ಡಾ ಡೋ.ನಾ.ವೆಂಕಟೇಶ ಕವಿತೆ-ಸಡಗರ

ಸಂತೋಷದಿಂದ ಇದ್ದೇನೆ

ಮೂಡಿದ್ದ ಗಾಯಗಳ ಮರೆತಿಲ್ಲ
ಆಗಿದ್ದ ಕಲೆಗಳು ಕರಗಿಲ್ಲ
ಆಕ್ರಂದನ ಕ್ಷಯಿಸಿಲ್ಲ
ಆದರೂ
ತೃಪ್ತಿಯಿಂದ ಇದ್ದೇನೆ
ಕೊಟ್ಟಷ್ಟಕ್ಕೆ ಖುಷಿಯಿಂದ
ಹೇಳುತ್ತಾ ಧನ್ಯವಾದ!

ತಳ್ಳಿದಾಗ ಕೂಪದಿಂದ
ಹೊರ ಬಂದಿದ್ದೇನೆ
ಆ ಕತ್ತಲು ಆ ಮಜಲು ಆ ತಳ್ಳಾಟ ಕಳ್ಳಾಟ  ಆ ಮಳ್ಳಾಟ!!
   
ಕಣ್ಣು ಮುಚ್ಚಾಲೆಗಳ ನೋಟ
ಮರೆತು ಸುಖವಾಗಿದ್ದೇನೆ, ಸ್ವಸ್ಥವಾಗಿ
ನಿಮ್ಮೆಲ್ಲರ ಮಧ್ಯೆ ವಿಜೃಂಭಿಸಿದ್ದೇನೆ,
ವೈಭವಿಸಿದ್ದೇನೆ
ಜೊತೆಗೂಡಿ ನನ್ನ ಜೊತೆಗಾತಿ  ಜೊತೆ
ಬದುಕಿನ ಬಂಡಿ ಸುಖಿಸಿದ್ದೇನೆ
ಸಂಭ್ರಮಿಸಿದ್ದೇನೆ.

ನ್ಯಾಯ ಅನ್ಯಾಯಗಳ ವಿಮರ್ಶೆಗವನಿದ್ದಾನೆ!
ಹೌದು-
ಎಲ್ಲರಿಗೂ ಅಂತರಾತ್ಮನಿದ್ದಾನೆ!                            

ಎಂದೇ ಅಂವ ಕರೆದಾಗ ಬರಿ ತೃಪ್ತಿ.
ಕರೆಯುವ ಕ್ಷಣಕ್ಕಷ್ಟೇ ಆತುರ
ಬಂದಾಗ ಕಾಯಿಸದೇ ಅವನನ್ನ,
ಜೊತೆ
ಹೋಗೇ ಬಿಡುವ ಅವಸರ
ತೇಜಸ್ಸು ನನ್ನಲ್ಲಿ ವಿಲೀನವಾಗುವ
ಸಂಭ್ರಮ, ಸಡಗರ!!

———————-

5 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಸಡಗರ

Leave a Reply

Back To Top