ಡಾ.ಬಸಮ್ಮ ಗಂಗನಳ್ಳಿ ಕವಿತೆ-ಬರಗಾಲದ ಸುಳಿಯೊಳಗೆ

ಬರಗಾಲದ ಸುಳಿಯೊಳಗೆ ಸಿಲುಕ್ಯಾದ ಜಗವೆಲ್ಲ
ನೆಲವೆಲ್ಲ ಬರಡಾಗಿ
ಬಂಜರು ಎನಿಸ್ಯಾದ ||

ಸಿರಿ ಭುವಿಯ ಐಸಿರಿ
ಸರಿದ ತಾ ಹೋಗ್ಯಾದ
ಬರಗಾಲ ಬಂದು
ಬೆಂಕಿ ಆಗ್ಯಾದ ನೆಲವ ||

ದುಡಿವ ರೈತಣ್ಣ
ಕೈ ಚೆಲ್ಲಿ ಕೂತಾನ
ಭೂತಾಯಿ ಒಡಲೀಗಿ
ಹಿಡಿ ಕಾಳು ತುಂಬಿಲ್ಲ ||

ತನಗಾಗಿ ಏನನ್ನು ಬೇಡದ
ಆ ಜೀವಿ, ದನಕರುಗಳ ಬವಣೀಯ ನೋಡಿ ಮರುಗ್ಯಾದ ಮನದಾಗ ||

ಮುಗಿಲಿಗೆ ಕೈಮುಗಿದು
ಕೇಳ್ಯಾನ ರೈತಣ್ಣ
ಯಾಕಪ್ಪ ಮಳಿರಾಯ ಈ ಮುನಿಸು ನನ್ನ ಮ್ಯಾಲೆ ||

ಎಲ್ಲೆಲ್ಲೂ ಯಂತ್ರಗಳು
ಕಲ್ಲು ಮಣ್ಣುಗಳು
ಗಿಡಗಂಟಿ ಇಲ್ಲದಂಗ
ಸೊಬಗೆಲ್ಲ ಕಸಿದಾನ ||

ಗುಡ್ಡ ಪರ್ವತದ ನೆತ್ತೀಯ ಸೀಳ್ಯಾನ ಹಳ್ಳಕೊಳ್ಳ
ನದಿಗಳ ಇಲ್ಲದಂಗ
ಮಾಡ್ಯಾನ ತಿಳಿಗೇಡಿ ||

ಕೇಳು ನೀ ರೈತಣ್ಣ
ಹೊಲ ಹಸನಗೊಳಿಸಿ
ನೆಲ ಹದವ ಮಾಡಿ
ಚಂದದ ಮನಸೀಲೆ ||

ಭೂತಾಯಿ ನಿಷ್ಠೆಯಲಿ ಪೂಜೆಯನು ಗೈದು,
ಬೀಜವ ಬಿತ್ತಿದರ
ಸಮೃದ್ಧ ಫಸಲವು ||

ಹೈರಾಣದ ಹಾಡಿಲ್ಲ
ದೇಹಕ ಮಣ್ಣ ಮೆತ್ತಿಲ್ಲ
ಬೆವರೀನ ಸುಳಿವಿಲ್ಲ
ನೆಲ ಘಮಲು ತಿಳಿದಿಲ್ಲ ||

ಮಳೆರಾಯ ನಾನು
ಇಳಿದು ಬರಬೇಕಂದರ ಭೂಮ್ತಾಯಿ ಚಂದ ಕಾಣಬೇಕು ಪ್ರೀತಿ ಉಕ್ಕಿ ಹರೀಬೇಕು ||

ಪ್ರೀತಿ ಇಲ್ಲದ ಮ್ಯಾಲ
ಮೋಡ ಕಟ್ಟಲಿ ಹ್ಯಾಂಗ
ಮಳೆ ಸುರಿಸುವುದ್ಯ್ಹಾಂಗ
ಇಳೆ ಕಳೆ ಕಟ್ಟೀತು ಹ್ಯಾಂಗ ||

ನಿನಗಾಗಿಯಾದರೂ
ಬರಬೇಕು ಇಳಿದು
ಯಾರದೋ ತಪ್ಪಿಗೆ
ಬಲಿ ನೀ ಆಗಬಾರದು ||

ತಿಳಿದು ಬರುವೆ ತಾಳು
ನಿನಗೆ ಸುಖ ತರುವೆನು
ಎಲ್ಲರು ನಿನ್ನ ಕಡೆ
ಮುಖ ಮಾಡಿ ನೋಡಲಿ ||

ಜಗಕೆ ಅನ್ನವ ನೀಡುವ
ರೈತ ನೀ ಕೇಳು,ಹರಿಸಬ್ಯಾಡ

ಯಂತ್ರಗಳ ಹೊಲದಾಗ ಬಸವಣ್ಣ ಇರಲಿ ಜೋಡೀಲಿ ||


Leave a Reply

Back To Top