ನಾಟ್ಯ ಸಂಗಾತಿ
ಗೊರೂರು ಅನಂತರಾಜು
ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ
ಪಾಶ ನೃತ್ಯ ನಿರ್ದೇಶನ
ಅಬ್ಬಾ! ಅದೊಂದು ಅದ್ಭುತ ಗಾಲಿ ನೃತ್ಯ ಪ್ರದರ್ಶನ. ನಡೆದಿದ್ದು ಹಾಸನದ ಕಲಾಭವನದಲ್ಲಿ. ಹಾಸನಕ್ಕೆ ಪಾಶಾ ಅವರ ತಂಡ ಕರೆಸಿದ್ದವರು ನಮ್ಮ ಹಾಸನ ಚಾರಿಟಬಲ್ ಟ್ರಸ್ಟ್ ನ ಹರೀಶ್ ಕೆ.ಆರ್. ಅದು ಅವರ ಟ್ರಸ್ಟ್ ನ ೩ನೇ ವರ್ಷದ ವಾರ್ಷಿಕೋತ್ಸವಕ್ಕೆ, ಆನೇಕಲ್‌ನ ಸಯ್ಯದ್ ಸಲ್ಲಾವುದ್ದಿನ್ ಪಾಶ ಮೂರು ದಶಕಗಳಿಗೂ ಹೆಚ್ಚು ಕಾಲ ವಿಕಲ ಚೇತನರಿಗೆ ನೃತ್ಯ ಕಲೆಯ ತರಬೇತಿ ನೀಡಿ ತಮ್ಮ ಕಲಾಸೇವೆಗೆ ೨೦೦೭ರಲ್ಲಿ ರಾಷ್ಟಪತಿಗಳಿಂದ ಪ್ರಶಸ್ತಿ ಪಡೆದ ನೃತ್ಯಪಟು. ಮೂರು ಗಂಟೆಗೆ ಇದ್ದ ಕಾರ್ಯಕ್ರಮ ಆರಂಭವಾಗಿದ್ದು ಆರಕ್ಕೆ. ವೇದಿಕೆ ಭಾಷಣ ಸನ್ಮಾನ ಮುಗಿದು ಗಣಪತಿ ವಂದನ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು ಪಾಶಾ ತಂಡದವರ ಶಾಸ್ತ್ರೀಯ ಭರತನಾಟ್ಯ, ಶಿವ ತಾಂಡವ ನೃತ್ಯದಲ್ಲಿ ಡಿಜಿಟಲ್ ಪರದೆಯ ಮೇಲೆ ಜಗದ ಅವಿಷ್ಕಾರ ದೃಶ್ಯ.! ಸುಮಾರು ೨೫ ನಿಮಿಷಗಳ ಭಗವದ್ಗೀತೆ ನೃತ್ಯರೂಪಕದಲ್ಲಿ ಮಹಾಭಾರತ ಯುದ್ಧದ ದೃಶ್ಯಾವಳಿ. ದಕ್ಷಿಣ ಭಾರತದ ಭರತನಾಟ್ಯ ಉತ್ತರ ಭಾರತದ ಕಥಕ್ ನಡುವಣ ಜುಗಲ್ ಬಂದಿ. ಮಂಡ್ಯ ಭಾಗದಲ್ಲಿ ಹೆಸರಾದ ಜನಪದ ನೃತ್ಯ ಪ್ರಕಾರ ಪೂಜಾ ಪಟ ಕುಣಿತ, ಕನ್ನಡ ನಾಡು ನುಡಿ ಅಭಿಮಾನ ಉಕ್ಕಿಸುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು (ಪಾಶಾ ಹುಟ್ಟಿದ್ದು ದಿ. ೧೫-೬-೧೯೬೮ರಲ್ಲಿ) ಸಿನಿಮಾ ಹಾಡಿಗೆ ನೃತ್ಯ, ಕಡೆಯಲ್ಲಿ ಭಾರತ ರಕ್ಷಕರು ವೀರ ಯೋಧರ ದೇಶ ಸೇವೆಯ ಆರ್ಮಿ ಇನ್ ವ್ಹಿಲ್ಸ್.. ಎಲ್ಲವೂ ವಿಭಿನ್ನ ವೈಶಿಷ್ಟ್ಯ ನೃತ್ಯ ಪ್ರಕಾರಗಳ ಸಮಾಗಮ. ಹರೀಶ್ ಮೂಲಕ ಪಾಶರನ್ನು ಸಂಪರ್ಕಿಸಿ ಮಾತನಾಡಿಸಿದೆ. ಅವರು ಹೇಳುತ್ತಾ ಹೋದರು ತಾಸುಗಟ್ಟಲೇ.
ತುಸು ಕಟ್ ಮಾಡಿ ಮೊದಲು ಅವರನ್ನು ಪರಿಚಯಿಸುವುದಾದರೇ ನಾಟ್ಯ ಶಾಸ್ತ್ರದ ಕಲೆಯನ್ನು ಕರಗತ ಮಾಡಿಕೊಳ್ಳಲು ಪಾಶಾರವರು ಶ್ರೀಮತಿ ಮಾಯಾರಾವ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಸಂಯೋಜನೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದವರು. ನಾಟ್ಯ ಇನ್ಸ್ಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ಸಂಸ್ಥೆಯಲ್ಲಿ ೩ ವರ್ಷ ಡಿಪ್ಲೋಮ ಪದವಿ ಗಳಿಸಿದ್ದಾರೆ. ಮಾಯಾರಾವ್ ಸಂಯೋಜಿಸಿದ ಅನೇಕ ನೃತ್ಯ ರೂಪಕಗಳಲ್ಲಿ ಪ್ರಧಾನ ಭೂಮಿಕೆಯಲ್ಲಿ ನರ್ತಿಸಿರುವರು. ಇವುಗಳಲ್ಲಿ ಹೊಯ್ಸಳ ವೈಭವ, ವಿಜಯನಗರ ವೈಭವ, ಅಮಿರ್ ಖುಸ್ರೋ, ರಾಮಾಯಣ ದರ್ಶನಂ ಪ್ರಮುಖವಾಗಿವೆ. ಇಂದು ಇವರು ಅಂತಾರಾಷ್ಟಿಯ ಖ್ಯಾತಿವೆತ್ತ ನೃತ್ಯಪಟುವಾಗಿ ಬೆಳೆದಿರುವರು. ನೃತ್ಯ ಸಂಯೋಜಕರು. ವಿಶೇಷವಾಗಿ ವಿಕಲಚೇತನರ ಶಾಸ್ತ್ರೀಯ ನೃತ್ಯ ಅವಿಷ್ಕಾರದಲ್ಲಿ ಪ್ರಯೋಗಶೀಲತೆಯಿಂದ ಖ್ಯಾತಿವೆತ್ತರು. ಅನಂತರಾಜು ಅವರೇ, ನಾನು ಒಂದು ಕಾಲು ಇಲ್ಲದವರಿಗೆ ವೀಲ್ ಚೇರ್ ಮೇಲೆ ನೃತ್ಯ ಕಲಿಸಲು ಸ್ವತ: ನಾನೇ ಕಾಲು ಮಡಿಚಿ ಬಟ್ಟೆ ಕಟ್ಟಿಕೊಂಡು ಅದನ್ನು ಕಲಿಯುವುದು ಎಷ್ಟು ಕಷ್ಟ ಎಂಬುದನ್ನು ಅಭ್ಯಾಸ ಮಾಡಿ ಅರಿತ್ತಿದ್ದೇನೆ ಎಂದರು. ತಮ್ಮ ವಿದ್ಯಾರ್ಥಿಗಳಿಗೆ ಇಷ್ಟೆಲ್ಲಾ ಕಲಿಸುವ ಸಾಹಸಿ ತಮ್ಮ ನಾಟ್ಯ ಗುರುಗಳ ಹೆಸರನ್ನು ಹೇಳಿದರು. ಭರತ ನಾಟ್ಯವನ್ನು ಶ್ರೀಮತಿ ನರ್ಮದಾ, ಶ್ರೀಮತಿ ಪದ್ಮಿನಿ ರಾವ್, ಶ್ರೀ ಕಿಟ್ಟಪ್ಪ ಪಿಳ್ಳೈ, ಶ್ರೀಮತಿ ಮೀನಲ್ ಪ್ರಭು ಅವರಲ್ಲಿ ಪಡೆದಿರುವರು. ಅಭಿನಯ ಶಿಕ್ಷಣವನ್ನು ಪದ್ಮಭೂಷಣ ಶ್ರೀಮತಿ ಮಾಯಾರಾವ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಶ್ರೀಮತಿ ರಮಾಮಣಿ ಅವರಲ್ಲಿ ಮತ್ತು ಮೃದಂಗವನ್ನು ಟಿ.ಎ.ಎಸ್.ಮಣಿ ಅವರಲ್ಲಿ ಕಲಿತ್ತಿರುವರು. ಬಾಲ್ಯದಿಂದಲೇ ಸಂಸ್ಕೃತ ರಾಮಾಯಣ, ಮಹಾಭಾರತ, ಭಗವದ್ಗೀತಾ, ಯೋಗ ಶಾಸ್ತ್ರ ಅಧ್ಯಯನವನ್ನು ಆನೇಕಲ್ ಅಷ್ಟಾಕ್ಷರಮ್ ನಾರಾಯಣ ಅಯ್ಯಂಗಾರ್ ಮತ್ತು ವಿದ್ಯಾಲಂಕಾರ ಶಾಸ್ತ್ರ ಚೂಡಾಮಣಿ ಪ್ರೊ.ಎಸ್.ಕೆ.ರಾಮಚಂದ್ರರಾವ್, ಕಲಾ ಇತಿಹಾಸ ಸೌಂದರ್ಯ ಶಾಸ್ತ್ರ ವನ್ನು ಡಾ.ಚೂಡಾಮಣಿ ನಂದ ಗೋಪಾಲ್‌ರಲ್ಲಿ ಅಭ್ಯಾಸ ಮಾಡಿದ್ದಾರೆ. ಇವರು ಪ್ರಪಂಚದಲ್ಲೇ ಪ್ರಥಮ ಬಾರಿಗೆ ನಾಟ್ಯ ಶಾಸ್ತ್ರ ಆನ್ ವೀಲ್ಸ್ ಶೀರ್ಷಿಕೆಯಲ್ಲಿ ವಿಕಲಚೇತನ ಶಿಷ್ಯರಿಗೆ ಗಾಲಿ ಕುರ್ಚಿಯ ಮೇಲೆ ಭರತ ನಾಟ್ಯ ಸಂಯೋಜನೆಗಳನ್ನು ಸೃಷ್ಟಿಸಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಬೆರಗುಗೊಳಿಸಿದ್ದಾರೆ.
ಭರತನಾಟ್ಯ ಕೂಚಿಪುಡಿ ಕಲಾವಿದರಿಗೆ ನಟ್ಟುವಾಂಗ ಸಹಕಾರ ನೀಡಿದ್ದಾರೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಇವರು ಕನ್ನಡದಲ್ಲಿ ಅನೇಕ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ರೂಪಕವನ್ನು ಕುವೆಂಪು ಅವರ ಸಮ್ಮುಖದಲ್ಲೇ ಪ್ರದರ್ಶಿಸಿದ್ದಾರೆ. ಬಸವಣ್ಣನವರ ವಚನಗಳಿಗೆ ತಾವೇ ಏಕ ವ್ಯಕ್ತಿ ನೃತ್ಯ ರೂಪಕದಲ್ಲಿ ವಿಶ್ವಾದ್ಯಂತ ಸಂಚರಿಸಿದ್ದಾರೆ. ಬಸವಣ್ಣ, ಅಲ್ಲಮ ಪ್ರಭು, ಗಾನಯೋಗಿ ಪಂಚಾಕ್ಷರಿ ಗವಾಯಿ, ರಾಮ ಲಕ್ಷಮಣ ರಾವಣ, ಹನುಮಂತ, ಕೃಷ್ಣ ಅರ್ಜುನ, ಶಿವ, ಭಸ್ಮಾಸುರ, ಹೊಯ್ಸಳ ವಿಷ್ಣುವರ್ಧನ, ಶ್ರೀ ಕೃಷ್ಣ ದೇವರಾಯ, ಭರತ ಬಾಹುಬಲಿ ಪಾತ್ರಗಳ ಪರಕಾಯ ಪ್ರವೇಶಿಸಿ ಮನೋಜ್ಞ ಅಭಿನಯದಿಂದ ಜೀವ ತುಂಬಿದ್ದಾರೆ. ವಿಶ್ವದಲ್ಲೇ ಪ್ರಥಮ ಬಾರಿಗೆ ಗಾಲಿ ಕುರ್ಚಿ ಮೇಲೆ ಏಳು ಭಾಷೆಗಳಲ್ಲಿ ಭಗವದ್ಗೀತಾ ನೃತ್ಯ ರೂಪಕ ಪ್ರದರ್ಶಿಸಿರುವುದು ಇವರ ಸಾಧನೆ. ವಿಕಲ ಚೇತನರಿಗೆ ಸಮರ ಕಲೆಗಳಲ್ಲಿ ತರಭೇತಿ ನೀಡಿದ ಸಾಹಸಿ. ಇವರ ಗಾಲಿ ಕುರ್ಚಿಯ ಮೇಲೆ ಕುಳಿತ ದುರ್ಗಾ ಆನ್ ವೀಲ್ಸ್ ನೃತ್ಯ ಪರಿಕಲ್ಪನೆ ರೋಚಕ! ಎಂ.ಎಸ್.ಸತ್ಯು ಅವರ ಕೈರ್ ಹಿಂದಿ ಧಾರಾವಾಹಿಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಈಶ್ವರ ಅಲ್ಲಾ ನೀನೆ ಎಲ್ಲಾ ಧಾರಾವಾಹಿಯಲ್ಲಿ ನೂರಕ್ಕೂ ಹೆಚ್ಚು ಕಂತುಗಳಲ್ಲಿ ಅಭಿನಯಿಸಿ ನರ್ತಿಸಿದ ಇವರ ಶಿಶುನಾಳ ಶರೀಫರ ಪಾತ್ರ ನಾಡಿನ ಜನಮನ ಸೆಳೆದಿದೆ.
ಗೊರೂರು ಅನಂತರಾಜು