ಜನಪದ ತತ್ವಪದಕಾರರು ಜೆ.ಪಿ.ಶಿವನಂಜೇಗೌಡರು ವ್ಯಕ್ತಿ ಪರಿಚಯ-ಗೊರೂರು ಅನಂತ್ ರಾಜು

ಹಾಸನ ಜಿಲ್ಲೆಯ ಹೆಸರಾಂತಜನಪದ ತತ್ವಪದ ಗಾಯಕರು  ಜೆ.ಪಿ.ಶಿವನಂಜೇಗೌಡರು  ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಸಬ್ ಇನ್ಸ್ಪೆಕ್ಟರ್ ಆಗಿ ೨೦೦೧ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಹಾಸನ ತಾ. ದೊಡ್ಡಗೇಣಿಗೆರೆ ಗ್ರಾಮದ ಪುಟ್ಟೇಗೌಡ  ಬೋರಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ ೧೦-೭-೧೯೪೩ರಲ್ಲಿ ಜನಿಸಿದರು. ಪ್ರೈಮರಿ ಶಾಲೆ ದೊಡ್ಡಗೇಣಿಗೆರೆ  ಮಾಧ್ಯಮಿಕ ಭುವನಹಳ್ಳಿ, ಹೈಸ್ಕೂಲು ಹಾಸನದಲ್ಲಿ ಪೂರೈಸಿದರು. ಇವರ ಅಳಿಯ ಹ್ಯಾರಾನೆ ಗ್ರಾಮದ ಡಾ.ಡಿ. ವಸಂತಕುಮಾರ್ ಹಾಸನದ ಹೇಮಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪಂಪನ ಕಾವ್ಯಗಳ ಬಗ್ಗೆ ಬೋಧಿಸುತ್ತಲೇ ಪಂಪ ಒಂದು ಅವಲೋಕನ ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಈ ಕೃತಿ ಕುರಿತ್ತಾಗಿ ನಾನು ಬರೆದ ಬರಹ ೨೦೧೨ರಲ್ಲಿ ಪ್ರಕಟಿತ ನನ್ನ ಹಗಲು ಕನಸಿನಲ್ಲಿ ಕಟ್ಟಿದಾ ಮನೆಯೊಳಗೆ ಪುಸ್ತಕದಲ್ಲಿದೆ. ವಸಂತಕುಮಾರ್ ಡಾ.ಅಂಬಳಿಕೆ ಹಿರಿಯಣ್ಣನವರ ಮಾರ್ಗದರ್ಶನದಲ್ಲಿ  ಹೇಮಾವತಿ ನದಿ ತೀರದ ಜಾನಪದ ಎಂಬ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ ಪಡೆದಿದ್ದರು. ಈ ಪ್ರಬಂಧ ಬರೆಯುವ ಸಂದರ್ಭ ೧೯೯೨ರಲ್ಲಿ ಪ್ರಕಟಿತ ನನ್ನ ಗೊರೂರು ಹೇಮಾವತಿ ದರ್ಶನ ಪುಸ್ತಕ ಪಡೆದಿದ್ದರು. ಇನ್ನು ಶಿವನಂಜೇಗೌಡರು ಗೊರೂರಿನಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ನಾನೊಂದು  ಆವೇಶದ ಅಪರಾಧ ಎಂಬ ಕಥೆ ಬರೆದು ಇದು ನನ್ನ ಕಥೆಗೆ ವಸ್ತುವಾದಳು ಹುಡುಗಿ ಕಥಾ ಸಂಕಲನದಲ್ಲಿದೆ. ಈ ಕಥೆ ಬರೆಯುವ ದಿನಗಳಲ್ಲಿ ಸುಧಾ, ಅರಗಿಣಿ  ಪತ್ರಿಕೆಗಳಲ್ಲಿ ಪೋಟೋ ಕಾಮಿಕ್ಸ್ ಬರುತ್ತಿತ್ತು. ಈ ಪ್ರಭಾವಕ್ಕೆ ಸಿಲುಕಿ ನಾವು ಪೋಟೋ ಸ್ಟೋರಿ ಮಾಡಲು ಶಿವನಂಜೇಗೌಡರನ್ನೇ ಎಸ್.ಐ.ಪಾತ್ರಕ್ಕೆ ಆರಿಸಿಕೊಂಡಿದ್ದೆವು. ಕಥೆಯಲ್ಲಿ ಬರುವ ವರದಿಗಾರ ರಾಜು ಪಾತ್ರದಾರಿ ನಾನೇ ಆಗಿ ಇವರೊಂದಿಗೆ ಸಂದರ್ಶಿಸುವ ಸನ್ನಿವೇಶದ
ಪೋಟೋ ಶೂಟಿಂಗ್ ಮಾಡಿದ್ದೆವು. ಆಗ ಇವರು ಗಾಯಕರೆಂದು ತಿಳಿದಿರಲಿಲ್ಲ. ಹಾಸನಕ್ಕೆ ಬಂದು ನೆಲೆಸಿದ ಮೇಲೆ ಇವರ ಹಾಡುಗಾರಿಕೆ ಕೇಳಿದ್ದೇನೆ. ಇವರ ಜನಪದ ತತ್ವಪದ  ಹಾಡುಗಾರಿಕೆ ಗುರುತಿಸಿ ರಾಮನಗರದ  ಕರ್ನಾಟಕ ಜಾನಪದ ಪರಿಷತ್ತು ೨೦೨೩ರ ಮಾರ್ಚಿ ೪, ೫ರಲ್ಲಿ ನಡೆದ ಜಾನಪದ ಲೋಕೋತ್ಸವದಲ್ಲಿ ೨೦೨೩ನೇ ಸಾಲಿನ ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಜನಪದ ಲೋಕ ಪ್ರಶಸ್ತಿ  ನೀಡಿ ಸನ್ಮಾನಿಸಿದೆ. ೨೦೧೫ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರು. ೨೦೧೭ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿದೆ. ೨೦೧೮ರಲ್ಲಿ ಹಾಸನ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ೨೦೧೯ರಲ್ಲಿ ಹಾಸನದ ಬಸವ ಕೇಂದ್ರದಿಂದ ಕಾಯಕ ಶ್ರೀ ಪ್ರಶಸ್ತಿ ಪಡೆದಿರುವರು. ೨೦೨೩ರಲ್ಲಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ೨೯ನೇ ರಾಜ್ಯಮಟ್ಟದ ಭಜನಾ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತತ ಹತ್ತು ವರ್ಷಗಳಿಂದ ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನ ಸ್ಫರ್ಧೆಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಎಂಬತ್ತರ ಇಳಿ ವಯಸ್ಸಿನಲ್ಲೂ ತಮ್ಮ ಮೆಚ್ಚಿನ ಹವ್ಯಾಸವನ್ನು ಹೆಚ್ಚು ಉತ್ಸುಕತೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮ ಹಾಡುಗಾರಿಕೆ ಮುಂದುವರೆಸಿದ್ದಾರೆ.
 ——————————-

Leave a Reply

Back To Top