ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಜಾತ್ರೆ ಮತ್ತು ಬಳೆ
ಜಾತ್ರೆಯಲ್ಲಿ ತೇರಿಗೆ
ಉತ್ತತ್ತಿ ಬಾಳೆ ಹಣ್ಣು ಒಗೆದು
ಕಲಶಕ್ಕೆ ಬಡಿದ ತೃಪ್ತಿಯಲ್ಲಿ
ಒಂದು ನಗೆ ಬೀರಿ
ಕುಣಿದು ಕುಪ್ಪಳಿಸಿದೆವು
ಸಾಲು ಸಾಲು
ಬಳೆಯ ಅಂಗಡಿ
ಮತ್ತೇ ಮತ್ತೇ ನೋಡುತ್ತ
ವಿವಿಧ ಮಾದರಿಗಳ
ಕಣ್ತುಂಬಿಕೊಂಡೆವು
ಗದ್ದಲವಿಲ್ಲದೆಡೆ ನಡೆದು
ಗುಣಮಟ್ಟ ಖಾತರಿಪಡಿಸಿ
ಒಂದೊಂದೇ ಎಣಿಸಿ
ಬರೋಬ್ಬರಿ ಡಜನ್ನು
ಮೇಲೊಂದು
ಬೆಸ ಸಂಖ್ಯೆಯಲ್ಲಿ
ಬಳೆಗಳ ಹೊತ್ತು ತಂದೆವು
ಮಲಾರಗಳ ತಿರುತಿರುವಿ
ರಟ್ಟಿನ ಡಬ್ಬಿಗಳಲ್ಲಿಯ
ಹೊಸ ಮಾದರಿ ಪರೀಕ್ಷಿಸಿ
ಹಿಂದೆ ಮುಂದೆ ತಿರುಗಿಸಿ
ವರ್ಣಗಳ ನೋಟದೊಳಿರಿಸಿ
ಅದೃಷ್ಟದ ಬಣ್ಣವಾರಿಸಿದೆವು
ಒಂದಿಷ್ಟು ಚೌಕಾಶಿ ಮಾಡುತ್ತ
ಕಡೆಗೆ ರೇಟು ಕುದುರಿಸಿ
ಗೆದ್ದೆವೆಂದು ಬೀಗಿದೆವು
ನಾಜೂಕು ಬಳೆ
ಕಾಪಿಡಬೇಕು ದಿನವೂ
ಬಣ್ಣ ಮಾಸಿದಂತೆ
ಹಳೆಯದಾದಂತೆ
ಹೊಸತರತ್ತ ನಿಲುವೂ
ಜಾತ್ರೆಗೂ ಬಳೆಗೂ
ಯಾವುದೀ ನಂಟು
ಜಾತ್ರೆ ಯಾತ್ರೆಯೂ
ಬಿಡಿಸುತ್ತ ನಡೆದ ಕಗ್ಗಂಟು..!
ಅನಸೂಯ ಜಹಗೀರದಾರ