ಪುಸ್ತಕ ಸಂಗಾತಿ
‘ಕೇರಿ ಕೊಪ್ಪಗಳ ನಡುವೆ’ ….
ಕನ್ನಡ ಬಹುಮುಖ್ಯ ಕತೆಗಾರರಲ್ಲಿ
ಒಬ್ಬರಾದ
ಡಾ.ರಾಮಕೃಷ್ಣ ಗುಂದಿ
ಅವರ ಆತ್ಮಕಥೆ.
ಡಾ. ರಾಮಕೃಷ್ಣ ಗುಂದಿ ಸರ್ ಉತ್ತರ ಕನ್ನಡ ಜಿಲ್ಲೆಯ ಶೋಷಿತ ಜನಾಂಗ ದಿಂದ ಬಂದವರು. ಅವರ ಸಮುದಾಯದಲ್ಲಿ ಅಕ್ಷರ ಕಲಿಕೆ ಆರಂಭ ಅವರ ತಂದೆ ಕಾಲದಿಂದ ಪ್ರಾರಂಭ. ಅವರ ತಂದೆ ಶಿಕ್ಷಕರಾಗಿದ್ದವರು. ರಾಮಕೃಷ್ಣ ಗುಂದಿ ಅವರು ಅದನ್ನು ದಾಟಿ ಅವರ ಸಮುದಾಯದಲ್ಲೇ ಮೊಟ್ಟ ಮೊದಲಿಗೆ ಎಂ.ಎ.ಮುಗಿಸಿ, ಕಾಲೇಜು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತರಾದವರು. ಬಹಳ ಮುಖ್ಯವಾಗಿ ಅವರು ಆಗೇರ ಸಮುದಾಯದ ಮೊಟ್ಟ ಮೊದಲ ಲೇಖಕ,ಕತೆಗಾರರು ಹೌದು. “ಅವಾರಿ ” ಅವರ ಬಹುಮುಖ್ಯ ಕತೆಗಳಲ್ಲಿ ಒಂದು .
‘ಕೇರಿ ಕೊಪ್ಪಗಳ ನಡುವೆ’
ಆಗೇರ ಸಮುದಾಯದಿಂದ ಬಂದ ಮೊದಲ ಆತ್ಮಕತೆಯೂ ಇದಾಗಿದೆ .
ಈ ಆತ್ಮಕಥನ ಅವರ ಬದುಕಿನ ಕಾಲಘಟ್ಟದ ಸಾಮಾಜಿಕ ಸ್ಥಿತಿಗತಿಯ ಪಯಣ. ನಮ್ಮ ನಡುವಿನ ಸಾಮಾಜಿಕ ರಚನೆ, ಅಲ್ಲಿನ ಸಂಘರ್ಷಗಳು , ಬದುಕಿನ ಹೋರಾಟ, ಚಲನೆಯ ಕಾಲದ ಸಹನೆ, ಮನುಷ್ಯರಲ್ಲಿನ ಒಳ್ಳೆತನ, ಸಣ್ಣತನ, ಜಾತೀಯತೆ ತಾಪ , ಸಣ್ಣ ಪ್ರತಿರೋಧ …ಹೀಗೆ ಎಲ್ಲವೂ ಇಲ್ಲಿದೆ. ಮರಾಠಿ ಭಾಷೆಯ ದಲಿತ ಲೇಖಕರ ಆತ್ಮಕತೆಗಳಂತೆ, ಕನ್ನಡದಲ್ಲಿ ಬಂದ ಈ ಆತ್ಮಕಥನ ಬಹುಮುಖ್ಯವಾದುದು. ಶೋಷಿತ ಸಮುದಾಯದ ಒಬ್ಬ ಲೇಖಕ, ಉಪನ್ಯಾಸಕ, ಯಕ್ಷಗಾನ ಕಲಾವಿದರಾದ ರಾಮಕೃಷ್ಣ ಗುಂದಿಯವರಿಗೆ ಇಲ್ಲಿ ಮುಖಾಮುಖಿ ಆಗುವ ಸಮಾಕಾಲೀನರು, ಹಿರಿಯರು, ವಿದ್ಯಾರ್ಥಿ ಸಮೂಹದ, ಅವರ ಶಿಷ್ಯರ ಕ್ರಿಯೆ ಪ್ರತಿಕ್ರಿಯೆಗಳು ಸಹ ಆತ್ಮಕತೆಯಲ್ಲಿ ಕಾಣುತ್ತಾ ಹೋಗುತ್ತದೆ. ಗುಂದಿ ಸರ್ ಕತೆಗಾರರಾದ ಬಗೆ, ಯಕ್ಷಗಾನ ಕಲಾವಿದರಾಗಿ ಅನುಭವಿಸಿದ ಸಿಹಿ ಕಹಿ ಸಂದರ್ಭ, ಆತ್ಮಕಥನನ ಭಾಗವಾಗಿಯೇ ಬರುವ ಅವರ ತಂದೆಯ ಪುಟ್ಟ ಕತೆ, ಸಮುದಾಯದ ಕಷ್ಟ ಸಾಹಸಗಳು, ಮಾನವೀಯ ಸಂದರ್ಭಗಳು, ಅವರು ಅಂತರ್ಜಾತಿ ವಿವಾಹವಾದಾಗ ಎದುರಿಸಿದ ಸಂದರ್ಭಗಳು, ದಂಪತಿಗಳನ್ನು ಸಹೋದ್ಯೋಗಿಗಳು ಊಟಕ್ಕೆ ಕರೆದಾಗ ನಡೆದ ಪ್ರಸಂಗಗಳು, ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಬಾಡಿಗೆ ಮನೆ ಹುಡುಕಾಟ, ಕ್ವಾಟರ್ಸ ಸೇರಿದ ಪ್ರಸಂಗ …ಹೀಗೆ ಹತ್ತು ಹಲವು ಸಂದರ್ಭಗಳು ನಮ್ಮ ಸಮಾಜಿಕ ಅಸಮಾನತೆ ಹಾಗೂ ಸಂಘರ್ಷಗಳನ್ನು ತೆರೆದಿಡುತ್ತವೆ.
ಕನ್ನಡದಲ್ಲಿ ಬಂದ ಅತ್ಯುತ್ತಮ ಆತ್ಮಕಥೆಗಳ ಸಾಲಿಗೆ ‘ಕೇರಿ ಕೊಪ್ಪಗಳ ನಡುವೆ ‘ ಸೇರಲಿದೆ.
ಈ ಆತ್ಮಕಥೆಯ ಆರಂಭದ ಕಂತುಗಳು ಸಮಾಜಮುಖಿ ಎಂಬ ಪಾಕ್ಷಿಕದಲ್ಲಿ ಪ್ರಕಟವಾಗಿದ್ದವು. ನಂತರ ಕೆಲ ಕಾರಣಗಳಿಂದ ಆತ್ಮಕಥೆಯ ಬರಹ ನಿಂತು ಹೋಗಿತ್ತು.
ಸಂಗಾತಿ ವೆಬ್ ಆರಂಭಿಕ ದಿನಗಳಲ್ಲಿ , ಒಮ್ಮೆ ಮಾತಿಗೆ ಸಿಕ್ಕ ನನ್ನ ಪ್ರೀತಿಯ ಕತೆಗಾರ ಗುಂದಿ ಅವರನ್ನು ‘ ನೀವೇಕೆ ಆತ್ಮಕಥೆ ಪೂರ್ಣ ಮಾಡಬಾರದು ? , ಸಂಗಾತಿಗೆ ವೆಬ್ ಗೆ ಬರೆಯಿರಿ ಸರ್ ಎಂದೆ. ಈ ಪ್ರೀತಿಯ ವಿನಂತಿಗೆ ಸಹಮತ ತೋರಿದ ರಾಮಕೃಷ್ಣ ಗುಂದಿ ಸರ್ , ಆತ್ಮಕತೆಯನ್ನು ವರ್ಷಕ್ಕೂ ಹೆಚ್ಚು ಕಾಲ ಪ್ರತಿವಾರ ಬರೆದರು. ಆತ್ಮಕತೆಯ ಸರಣಿಯನ್ನು ಸಾಹಿತ್ಯ ಓದುಗರು, ಅವರ ಕೈಯಲ್ಲಿ ಕಲಿತ ಶಿಷ್ಯರು ಪ್ರತಿವಾರ ಓದಿ ಪ್ರತಿಕ್ರಿಯಿಸಿದರು. ಅದೊಂದು ಮರೆಯಲಾಗದ ಪಯಣ.
———————–
ನಾಗರಾಜ್ ಹರಪನಹಳ್ಳಿ.
ಧನ್ಯವಾದಗಳು ನಾಗರಾಜ್ ನಿಮ್ಮ ಬೆಲೆಕಟ್ಟಲಾಗದ ಪ್ರೀತಿಗೆ….
ಚೆನ್ನಾಗಿ ಬಂದಿದೆ