ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಮಿಡಿತಗಳು..
ನಾನು ನಿನ್ನೊಂದಿಗೆ
ನೀನು ನನ್ನೊಂದಿಗೆ ಬದುಕಿನ
ಕೊನೆಯತನಕ
ಕನಸುಗಳ ಜೊತೆಗೆ
ಮನಸ್ಸಿನ ಒಳಗೆ
ಜೀವವಿರುವತನಕ
ಅಲೆಗಳಿಗೆ ಕೊನೆಯಿಲ್ಲ
ಯೋಚನೆಗೆ ಮಿತಿ ಇಲ್ಲ
ಭಾವನಾಲೋಕ ಇರುವ ತನಕ
ಹೂವು ಅರಳುವುದು
ಮನವು ಮನವ ಸೆಳೆಯುವುದು
ಪ್ರೀತಿ ಇರುವ ತನಕ
ಚಂದಿರನ ಕಾಂತಿಗೆ
ಸಾಗರದ ಸೆಳವಿಗೆ ಮುಪ್ಪಿಲ್ಲ
ಜಗವಿರುವತನಕ
ಹಾರಾಟ ಚೀರಾಟ
ಕೂಗಾಟ ಹೋರಾಟ ಮೈಯೊಳಗೆ
ಕಸುವು ಇರುವ ತನಕ
ಕನಸುಗಳಿಗೆ ಬರವಿಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಆಕರ್ಷಣೆ ಮುಗಿಯುವತನಕ
ನಕ್ಕು ನಲಿಯುತ್ತಿರು
ಖುಷಿಯ ಹರಡುತ್ತಿರು
ಉಸಿರು ಕೊನೆಗೊಳ್ಳುವತನಕ ಎಲ್ಲರೊಳಗೊಂದಾಗು
ಒಲವಿಗೆ ಜೊತೆಯಾಗು
ಹೃದಯದ ಮಿಡಿತ ಇರುವ ತನಕ
ನಾಗರಾಜ ಜಿ. ಎನ್. ಬಾಡ
ಒಲವು ಬದುಕುವ ಒಂದು ಅನುಭಾವ. ಇದು ಗಟ್ಟಿಯಾದಷ್ಟು ಜೀವನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಮನಸ್ಸಿನ ಒಳಗೆ ಹೊರಗೆ ಭಾವಗಳು ಹಲವು. ಅವುಗಳೆಲ್ಲಾ ಒಂದಾಗಿ ಉಳಿಯುವುದು ಪ್ರೀತಿಯ ಹರಿವಿನೊಳಗೆ. ಉಸಿರೊಳಗೆ ಇದ್ದು ಇಲ್ಲವಾಗುವ ಜೀವದ ಉಳಿವು ಒಂದು ಸೋಜಿಗ. ಆಪ್ತತೆ ಮಾತ್ರ ನಮ್ಮದು ಎಂದು ಸಾರುವ ಕವನದ ಸೂಕ್ಷ್ಮತೆ ಅಡಗಿರುವುದು ಅದರ ನವಿರಾದ ನಿರೂಪಣೆಯಲ್ಲಿ. ನಮ್ಮದೆನ್ನುವ ಹೃದಯಸ್ಪರ್ಶಿ ಭಾವ ಸಂವೇದನೆಯಾಗಿ ಉಳಿದಾಗ ಬದುಕು ಒಂದು ವಿಶ್ವಾಸದ ನಗು ಎನಿಸುತ್ತದೆ. ಪರಿಚಯ,ಆಪ್ತರು, ಪ್ರೀತಿ ಪಾತ್ರರು ಒಂದು ಗೆಲುವಾಗಿ ಉಳಿಯುತ್ತಾರೆ. ಎಲ್ಲವನ್ನೂ ಪ್ರೀತಿಸುವ ಸಾಲುಗಳು ಇಲ್ಲಿ ಮಾತುಗಳಾಗಿ ಕುಳಿತಿವೆ ಎನಿಸುತ್ತದೆ……….ಕವನ ಸುಂದರ……..
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ
ಕುಮಟಾ…