ಕಾವ್ಯ ಸಂಗಾತಿ
ಆದಪ್ಪ ಹೆಂಬಾ ಮಸ್ಕಿ
ನೆನಪುಗಳೇ ಮಧುರ.
ಧೂಳಿಡಿದ ಫ್ಯಾನು, ರೊಂಯಂತ ಒದರುವ
ಏರ್ ಕೂಲರು
ಸೈಲೆಂಟಾಗೇ
ತಂಪುಗೊಳಿಸುವ ಏಸಿ
ಇವನ್ನೆಲ್ಲ ಕಂಡಾಗ
ನೆನಪಾದದ್ದು ಬೀಸಣಿಕೆ
ನಮ್ಮ ಮನೆಯ
ಚಿಂದಿ ಚಿಂದಿ ಬೀಸಣಿಕೆ
ಸಾವಕಾರ ಮನ್ಯಾಗಿನ
ರಿಬ್ಬನ್ನಿಲೆ
ಅಂಚು ಹೊಲಿದ
ಬಣ್ಣದ ಬೀಸಣಿಕೆ
ಬಿಸಿಲ ನಾಡಲ್ಲವೇ ?
ಎರಡರಿಂದಲೂ ಬಂದದ್ದು
ಬಿಸಿಗಾಳಿಯೇ
ಅದಕ್ಕೇ ಏನೋ ಬಣ್ಣದ
ಬೀಸಣಿಕೆ ನೋಡಿ
ಹೊಟ್ಟೆ ಉರಕೊಂತಿದ್ವಿ
ಈಗ ನೆನಪಾಗಿ
ನಗು ಬರಾಕತೈತಿ ||
ನೂರು ರೂಪಾಯಿಗೆ
ಒಂದೇ ಐಸ್ಕ್ರೀಮು !
ಗಡಬಡ್ ಅಂತ
ಅದಕ್ಕೂ ನೂರು !
ಈಗಿನ ಕಾಲದಾಗ ಮನಿಷ್ಯಾರಿಗೇ ಇಲ್ಲದ
ಬೆಲೆ ರೊಕ್ಕಕ್ಕ ಎಲೈತಿ !
ಮಕ್ಕಳ ಹಟಕ್ಕ
ಜೇಬಿನ್ಯಾಗಿನ ರೊಕ್ಕ
ಖಾಲಿಯಾದಾಗ…
ಐದು ಪೈಸೆ ಕೊಟ್ಟು
ಕೆಂಪು ಐಸ್ ತಿಂತಿದ್ದ
ಗೆಳಯರು ನಾವು
ನೂರು ಮಂದಿ
ಹತ್ತು ಪೈಸೆ
ಬಿಳಿ ಐಸ್ ತಿಂತಿದ್ದ
ಸಾವಕಾರ ಮಕ್ಕಳು
ಮೂರು ಮಂದಿ
ಐಸ್ ಗಡ್ಡಿ ಖಾಲಿಯಾದ್ರೂ
ಬರೀ ಕಡ್ಡೀನ
ಕಚ ಕಚ ತಿಂತಿದ್ವಿ
ಐಸ್ ತಣ್ಣಗಿದ್ರೂ
ಬಿಳಿ ಐಸ್ ತಿಂತಿದ್ದ
ಅವರನ್ನ ನೋಡಿ ಉರಕೊಂತಿದ್ವಿ
ಈಗ ನೆನಪಾಗಿ ನಗು ಬರಾಕತೈತಿ ||
ಟೇಬಲ್ ಮ್ಯಾಲದಾವು
ನಾಲ್ಕಾರು
ನಮೂನಿ ಸ್ವೀಟ್ಸು
ಭಾಳ ತಿನಬ್ಯಾಡ್ರಿ ಶುಗರ್ರೂ
ಅಂತ ನೆನಪಿಸ್ತಾಳ ವೈಫು
ಮತ್ತ ಹಳೇ ನೆನಪು
ಘಮ ಘಮ ಅನ್ನೋ ಬೇಸನ್ ಉಂಡೀನ
ಹೊಟ್ಟೀ ತುಂಬ
ತಿನಸ್ತಿದ್ಲು ಅವ್ವ
ಈಗ ನೆನಪಾಗಿ ಅಳು
ಬರತೈತಿ
ಅವ್ವ ಸತ್ತಿದ್ದಕ್ಕೊ
ಶುಗರ್ ಬಂದಿದ್ದಕ್ಕೋ
ಗೊತ್ತಾಗದೆ ಮಾತಾಡದೇ
ಸುಮ್ಮನಿದ್ರ
ಏನೇನೋ ನೆನಪಾಗಿ ನಗು
ಬರಾಕತೈತಿ ||
———————-
ಆದಪ್ಪ ಹೆಂಬಾ ಮಸ್ಕಿ