ಕಾವ್ಯ ಸಂಗಾತಿ
ನಾಗೊಂಡಹಳ್ಳಿ ಸುನಿಲ್
ನಾನೂ ಮರೆತೆ , ನೀನೂ ಮರೆತೆ
ಕೆಂಡ ಸಂಪಿಗೆಯ ಸಂಜೆಯ ಸವಿಗಂಪಿನಲ್ಲಿ
ನಾಳೆಗಳ ಕುರಿತು
ಇನ್ನಷ್ಟು ಮಾತಾಡುವ ವೇಳೆಗೆ
ಪ್ರೇಮದ ಊರಿನ ಪ್ರಯಾಣದಲ್ಲಿ
ಅರ್ಧಕ್ಕೆ ದಾರಿ ತಪ್ಪಿಸಿ ಹೋದ ಅರ್ಧಾಂಗಿ ನೀನು.
ನಿನ್ನ ನೆನಪುಗಳ ಹಾವಳಿಗೆ
ಕಡಿವಾಣ ಬೆಸೆದರೂ
ಅನುಕ್ಷಣ ಕವಿತೆಗಳು ಜೀವ ಪಡೆಯುತ್ತಿವೆ
ನಿನ್ನೊಂದಿಗಿನ ತನು ಮನದ ಇಂಗಿತಗಳು
ಇನ್ನೂ ಎದೆಯ ಹೆಬ್ಬಾಗಿಲಲ್ಲೇ ಬಿಕ್ಕುತ್ತಿವೆ.
ಸುಂಕವಿಲ್ಲದ ಪ್ರೀತಿ
ಅಂಕೆ-ಶಂಕೆಗೆ ಬಲಿಯಾಯ್ತು
ಮೈಲುಗಟ್ಟಲೇ ಹೆಜ್ಜೆ ಹಾಕಿದ ಹಾದಿ
ಅಕಾಲಿಕವಾಗಿ ಬಸವಳಿದು ಸವಕಲಾಯ್ತು.
ನಿನಗೆಂದೇ ಕಾದು ಕುಳಿತ ಕುರುಡ ನಾನು,
ಅಂತರಂಗದ ಆಲಾಪವನ್ನು
ಆಲಿಸದೆ ಹೋದ ಕಿವುಡಿ ನೀನು
ಕಡು ತಂಪಿನ ಕಾಲದಲ್ಲೂ
ಇಂಗಲಾರದ ದಾಹ ನೀನು.
ಅಂದು ನೀ ನೀಡಿದ ಮುತ್ತಿನ ಸಾಲಕ್ಕೆ
ದಿನವೆಲ್ಲಾ ಬಡ್ಡಿ ತೀರಿಸಿದರೂ
ಸಾಲ ತೀರಿಸಲಾಗದ ಶತಮಾನದ
ಶಾಪಗ್ರಸ್ತ ಸಾಲಗಾರ ನಾನು.
ಪ್ರೇಮ ಪಾಠವ ಕಲಿಸಿ
ವಿರಹದ ಲೋಕವ ಪರಿಚಯಿಸಿದ
ಬಟ್ಟಲು ಕಣ್ಣಿನ,
ಗುಳಿಕೆನ್ನೆಯ ಬೆಡಗಿ ನೀನು.
ನೀನಿಲ್ಲದ ಏಕಾಂತದಲ್ಲಿ
ಹೆಪ್ಪುಗಟ್ಟಿದ ಮೌನವೂ
ನನ್ನೊಂದಿಗೆ ಕ್ಷಣ ಕ್ಷಣವೂ ಮಾತಾಡುತ್ತಿವೆ.
ಸಾಲು ಸೋಲುಗಳ ಅಪಜಯಗಳೂ
ಈಗೀಗ ಅಪಹಾಸ್ಯ ಮಾಡುತ್ತಿವೆ
ನಾನೂ ಮರೆತೆ ನೀನೂ ಮರೆತೆ
ಈ ಕನ್ನಡಿಯೂ ಥೇಟ್ ನಿನ್ನಂತೆಯೇ ಗೆಳತಿ
ನಗುವಾಗ ಅಳುವುದು ಹೇಳಿಕೊಡಲಿಲ್ಲ
ಅಳುವಾಗ ನಗುವುದ ಕಲಿಸಿಕೊಡಲಿಲ್ಲ.
ನಾಗೊಂಡಹಳ್ಳಿ ಸುನಿಲ್