ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ

ನವಮಾಸ ಹೊತ್ತು
ಉಸಿರಿಟ್ಟು, ಜನ್ಮವಿತ್ತು
ಹೆಸರಿಟ್ಟು, ತನ್ನೆದೆಯಹಾಲಿಟ್ಟು
ಕಷ್ಟಕಾರ್ಪಣ್ಯ ಬದಿಗಿಟ್ಟು
ಸಾಕಿ ಸಲುಹಿದ ಹಡೆದವ್ವ

ಶಿಕ್ಷಣದ ಬೇರು ನೆಟ್ಟು
ಸ್ವಾಭಿಮಾನದ ನೀರುಣಿಸಿ
ಬದ್ಧತೆಯ ಪಾಠ ಕಲಿಸಿ
ಪ್ರಾಮಾಣಿಕತೆಯ ಮೆಟ್ಟಲಲಿ
ಅಡಿಗಡಿಗ ತಿದ್ದಿತೀಡಿದ ಹಡೆದವ್ವ

ಹದಿನೈದರ ಹರೆಯದಲಿ ವಿವಾಹ
ಬೇಸರಿಸದೇ ಎಳೆದಳು ಸಂಸಾರದ ನೋಗಾ
ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು

ವೃತ್ತಿಯಲಿ ಸರಕಾರಿ ಕಾಲೇಜು ಉಪನ್ಯಾಸಕಿ
ಮನೆಯಲಿ ಮಮತೆಯ ತಾಯಿಯಾಗಿ
ತಂದೆಗೆ ತಕ್ಕ ಮಡದಿಯಾಗಿ
ಮನೆಮಂದಿಗೆಲ್ಲ ಪ್ರೇರಕಿಯಾಗಿ
ಭವಿಷ್ಯ ಕೊಟ್ಟ ಹಡೆದವ್ವ

ಹಡೆದವ್ವನ ಹೆಸರು ಶಿವಲೀಲಾ
ಬದುಕಿದಳು ಶರಣತತ್ವದಲಿ
ಕಾಯಕದಾಸೋಹ ಉಸಿರಿನಲಿ
ಸದ್ದಿಲ್ಲದೇ ಎದ್ದುಹೋದಳು
ಮನ ಮಿಡಿಯುತಿದೆ ಹಡೆದವ್ವಳಿಗೆ


Leave a Reply

Back To Top