ಕಾವ್ಯ ಸಂಗಾತಿ
ಜಯಂತಿ ಸುನಿಲ್
ಗಜಲ್
ದಾರಿಯಿನ್ನೂ ದೂರವಿದೆ ಒಬ್ಬಂಟಿ ಪಯಣದಲಿ ಜೊತೆಯಾಗುವೆಯಾ?
ಮೆದುವೆದೆಯಲಿ ಭಯವಿದೆ ಕಾರಿರುಳ ಕತ್ತಲಲಿ ಬೆಳಕಾಗುವೆಯಾ?
ತಂಪು ಚಂದಿರನು ಸುಡುವುದ ಕಲಿತಿದ್ದಾನೆ ಈಗೀಗ
ಬೆಂಕಿ ಬೇಸಿಗೆಯಿದೆ ಕುದಿವ ಕಂಬನಿಯಲಿ ಕಣ್ಣೊರೆಸುವೆಯಾ?
ಒಳಗಿನ ಗಾಯಕೂ, ಹೊರಗಿನ ಗಾಯಕೂ ಫರಾಕು ತಿಳಿಯುತ್ತಿಲ್ಲ ಈಗೀಗ
ಭರ್ಜಿಗಳ ತಿವಿತವಿದೆ ಬೆಂದ ಹೃದಯದಲಿ ಮುಲಾಮಾಗುವೆಯಾ?
ಬಳಲಿ ಹೋದ ಹೂವಿನ ಕರೆ ಕೇಳಿಸುತ್ತಿಲ್ಲಾ ಯಾರಿಗೂ ಈಗೀಗ
ಕಾಲ ಕದ್ದು ಹೀರುತಿದೆ ಒಂಟಿತನದ ಒಡಲಿನಲಿ ದುಂಬಿಯಾಗುವೆಯಾ?
ಸಂಬಂಧಗಳ ವಿಭಜಿಸುವಲ್ಲಿ ಲೋಕವೇ ನಿರತವಾಗುತ್ತಿದೆ ಈಗೀಗ
ಅನಾಥೆಯೆಂಬ ಕೊರಗಿದೆ ಬಾಳಪುಟದಲಿ ಕವಿತೆಯಾಗುವೆಯಾ?
ಒಳಗಿನ ಹಸಿವನ್ನು ಇಂಗಿಸುತ್ತಿವೆ ಚುಚ್ಚುವ ಸಂಕೋಲೆಗಳು ಈಗೀಗ
ಬಿಡುಗಡೆಯಾಗಬೇಕಿದೆ, ನಿಂದಿಹೆ ನಿನ್ನೆದುರ ಬಾಗಿಲಲಿ ಕದತೆರೆಯುವೆಯಾ.?
ಕಡುಗುಲಾಬಿಗೆ ಮೆತ್ತಿದ ನೆತ್ತರಿನ ಕಲೆ ಮಾಯವಾಗುತಿದೆ ಈಗೀಗ
ನಿನ್ನನ್ನು ಧರಿಸಿದೆ, ಜಯಿಸಿದೆ ನನ್ನದೇ ಮೌನದಲಿ.. ಮಾಲಿಕನಾಗುವೆಯಾ..???
————————-
ಜಯಂತಿ ಸುನಿಲ್