ಮಾಲಾ ಚೆಲುವನಹಳ್ಳಿ ಅವರ ಗಜಲ್

ಮನದ ಆಸೆ ಕಣ್ಣಲ್ಲಿ ಕಾಣುವಾಗ ಕಂಗಳು ಮುಚ್ಚುವೆಯೇಕೆ
ಛಣದ ಬೇಸರಕೆ ಅವಿಚ್ಚಿನ್ನ ಪ್ರೀತಿಯ ತೊರೆದು ಬೆಚ್ಚುವೆಯೇಕೆ

ಹುಚ್ಚು ಕೋಡಿ ಮನದ ಬಯಕೆಗಳಿಗೆ ಕಡಿವಾಣ ಹಾಕಲಾದೀತೇ
ವಯೋಸಹಜ  ಭಾವಗಳರಿಯದೆ ಮಾತಲ್ಲೇ ಚುಚ್ಚುವೆಯೇಕೆ

ಮನಸ್ಸು ಹೃದಯಗಳು ಒಂದಾದಮೇಲೆ ಭಿನ್ನ ಭೇಧಗಳ ಬಿತ್ತದಿರು
ಶೃಂಗಾರ ರಸಲಹರಿಯಲಿ ತೇಲುತಿಹ ಕನಸ ಗಂಟ ಬಿಚ್ಚುವೆಯೇಕೆ

ಗರಬಡಿದ ಬಾಳಿನಲ್ಲಿ ವರವಾಗಿ ಬಂದಿರಲು ನಿಶ್ಚಿoತೆಯಿಂದ ಸಾಗುತ್ತಿರುವೆ
ನಡೆದು ಬಂದ ಹಾದಿಯ ಸೊಗಸ ಅಲ್ಲಗಳೆದು ಜೀವದುಸಿರ ಕೊಚ್ಚುವೆಯೇಕೆ

ಕವಲು ದಾರಿಗಳಲಿ ದಿಗಿಲಿನಿಂದಲೇ ಸಾಗಿ ಬಂದವಳು ಮಾಲಾ
ಭರವಸೆಯ ಬೆಳಕು ಹಾದಿಯಲಿದ್ದ ಮೇಲೂ ಹಣತೆಯ ಹಚ್ಚುವೆಯೇಕೆ.


Leave a Reply

Back To Top