ಕಾವ್ಯ ಸಂಗಾತಿ
ಸುಮಶ್ರೀನಿವಾಸ್
“ಮತ್ತೆವಸಂತ”
ಫಲಬಯಸಿ
ನಡೆದ ಹಾದಿಯ
ತುಂಬೆಲ್ಲ ಕಂಡದ್ದು
ನನ್ನದೆ ಪ್ರತಿರೂಪ
ತಲುಪಿದ ಬಯಲಲ್ಲಿ
ಅದೆಷ್ಟು ಉಸಿರುಗಳ ಸದ್ದು
ಕಣ್ಹಾಯಿಸಿದರು ಕಾಣದ
ಸಜ್ಜಾದ ನ್ಯಾಯಪೀಠ
ಕಿವಿಗೊಟ್ಟೆಡೆಯೆಲ್ಲಾ
ನೆರೆಮನೆಯ ವರ್ಣನೆ
ಆಗಾಗೊಮ್ಮೆ ಕೇಳುತ್ತಿದ್ದ
ಸಾಧನೆಯ ಘರ್ಜನೆ
ಬೆವರ ಬೆಲೆ ಅರಿತ
ಮಂದಿಯ ನಡುವೆ
ದೊಡ್ಡಸ್ಥಿಕೆಯ ನುಡಿಯ
ಚಂಚಲ ಚಿತ್ತವೆಷ್ಟೊ
ಮುಂಬರುವ ಭಾಗ್ಯಕ್ಕೆ
ಮೊಗದಲ್ಲಿ ನಗುವೆಂದು
ನಡೆದ ಹೆಜ್ಜೆ ತಲುಪಿದ್ದು
ಅನ್ನಪೂರ್ಣೆಯ ಸನಿಹ
ಸಿಹಿಹೊತ್ತ ಮಂದಿ ಸಿಹಿ
ಇಟ್ಟ ಜಾಗದಲ್ಲೆ ಬಿಟ್ಟು
ನಡೆದಾಗ ಅದೆನೆತ್ತಿ ತಿಂದ
ಜೀವಗಳೂ ಅಲ್ಲಿದ್ದವು
ಹನಿ ನೀರಿಗೆ ಹರಸಿ
ದೂರದಿಂದ ಬಂದವರು
ಜೊತೆಗಾರರ ದನಿಯು
ಕೇಳದೆ ತಡವರಿಸಿದ್ದರು
ಇಷ್ಟೆಲ್ಲ ಆದರು ಎದೆಯ
ಉರಿ ತಣ್ಣಗೆ ಉರಿದಿತ್ತು
ಕಾರಣ ಮೊದಲ ಮಾತು
ಹೃದಯದ್ದೆ ಆಗಿತ್ತು
ಮಿಡಿಯುವ ಹೃದಯವ
ವಾದಕ್ಕಿಟ್ಟು ಮಣಿಸದಿರಿ
ಮನಸ್ಸು ಕಾಯಲಿ ಸದಾ
ಮನತುಂಬಿ ನಗಲು
“ಮತ್ತೆ ವಸಂತಕ್ಕೆ”
———————–
ಸುಮಶ್ರೀನಿವಾಸ್