ಕಾವ್ಯ ಸಂಗಾತಿ
ಸುಕುಮಾರ
ಕಾಫಿಯಾನ ಗಜ಼ಲ್
ಬಿಸಿಲಿನ ಜಳಕೆ ಹಾದಿಯು ಕನ್ನಡಿಯಾಗಿ ಬಯಕೆಯ ಬಿಂಬವೇ ಮರೀಚಿಕೆ ಆಯಿತು
ಟಿಸಿಲಿನ ಕರಕೆ ಎಲೆಯು ಭಂಟನಾಗಿ ಸಲುಗೆಯ ಡಿಂಬವೇ ಸ್ನೇಹಕೆ ಮಣಿಯಿತು
ಸುಮವು ಫಲವಾಗಿ ತಿರುಳಿಗೆ ರಸನವು ತಾಕಿ ವ್ಯಸನ ದಾಸ್ಯಕೆ ಜಾರಿತು
ನವಿಲಿನ ನಾಟ್ಯಕೆ ಕೋಕಿಲೆಯು ಧ್ವನಿಯಾಗಿ ಧಗೆಯ ಹುಂಬವೇ ರಾಗಕೆ ಜರಿಯಿತು
ಬೆವರು ಹನಿಗಳು ಮುತ್ತಿನ ಮಣಿಗಳು ಧಣಿದ ದೇಹದ ಒನಪಿನ ಕುಡಿಗಳು
ನಲಿವಿನ ಆಟಕೆ ಸುಧೆಯು ಹೊಳೆಯಾಗಿ ಹಗೆಯ ವಿಷವೇ ಮೌನಕೆ ಸರಿಯಿತು
ಕಾಯವು ಕಾದ ಹೆಂಚಾಗಿ ಬವಣೆಯ ಕೂಸು ಕಣಿವೆಯ ಆಳಾಗಿ ಪರಿಣಮಿಸಲು
ಬಿಡುವಿನ ಹಾಸ್ಯಕೆ ಗರಿಕೆಯು ಕಿವಿಯಾಗಿ ನಗೆಯ ಕೂಟವೇ ರಂಗಕೆ ನೆಗೆಯಿತು
ಕುಮಾರನ ಗುಲಾಬಿ ಗುಲಾಮಳಾಗಿ ಬರದ ಮುಳ್ಳಿನ ನಂಜಿಗೆ ಅಂಜಿ ಸೊರಗಲು
ಋತುವಿನ ಚಪಲಕೆ ಧರೆಯು ಜಡವಾಗಿ ಹೊಗೆಯ ಮಾಟವೇ ಪೀಠಿಕೆ ಹಾಕಿತು
——————————–
ಸುಕುಮಾರ