ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಬಿಸಿಲಿಗೂ ನಿಮಗೂ ನಮಸ್ಕಾರ
ನಾನು ಬರೆಯ ಹೊರಟದ್ದು
ಬಿಸಲಿಲ ಹಾಡು
ಏಕೆಂದರೆ ಬಾಲ್ಯದಲಿ
ಬಿಸಿಲೇ ಹಾಸಿ ಹೊದ್ದ
ನನಗೆ
ಬಿಸಿಲೇ ಜೋಗುಳ ಹಾಡಿದ್ದು
ಅಪ್ಪನ ಬೆವರು
ಕಾಲ ಕೆಳಗಿನ ಮಣ್ಣು
ಹದವಾಗಿ ಬೀಜಕ್ಕೆ
ತವರಾಗಿತ್ತು
ಅವ್ವ ಒಲೆಯ
ಮುಂದೆ ಕುಳಿತು ಸುಡುವ
ರೊಟ್ಟಿ ಬೇಯಿಸುತ್ತಲೇ
ಹಾಡಾದಳು
ಅಣ್ಣ ತಮ್ಮ ಬಿಸಿಲಲ್ಲೆ
ಅವರಿವರ ಮನೆಯ
ಮುಂದೆ ನಿಂತು
ಬಿಕ್ಕೆ ಬೇಡಿದರು
ಅಕ್ಕ ತಂಗಿಯರು
ಬಿಸಿಲಲ್ಲೆ ಹಡದಿ
ಹಾಸಿದ ಹಾಡು
ಆಗ
ರಾತ್ರಿ ಮೂಡಿದ ತಂಪಲ್ಲು
ನನಗೆ ಬಿಸಿಲಿನದೆ
ನೆನಪು
ಪ್ರತಿ ಬೇಸಿಗೆಯು
ನನ್ನೊಳಗೆ ಹೊಸ
ಆಸೆಗಳ ಹುಟ್ಟಿಸಿ
ಫಲವ ಚಿಗುರೊಡೆಯುತ್ತಿತ್ತು
ಹೌದು ಈಗ…
ತಂಪು ತಾರಸಿಯ ಕೆಳಗೆ
ವಾತಾನುಕೂಲಿತ ಗಾಳಿ
ಕುಡಿಯುತ್ತಾ ನೆರಳಲ್ಲಿ
ಕೂತ ನನಗೆ ಬಿಸಿಲ
ಬಗ್ಗೆ ಹಾಡ ಬರೆಯಲು
ಅಧಿಕಾರವಿಲ್ಲ
ಐದು ಆರಂಕಿ ಸಂಬಳ
ಕಿಸೆಗೆ ಹಾಕಿಕೊಳ್ಳುವ
ನಾನು ನನ್ನಂಥವರು
ಈ ತಂಪುಗಾಳಿಯಲ್ಲಿ ಕೂತು
ಬಿಸಿಲಿನ ಬಗ್ಗೆ ಹಾಡು
ಬರೆಯುವದು ನಗೆ
ತರಿಸುತ್ತದೆ
ಆ ಬಿಸಿಲ ದಾರಿಯಲ್ಲಿ
ನಾನೂ ಕೆಂಡದಂತಹ ಕಲ್ಲು
ತುಳಿದು ಬೆಳೆದಿದ್ದೇನೆ..ನಿಜ
ವಿಷಾದದ ಮಾತೆಂದರೆ
ಅ ಬಿಸಿಲ ಮರೆತಿದ್ದೇನೆ..
ಖಂಡಿತ ಹೇಳುವೆ
ಈ ಬಿಸಿಲ ಅನುಭವ
ನನ್ನವಳಿಗಿಲ್ಲ
ನನ್ನ ವಾರಸುದಾರರಿಗಂತು
ಬಿಸಿಲಿನ ಝಳ ಬಡಿಯಲು
ಸಾಧ್ಯವೇ ಇಲ್ಲ
ಆದರೂ
ಬಿಸಲಿ ವಾರಸುದಾರರೆಂದೆ
ಹೇಳುವದು
ತುಸುವಾದರೂ
ನಾಚಿಕೆ ತರಿಸಬೇಕಿದೆ
ಗೆಳೆಯರೆ,
ಬಿಸಿಲೀಗ ನೆನಪು ಅಷ್ಟೇ
ಅಲ್ಕಿ ಸುಡುವ ಉರಿಯಲ್ಲಿ
ಉರಿವ ಅಣ್ಣ ತಮ್ಮರ
ನೆನಪು ಈ ಹಾಡು ಮೂಡಿಸಿದೆ
ಮೂಡಿದ ಹಾಡಿಗೂ
ನೆನಪಿಸಿದ ನಿಮಗೂ
ನಮಸ್ಕಾರ
——————-
ವೈ.ಎಂ.ಯಾಕೊಳ್ಳಿ
ಯಾಕೋಳ್ಳಿ ಸರ್, ತಮ್ಮ ವಿಚಾರ ಲಹರಿ ಚಿಂತನಾ ಚಿಗುರು ವಿಶಿಷ್ಟವಾದುದು ಉಂಡ ಹಸಿ ಹಸಿ ಅನುಭವಗಳು ಕವಿತೆಗೆ ಪ್ರತಿಮೆಗಳಾಗಿವೆ ನಿಮ್ಮ ಮಾತುಗಳು ಕೂಡ ಅಷ್ಟೇ ಹದಬದ್ಧವಾಗಿರುತ್ತವೆ ಕನಕ ಸಲ ಚಿಂತನೆಗಳನ್ನು ತಮ್ಮಿಂದ ಕೇಳಿದ ನನಗೆ ನಿಮ್ಮ ಅನೇಕ ಮಾತುಗಳು ಸ್ಪೂರ್ತಿದಾಯಕ