ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು

ಆಳಿದ ದಿನಗಳ ಮರೆತು
ಉಳಿದ ದಿನ ರಾತ್ರಿಗಳಲ್ಲಿ ಎಣಿಸು
ತಾರಾಗಣ
ದೂರದಾಕಾಶದ ಉದ್ದಕ್ಕೆ ಆವರಿಸಿರುವ
ರಾಹು ಕೇತು ಕ್ಷುದ್ರಗ್ರಹಗಳ ಎಣಿಸು
ಆಕಾಶ ಕಾಯಗಳ ಮರೆತು ವಿಜೃಂಭಿಸು
ಅಳಿದುಳಿದ ದಿನಮಾನಗಳ ಲೆಕ್ಕವಿಟ್ಟು

ಅದೋ ಅಲ್ಲಿ
ಧೃವತಾರೆ
ಸುಸ್ಥಿರ, ಅದೆ ಪ್ರಖರ, ಅದೆ ದಿಕ್ಸೂಚಿ
ಈಗಿಲ್ಲಿ ಬರೆ ನನ್ನ ಅಳಿದುಳಿದ
ತಾಯಿ ಬೇರು.
ಬೇರೆಲ್ಲ ಜೀವ ಕಾಯಗಳು ಇಲ್ಲಿಲ್ಲ!
ಇಂದಿಲ್ಲಿ, ನಾಳೆ ಮತ್ತೆಲ್ಲೋ.

ಜೀವನ ಚದುರಂಗದಾಟದಲ್ಲೂ ಅಷ್ಟೆ.
ನಾವೆಲ್ಲ ಸಿಪಾಯಿಗಳೇ
ರಾಜನೇ ಬಂದಿ!
ಸುತ್ತುವರಿದ ವಂಧಿಮಾಗಧರು
ಮತ್ತು ಹಿತ ಶತೃಗಳು!

ಕಾಲಾಳುಗಳು ನಾವು
ಮೇಲೆ ಆ ಪರಮ ದಿಕ್ಸೂಚಿಯಷ್ಟೆ
ಶಾಶ್ವತ ಸತ್ಯ
ಅವನು ಮಿನುಗು ತಾರೆಯಷ್ಟೆ

ಇದ್ದಷ್ಟು ದಿನ ರಾತ್ರೆಗಳಲ್ಲೆ
ಚಂದ್ರ ಸೂರ್ಯ ಗ್ರಹಣಗಳಲ್ಲೆ
ಬಂದಿಯಾದ ನಮ್ಮ ದೊರೆ
ಧೃವತಾರೆ!
ನಾವೆಲ್ಲ ನಶ್ವರ
ಅಲ್ಲಿಲ್ಲಿ ಅಡ್ಡಾಡುವ
ಆಕಾಶ ಕಾಯಗಳು
ನಾನಾಗಲೆ ಹೇಳಿದಂಥ
ಕ್ಷುದ್ರ ಗ್ರಹಗಳು
ರೌದ್ರ ರೂಪಿಯಾಗದ
ತಾಮಸಿಗಳು!

ಬರೇ ಹುಲು ಮಾನವರು ನಾವು
ಇಂದ್ದಿದ್ದು ನಾಳೆ ಹೋಗುವವರು
ಬ್ರಹ್ಮಾಂಡದ ಧೂಳಾಗುವವರು
ಧೂಮ ಕೇತುಗಳು
ನಕ್ಷತ್ರ ಕಾಯಗಳು!


3 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು

  1. ಸುಂದರ ಕವನ ವೆಂಕಣ್ಣ.
    ನಮ್ಮ ಜೀವನ ಪಯಣದ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದೀರಿ.
    ಓದಿ ಆನಂದವಾಯಿತು.

Leave a Reply

Back To Top