ಕಾವ್ಯ ಸಂಗಾತಿ
ಡಾ.ವೈ.ಎಂ.ಯಾಕೊಳ್ಳಿ
ಟಂಕಾ ದಶಕ
೧
ಶಾಲೆಯಮುಂದೆ
ನಿಂದ ಮಕ್ಕಳ ದಂಡು
ನಕ್ಷತ್ರಗಳು
ಇಳಿದಂತೆ ಧರೆಗೆ
ಬಾನು ಬರಿದಾಗಿದೆ
೨
ಹೆಸರೊಂದನು
ಕೊಡದಿರು ಹೊಳಗೆ
ಹರಿಯುತಿರೆ
ಮನದ ಮಲಿನತೆ
ಕಳೆಯುತಿರೆ ಸದಾ
೩
ಸಂತಸವದು
ಎದೆಯೊಳಿರಬೇಕು
ಬಡತನವ
ಕಾಣಿಸದೆ ಹೊರಗೆ
ತುಂಬಿರಲಿ ಒಳಗೆ
೪
ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು
ಬೆನ್ನು ಹಿಂದೆ ಇರೋದೆ
೫
ಕುಡಿದಮಲು
ಇಳಿಯದ ಹೊರತು
ಅರಿವಾಗದು
ಇಳಿದ ಮೇಲೆ ಎಲ್ಲ
ಹೊರಟು ಹೋಗುವದು
೬
ಸರಕಾರವ
ನಂಬಿದ ರೈತ ಕಾದ
ಪರಿಹಾರಕೆ
ಬಂದಿತು ಸಹಕಾರ
ರೈತ ಹೋದ ಕಾಲಕೆ
೭
ಸಾಲವ ಮಾಡಿ
ಮಗನ ಕಲಿಸಿದ
ಎತ್ತರಕೇರಿದ
ಸುತ ಆಗಸಕೇರಿ
ಅಪ್ಪ ಈಗ ಅನಾಥ
೮
ಸತ್ತವರನು
ಬೇಗ ಮರೆವ ನಾವು
ನೆನೆಯಬೇಕು
ನಮ್ಮ ಪಾಳಿ ಬಂದಾಗ
ಜಗ ಕಾಣೋದೆ ಹಾಗೆ
೯
ಮಾಡಿದಪಾಪ
ಬೆನ್ನು ಹತ್ತೊ ಬೇತಾಳ
ಬಿಡಲಾರದು
ಸರಳಕೆ ನಮ್ಮನು
ತೆರಬೇಕು ತಗಾದೆ
೧೦
ಅಪ್ಪ ಬೆಳೆದ
ಮರ ನೀಡಿತು ಹಣ್ಣು
ಮಗನಕಾಲ
ಕಡಿದ ಗಿಡವು ತಾ
ಆಯತೀಗದು ಮಣ್ಣು
ಡಾ.ವೈ.ಎಂ.ಯಾಕೊಳ್ಳಿ