂಗೇ ಸುಮಾ ಹೋದ ಫಂಕ್ಷನ್ ಬಗ್ಗೆ ಮಾತಾಡ್ತ ನಿಂತಾಗ ಪಕ್ಕದಲ್ಲಿ ಕೆಲಸ ಮಾಡೋ ಕಾರ್ಮಿಕರ ಮೋಬೈಲ್ ನಿಂದ ಕರಿಮಣಿ ಮಾಲಿಕ ನೀನಲ್ಲ ಎಂಬ ಹಾಡಿನ ಸದ್ದು ಮತ್ತು ಅದರೊಂದಿಗೆ ನಾಲ್ಕಾರು ದ್ವನಿಗಳು ಒಟ್ಡಿಗೆ ಹಾಡಿದ್ದು ಮತ್ತು ಕರಿಮಣಿ ಮಾಲಿಕ ರಾವುಲ್ಲ ಅಂದಾಗ ಎಲ್ಲರೂ ಜೋರಾಗಿ ನಕ್ಕ ಶಬ್ದ ಕೇಳಿ ನಮ್ಮ ಮಾತು ಮರೆತು ಅವರತ್ತ ನೋಡತಾ ನಿಂತೆವು.

ಈ ಹಾಡು ಅದ್ಯಾಕ ಅಷ್ಟು ಫೇಮಸ ಆಯ್ತು ನನಗಂತೂ ಅರ್ಥನೇ ಆಗಿಲ್ಲ ಒಂದೊಂದು ಹಾಡಿಗಿ ಒಮ್ಮೊಮ್ಮ ಶುಕ್ರದೆಸಿ ಖುಲಾಸಿದಂಗ ಈಗ ಸದ್ಯಕ್ಕೆ ಈ ಹಾಡಿನ ಹಣಿಬರ ತೆರದದ ಅಷ್ಟ.ಈ ತರ ಫೇಮಸ್ ಆದ ಹಾಡಗಳ ಅಯುಷ್ಯ ಬಾಳ ಇರಲ್ರೀ .ಸ್ವಲ್ಪ ದಿನ ಉರದು ತಣ್ಣಗಾಗತವ. ಅಷ್ಟರಾಗ ಎಲ್ಲರ ಮೋಬೈಲ್ ದಾಗ ಇದರ ರೀಲ್ಸಗಳು ಡ್ಯಾನ್ಸಗಳು ಜೋಕ್ಸಗಳು ಹರದಾಡಿ ಇನ್ನ ಇದರಾಗ ಏನೂ ಜೀವ ಉಳಿದಿಲ್ಲ ಅಂದಾಗ ಮಾಯ ಆಗತಾವ. ಈಗ ಅಂತದ್ಧೆ ಒಂದು ಉರಿಯೋ ಹಾಡು ಎಲ್ಲರ ಫಂಕ್ಷನ ಗಳ ಕೇಂದ್ರ ಬಿಂದು.ಎಲ್ಲರೂ ಈ ಹಾಡಿಗಿ ಡ್ತಾನ್ಸ ಮಾಡಲೇಬೇಕು. ಕರಿಮಣಿ ಮಾಲಿಕ ರಾಹುಲ್ಲ ಅಂದಾವ ಜೋರಾಗಿ ನಗಬೇಕು.ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ ಬೀಡ್ರೀ.

ಸುಮಾನೂ ಈ ಹಾಡಿನ ಬಗ್ಗೆ ಮಾತಾಡ್ತ , ಎನ್ರೀ ಅಕ್ಕೋರೇ‌, ಎಲ್ಲರೂ ಈ ಹಾಡಿಗಿ ಫೇಮಸ್ ಮಾಡ ಬಿಟ್ಟಾರ. ಕರಿಮಣಿ ಮಾಲಿಕ ನೀನಲ್ಲ , ರಾವುಲ್ಲ ಅಂತ ಗಂಡನ ಮುಂದ ಹೇಳತಾರ್ರೀ , ಅಂದಳು ನಕ್ಕೋತ.

ನನಗೂ ನಗು ತಡಿಯಕ್ಕ ಆಗಲಿಲ್ಲ. ಪಾಪ ಆ ರಾವುಲ್ಲ ನ ಟೈಮ್ ಸರಿಗಿಲ್ಲ ಬುಡು ಎಲ್ಲರೂ ಮಾಲಿಕ, ರಾವುಲ್ಲ ಅಂದ್ರ  ಅವನಾರ ಏನು ಮಾಡಬೇಕು.ಎಲ್ಲರ ಕರಿಮಣಿ ತಗೊಂಡು ನೇಣ ಹಾಕ್ಕೋಬೇಕು ಅಷ್ಟ ಅಂದಾಗ , ಇಬ್ಬರಿಗೂ ನಗು ತಡಿಲಿಕ್ಖ ಆಗಲಿಲ್ಲ.

ನಾನು ಚಿಕ್ಕವಳಿದ್ದಾಗಿನಿಂದ ಈ ಕರಿಮಣಿ ಮುತೈದೆ ಸಂಕೇತ.ಇದನ್ನು ಧರಿಸೋದರಿಂದ ಗಂಡನ ಆಯುಷ್ಯ ಹೆಚ್ಚಾಗತದ.ದೀನಾ ಮುಂಜಾನೆದ್ದು ಕರಿಮಣಿ ಸರಕ್ಕ ಕಣ್ಣಿಗೊತ್ತಿಕೊಳ್ಳಬೇಕು ಇಂತವೆಲ್ಲ ನಮ್ಮಜ್ನಿ ಅಮ್ಮ ಅತ್ತೆ ಎಲ್ಕರೂ ಮಾಡದು ನೋಡಿ  ಕರಿಮಣಿ ಸರ ಅಂದ್ರ ಎನೋ ಸ್ಪೆಷಲ್ ಅಂಬೊ ಭಾವನೆ ಇತ್ತು. ಮದಿವಿ ಆದ ಮ್ಯಾಲ ನನ್ನ ಕುತ್ತಗಿಗಿ ಕರಿಮಣಿ ಸರ ಬಂದ ಮ್ತಾಲ್ ಅದರ ಮ್ಯಾಲ್ ಎನೋ ಒಂದ ರೀತಿ ಮೋಹ ಬೆಳಿತು. ಅದು ಬಂಗಾರದೊಡವಿ , ಹೆಣ್ಣು ಮಕ್ಕಳಿಗಿ ಬಂಗಾರ ಅಂದ್ರ ಮೋಹ ಸಹಜ. ನನಗೂ ಹಂಗೇ , ಯಾವ ಡಿಜೈನಿನ್ ಗಂಟನ್ ಸರ ಮಾಡಿಸ್ಕೊಬೇಕು. ಹೋಸ‌ಹೊಸ ಡಿಸೈನ್ ಯಾವ್ದು , ಯಾರ ಕೊಳ್ಲಾಗ ಯಾವ ಯಾವ ಡಿಸೈನ್ ಮಂಗಳಸೂತ್ರ ಅವ.  ಹಿಂಗ್ ಮಂಗಳ ಸೂತ್ರದ ಮೋಹ ಬಂಗಾರ ಎಂಬ ಕಾರಣಕ್ಮ ಬೆಳಿದಿದ್ದಾಗಿರಬಹುದಾ ಅಂತ ಈಗ ಅನಿಸ್ತಿದೆ. ಅದರೊಂದಿಗೆ ಸ್ವಲ್ಪ ಭಯನೂ ಇತ್ತು ಅನ್ರೀ. ಕರಿಮಣಿ ಗಂಡ ಇರೊರು ಕುತ್ತಿಗಿನಿಂದ ತೆಗಿಲೇ ಬಾರದು.ತೆಗೆದ್ರೇ ಅಪಶಕುನ ಹಾಗೇ ಹೀಗೆ ಗಳ ಭಯದ ಬೂತ ತಲೆಯಲ್ಲಿ ಕುಳಿತಿತ್ತು. ಇಲ್ರೀ ತಲ್ಯಾಗ ಕೂಡಸಿದ್ರೂ ಅನ್ನಿ.

ನಾನು ಇಲ್ಲಿವರೆಗೂ ಈ ಹಾಡು ಪೂರ್ತಿ ಕೇಳಿಲ್ಲ.ನನ್ನ ನೆನಪಿನಾಗ ಉಳಿದದ್ದು , ನೀನಲ್ಲ ಮತ್ತು ರಾವುಲ್ಲ ಎಂಬ ಎರಡೇ ಶಬ್ದಗಳು.

ನನಗ ಬರತಾ ಬರತಾ ಕರಿಮಣಿ ಅಂಬೋದು ಬರಿ ಒಂದು ಒಡವೆ ವಿನಾ ಮತ್ತೆನೂ ಇಲ್ಲ ಅಂತ ಅನಿಸಾಕ ಶುರುವಾತು. ಇಷ್ಟರಲ್ಲಾಗಲೇ ನಾನು ಒಂದು ನಾಲ್ಕು ಕರಿಮಣಿ ಸರದ್ದು ಡಿಸೈನ್ ಚೆಂಜ್ ಮಾಡಿದ್ಧೆ. ಯಾಕೋ ಇವೆಲ್ಲ ಸುಮ್ನ ಕುತ್ತಗೀಗಿ ಒಜ್ಜಿ ಅನಿಸಿ ಬರಿ ಕರಿಮಣಿದೆ ಒಂದೇಳಿ ಸರ ಹಾಕ್ಕೊಂಡು ನನ್ನ ವಿವಿಧ ಕರಿಮಣಿ ಸರಗಳ ಮೋಹಕ್ಕ ತಿಲಾಂಜಲಿ ಬಿಟ್ಟೆ.

ನಾವು ಕರಿಮಣಿ , ಕುಂಕುಮ , ಬಳಿ‌ ಇವೆಲ್ಲ ಮುತೈದಿ ಸಂಕೇತಗಳು ಅಂತ ಎಷ್ಟೇ ಸಾರಿ ಹೇಳಿದ್ರೂ ಇವೆಲ್ಲ ಹೆಣ್ಣಿನ ಅಲಂಕಾರಿಕ ವಸ್ತುಗಳು ಎಂಬುದು ಎಂದಿಗೂ ಮರಿಬಾರದು.ಗಂಡ ಬರುವದಕ್ಕಿಂತ ಮುಂಚೆಗೂ ಇವು ನಮ್ಮ ಅಲಂಕಾರಿಕ ವಸ್ತುಗಳು ಆಗಿದ್ವು.ಗಂಡ ಇಲ್ಲದಿದ್ರೂ ಇವು ಸದಾ ಹೆಣ್ಣಿನ ಅಲಂಕಾರಿಕ ವಸ್ತುಗಳೆ ಆಗಿರತವ. ಒಡವೆಗಳಿಂದ ಗಂಡನ ಇರುವು ಅಳೆಯುವ ಪ್ರಯತ್ನ ಮೂರ್ಖತನದ್ಷೆ.

ಮದುವೆ ಆದ ಮೇಲೆ ಹೆಣ್ಣಿಗೆ ಕರಿಮಣಿ ಸರ ಮಹತ್ವ ದ್ಷು ಎಂಬ ಬಗ್ಗೆ ಅಲ್ಲಗಳೆಯಲೂ ಆಗದು.
ಸಂಪ್ರದಾಯ ನಮಗ ಕಟ್ಟಿ ಹಾಕಬಿಟ್ಟಿದೆ. ಆದ್ರ ಸಂಪ್ರದಾಯದ ಅಡಿಯಾಳು ನಾವಾಗಬಾರದು. ಹಾಕಿಕೊಳ್ಳೊದು ಬಿಡೊದು ನಮ್ಮಿಷ್ಟ ಆಗಿರಬೇಕೆ ಹೊರತು ಅದನ್ನು ಹಾಕಿಸೋದಾಗಲಿ ತೆಗೆಸೋದಾಗಲಿ ಸಮಾಜದ ಒತ್ತಾಯದಿಂದ ಆಗಬಾರದು.

ಅಭಿನೇತ್ರಿ ಶಿಲ್ಪ ಶೆಟ್ಟಿ ಕೊರಳಿಗಿ ಹಾಕೊಳ್ಳೋ ಕರಿಮಣಿ ಸರ ಮುಂಗೈಗೆ ಹಾಕ್ಕೋಂಡಿದಕ್ಕೆ ಅಲ್ಲಿನ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿ ಅವಳನ್ನು ತೆಗಳಲಾಯಿತು. ಕರಿ ಮಣಿ ಎಂಬ ಮುತ್ತು ಕೂಡ ಬೇರೆ ಬಣ್ಣದ ಮುತ್ತುಗಳಂತೆ ಒಂದು ಬಣ್ಣದ ಮುತ್ತು ಎಂದು ನಮಗೇಕೆ ಅರ್ಥ ಅಗಲ್ಲ.ಆದ್ರೂ ಹೆಣ್ಣನ್ನು ಬಂಧನದಲ್ಲಿ ಬಂಧಿಸೋ ಸಲುವಾಗಿ ಮಾಡಿದ  ಈ ಪ್ರದಾಯ ಮುರಿಯಲು ಈ ಪುರುಷ ಸಮಾಜ ಬಿಡೋದಿಲ್ಲ…

ನನ್ನ ವಿಚಾರ ಲಹರಿ ಹೀಗೆ ಎತ್ತೆತ್ತಲೋ ಸಾಗತಿರಬೇಕಾದ್ರ ಅಕ್ಕೋರೆ  ಎಂಬ ಸುಮಾನ ಶಬ್ದ ನನಗ ಎಚ್ಚರಿಸ್ತು.

ಅಂದಂಗ ನಾನು ಒಂದು ಮಿನಿ ಗಂಟನ್ ಮಾಡಿಸ್ಕೊಂಡ್ ನೋಡ್ರೀ  , ವರ್ಷಕ್ಕೆ ಒಂಬತ್ತ ತಿಂಗಳ ಬರಿ ಧಗಿನೇ ಇರೋ ನಮ್ಮ ಕಡಿ ಈ  ಬೆವರಿಗಿ ಸಾಕ ಆಗಲತದ. ಕುತ್ತಗಿ ಸುತ್ತ ಬೆವರ ಬಿಟ್ಟು ಬ್ಯಾಸಲಗಿ ಆಗಲತಾವ್ರೀ , ಆ ಒಜ್ಜಿ ತಾಳಿ ತೆಗದು ಬರಿ ಒಂದೇಳಿ ಸರ ಹಾಕ್ಕೊಂಡಿದಕ್ಕ ಕೊಳ್ಳಿಗಿ ಎಷ್ಟೋ ಹಗುರ ಆಗ್ಯಾದ ನೋಡ್ರಿ ಅಂದಳು ತನ್ನ ಸರ ತೊರಿಸಿ.

ಹೌದ ಮತ್ತ , ಸುಮ್ನ ಕೊಳ್ಳಿಗಿ ಭಾರ ಮಾಡಕೊಳ್ಳೊದು ಯಾಕ ಬೇಕಾಗಿರಬೇಕು. ಅಂದರೂ ಮನದಲ್ಲೆಲ್ಲೋ ಕುಟುಕಿದಂತಾಯಿತು. ಎಷ್ಟೊ ಹೆಣ್ಣು ಮಕ್ಕಳು ಗಂಡ ತೀರೀದ ನಂತರವೂ ತಾಳಿ ತೆಗೆಯದೇ ಅದನ್ನು ಒಂದು ರೀತಿ ತಮ್ಮ ಪ್ರೊಟೆಕ್ಷನ್ ಸಲುವಗಿ ಇಟ್ಟುಕೊಂಡು ಓಡಾಡುವದು ನೋಡಿದ್ರೆ ನಮ್ಮ ಅಸಹಾಯಕತೆಗೆ ಮನ ರೊಧಿಸತದ.ಒಂಟೀ ಹೆಣ್ಣಿನ ಬವಣೆ ಬಾಳ ಇರತದ.ಅದರಾಗೂ ಗಂಡ ಇಲ್ಲದ ಮಹಿಳೆಗೆ ಸದಾ ನಾಲ್ಕೂ ದಿಕ್ಕಿನಿಂದ ಇರಿಯೋ ನೋಟ ತಪ್ಪಸಿಕೊಳ್ಲಕಾಕ ಆಕಿ ಅದನ್ನು ತನ್ನ ಕುತ್ತಿಗಿಗಿ ಸುತ್ತಕೊಂಡೆ ಇರಬೇಕಾದ ಅನಿವಾರ್ಯ ತೆ ಅದಾ.

ಒಂದು ಕಡೆ ಗಂಡ ಇದ್ದವರು ಫ್ಯಾಷನ್ ಹೆಸರಿನಾಗ ಕರಿಮಣಿ ತೆಗೆದು ಓಡಾಡಿದ್ರ , ಇನ್ನೊಂದು ಕಡಿ ಗಂಡ ಇಲ್ದೊರು ತಮ್ಮನ್ನು ತಾವು ಕಾಪಾಡಿಕೊಳ್ಳಲಾಕ ಕರಿಮಣಿ ಹಾಕ್ಕೊಂಡು ಓಡಾಡಬೇಕಾಗೇದ. ಎಂತ ವಿಪರ್ಯಾಸ .

ಯಾಕೋ ಈ ಕರಿಮಣಿ , ಕಾಲುಂಗ್ರ , ಕುಂಕುಮ , ಬಳೆ , ಮುಗೂತಿ , ಕಿವಿಯೋಲೆ , ಎಲ್ಲವೂ ನನ್ನ ಸುತ್ತ ಸುತ್ತತ್ತ ಸುತ್ತತ್ತ ನನಗ ನುಂಗಿ ಬಿಡತಾವೇನೋ ಅನಿಸಿ ತಲಿ ಗಿರ್ರ ಅನ್ನತಿದ್ದಂತೆ..

ಮತ್ತೆ ಕರಿಮಣಿ ಮಾಲಿಕ ರಾವುಲ್ಲ ಎಂದು ಜೋರು ಶಬ್ದಕ್ಕೆ ಸುಮಾ.. ಅಕ್ಕೋರೇ , ಅಂದಂಗ ಈ ರಾವುಲ್ಲ ಅಂಬೋನು ಯಾರ್ರೀ ಅಂತ ಕೇಳಿದಳು.
ಉತ್ತರ ಗೊತ್ತಿಲ್ದೆ ಪಿಳಿ ಪಿಳಿ ಕಣ್ಣು ಬಿಟ್ಟಕೊಂತ ನಿಂತ..

ಅಂದಂಗ ಈ ರಾವುಲ್ಲ ಅಂಬೋ ಕರಿಮಣಿ (ಫ್ಯಾಕ್ಟರಿ) ಮಾಲಿಕ ನಿಮಗ ಗೊತ್ತಿದ್ರ ನಮಗೀಟ ಹೇಳ್ರೀ..


One thought on “

  1. ಬಾಳ ಸುಂದರವಾದ ಕಲಬುರಿಗಿ ಭಾಷೆ ಅದರಲ್ಲೂ ಗಡಿಭಾಗದ ಭಾಷೆ ತಮ್ಮ ಹಿಡಿತಕ್ಕೆ ತಗೊಂಡು ಬರಯೊದು ಬಾಳೆ ಖುಷಿ ಆಯ್ತಿರಿ. ನಮ್ಮ ಕಲಬುರಗಿ ಭಾಷೆ ತಾಕತ್ತು ಬಾಳ ಜನಗೊತ್ತಿಲ್ಲರಿ ಅಕ್ಕರ. ಅದನ್ನ ಹೆಚ್ಚು ಹೆಚ್ಚು ಬರೆದು ಕಲಬುರಗಿ ಕನ್ನಡ ಅದು ಎಲ್ಲದಕ್ಕಿಂತ ಗಟ್ಟಿದಾ ಅಂತಾ ತೊರಿಸಿರಿ.

Leave a Reply

Back To Top