ಸವಿತಾ ಮುದ್ಗಲ್ ಕವಿತೆ-ಒಲವ ಮಳೆ

ಎಂದಿಗೂ ತುಂಬದ
ಒಲವಿನ ಪುಸ್ತಕ ನೀಡಿದೆಯೇನು?
ಕನಸಲ್ಲಿ ಕಾಡಿದ ನೂರಾರು
ಭಾವಗಳೇ ಕಾಡಿದವೇನು?

ಪ್ರೀತಿಯ ಅರಮನೆಯ
ಸದಾ ಪಟ್ಟದರಾಣಿಯೇನು ನಾ?
ಅರಸಿಯಂತೆ ಅಳಿದುಳಿದು ಬೆಂದ ಪ್ರೀತಿ ನೀಡಿದೆಯೇನು?

ನಿನಗಾಗಿ ಒಲವಿನ ಮಳೆ
ನಿತ್ಯ ಸುರಿಸಿದರೇನು?
ಕಪ್ಪಾದ ಕಾರ್ಮೋಡಗಳೇ
ಬಾಳಿಗೆ ಜೊತೆಗಾದವೇನು?

ನೀಡಿದ ಕೆಂಗುಲಾಬಿ
ಬಣ್ಣ ಮಾಸಿ ಹೋಯಿತೇನು?
ಮುಳ್ಳುಗಳೇ ಚುಚ್ಚಿ ಚುಚ್ಚಿ
ರಕ್ತದೋಕುಳಿಯಾಯಿತೇನು?

ನಿಜವಾದ ಪ್ರೀತಿಯಿಲ್ಲಿ
ಕಮರಿ ಕರಕಲಾಯಿತೇನು?
ಅಲೆಗಳು ಅಬ್ಬರಿಸಿ ಪ್ರವಾಹ
ಭೀತಿಯಾಗಿದೆಯೇನು?

ಕಣ್ಣಲ್ಲಿ ಕೊಂದರೆ ಪ್ರೇಮವೆಂದು ಸುಮ್ಮನಾಗಬಹುದಿತ್ತು
ಮಾತಲ್ಲಿ ಉಸಿರುಗಟ್ಟಿಸಿ
ಮೌನದ ಚಾಟಿ ಬೀಸಿದೆಯೇನು?

ಕಣ್ಣಲ್ಲಿ ತುಂಬಿದ ಹೆಣ್ಣನ್ನು
ಕಾವಲು ಇಟ್ಟೆಯೇನು
ಮನಸಲ್ಲಿ ಬೆಸೆದು ಜೋಪಾನ
ಮಾಡಿಟ್ಟು ಕೊಂಡರೇನು?

ಹಾಲ್ಜೇನು ಸವಿದ ಬಾಳಿಗೆ
ಹೆಜ್ಜೇನೀನಂತೆ ಕಟುಕನಾದೆಯೇನು?
ಮೂರು ಗಂಟಿನ ನಂಟಿಗೆ
ಮುಸುಕು ಧರಿಸಿ ಹೊರಟೇಯೇನು?


One thought on “ಸವಿತಾ ಮುದ್ಗಲ್ ಕವಿತೆ-ಒಲವ ಮಳೆ

Leave a Reply

Back To Top