ಹಿರಿಯ ಮಗಳಿಗೆ ಗಂಡು ಹುಡುಕಿದ್ದು ಆಯಿತು. ಮದುವೆ

ನಿಶ್ಚಯ ಮಾತುಕತೆಗೆ ಕೂಡಾ ಪತ್ನಿ ಕಲ್ಯಾಣಿಯನ್ನು ಕರೆತರಲು ನಾರಾಯಣನ್ ರವರಿಂದ ಸಾಧ್ಯವಾಗಲೇ ಇಲ್ಲ. 

ಕೈಯಲ್ಲಿ ಇರುವ ಹಣ ಖರ್ಚಾಗುವ ಮೊದಲೇ ಆದಷ್ಟು ಬೇಗ ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಮಾಡಿ ಬಿಡಬೇಕು ಎನ್ನುವ ಆಲೋಚನೆ ನಾಣುವಿನದಾಗಿತ್ತು. ತರಾತುರಿಯಲ್ಲಿ ಮದುವೆಯ ತಯಾರಿ ನಡೆಯಿತು. ಸಡಗರ ಸಂಭ್ರಮದಿಂದ ಅತೀ ಆಡಂಭರವಿಲ್ಲದೆ ಕಲ್ಯಾಣಿಯ ಅನುಪಸ್ಥಿತಿಯಲ್ಲಿ ಮದುವೆಯೂ ನಡೆಯಿತು. ಅಕ್ಕನನ್ನು ಬೀಳ್ಕೊಡಲು ತಂಗಿ ತಮ್ಮಂದಿರಿಗೆ ಮನಸ್ಸೇ ಇರಲಿಲ್ಲ. ಅಮ್ಮನ ನಂತರ ಆ ಸ್ಥಾನವನ್ನು ತುಂಬಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಅಕ್ಕ ತಮ್ಮನ್ನು ಬಿಟ್ಟು ಹೋಗುತ್ತಿದ್ದಾಳೆ ಎನ್ನುವ ನೋವು ಅವರೆಲ್ಲರ ಮನವನ್ನು ಬಹಳವಾಗಿ ನೋಯಿಸಿತು. ಮುಂದೇನು ಎನ್ನುವ ಚಿಂತೆಯೂ ಕಾಡಿತು. ನಾಣುವಿಗೆ ತನ್ನ ಒಂದು ಜವಾಬ್ದಾರಿ ಮುಗಿಯಿತಲ್ಲ. ಮಗಳನ್ನು ನೋಡಿಕೊಳ್ಳಲು ಅವಳ ಪತಿ ಇರುತ್ತಾನೆ. ಇನ್ನು ಈ ಮೂವರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ.

ಸುಮತಿಗೂ ಒಂದು ಒಳ್ಳೆಯ ಸಂಬಂಧ ಆದಷ್ಟೂ ಬೇಗ ಹುಡುಕಬೇಕು ಎಂದು ತೀರ್ಮಾನ ಮಾಡಿದರು. ಆದರೆ ಸುಮತಿಗೆ ಇದು ಯಾವುದರ ಅರಿವೂ ಇರಲಿಲ್ಲ. ಅಕ್ಕನ ಮದುವೆಯ ನಂತರ ಮನೆಯ ಕೆಲಸದ ಜವಾಬ್ದಾರಿಯನ್ನು ಸುಮತಿ ವಹಿಸಿಕೊಂಡು ತಮ್ಮಂದಿರ ಯೋಗಕ್ಷೇಮ ನೋಡಿಕೊಳ್ಳ ತೊಡಗಿದಳು. ಇದೇ ಸಂದರ್ಭದಲ್ಲಿ ಅವಳ ಹತ್ತನೇ ತರಗತಿಯ ಫಲಿತಾಂಶ ಬಂದಿತು. ಅವಳು ಉತ್ತಮ ಶ್ರೇಣಿಯಲ್ಲಿ ಮತ್ತೊಮ್ಮೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣಳಾಗಿದ್ದಳು. ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಖುಷಿಯಿಂದ ತಮ್ಮಂದಿರಿಗೆ ಹೇಳುತ್ತಾ ಸಂತೋಷಪಟ್ಟಳು. ಅಕ್ಕನ ಮನೆಯೂ ಹೆಚ್ಚು ದೂರವಿರಲಿಲ್ಲ. ಸಕಲೇಶಪುರ ಪಟ್ಟಣಕ್ಕೆ ಸ್ವಲ್ಪ ಹತ್ತಿರದಲ್ಲಿ ಇದ್ದುದರಿಂದ ಅಕ್ಕನ ಮನೆಗೆ ಹೋಗಿ ತನ್ನ ಖುಷಿಯನ್ನು ಹಂಚಿಕೊಳ್ಳಲು ಬಯಸಿದಳು. 

ಹಿರಿಯ ಮಗಳು ಹತ್ತಿರವೇ ಇರಲಿ ಆಗಾಗ ಅವಳ ಯೋಗಕ್ಷೇಮವನ್ನು ವಿಚಾರಿಸಬಹುದಲ್ಲ ಎನ್ನುವ ಆಲೋಚನೆಯಿಂದಲೇ ದೂರದಿಂದ ವರನನ್ನು ಹುಡುಕದೆ ಸಮೀಪದಲ್ಲಿ ಇರುವ ವರನನ್ನು ಹುಡುಕಿ ಮದುವೆ ಮಾಡಿದ್ದರು. ಪಕ್ಕದ ಮನೆಯ ಹಿರಿಯ ಗೆಳತಿ ಸುಮತಿಯ  ಬುದ್ಧಿಮತ್ತೆಯನ್ನೂ ಹಾಗೂ ಅವಳ ಕರುಣಾ ಗುಣವನ್ನು ತಿಳಿದು ಸರಕಾರದಿಂದ ಸ್ಟಾಫ್ ನರ್ಸಿಂಗ್ ಕರೆ ಮಾಡಿರುವುದನ್ನು ತಿಳಿಸಿ ಅರ್ಜಿ ಹಾಕಲು ಸಹಾಯ ಮಾಡಿದರು. ನರ್ಸಿಂಗ್  ಸುಮತಿಗೆ ಬಹಳ ಪ್ರಿಯವಾದ ಕೆಲಸವಾಗಿದ್ದ ಕಾರಣ ಖುಷಿಯಿಂದ ಒಪ್ಪಿಕೊಂಡು ಅರ್ಜಿ ಸಲ್ಲಿಸಿದಳು. ಅಷ್ಟು ಹೊತ್ತಿಗಾಗಲೇ ಅವಳಿಗೆ ತಿಳಿಯದಂತೆ ಅವಳ ಅಪ್ಪ ಒಬ್ಬ ವರನನ್ನು ಹುಡುಕಿ ಮದುವೆಯ ತಯಾರಿಯಲ್ಲಿ ತೊಡಗಿದ್ದರು. ವಿಷಯ ತಿಳಿದ ಸುಮತಿಗೆ ಅದೊಂದು ಜೀರ್ಣಿಸಲು ಸಾಧ್ಯ ವಾಗದಂತಹ ಆಘಾತವಾಯಿತು. ತನಗೆ ಕೆಲಸ ಸಿಕ್ಕಿದ ನಂತರ ಹಣ ಸಂಪಾದನೆ ಮಾಡಿ ಹೇಗಾದರೂ ಮಾಡಿ ಅಮ್ಮನನ್ನು ಊರಿಂದ ಕರೆತರಬೇಕು ಎಂಬ ಯೋಚನೆಯಲ್ಲಿ ಇದ್ದಳು. ತನ್ನ ಆಸೆಗೆ ಅಪ್ಪ ತಣ್ಣೀರು ಎರಚಿದರು ಎಂದು ಅವಳಿಗೆ ತುಂಬಾ ದುಃಖವಾಯಿತು.ತನ್ನ ನೋವನ್ನು ಯಾರಲ್ಲೂ ಹೇಳಿಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ. ತನ್ನ ಹಿರಿಯ ಗೆಳತಿಯ ಜೊತೆ ಹೇಳಿಕೊಂಡು ಮನಸಾರೆ ಅತ್ತಳು. ಸುಮತಿಯ ಹಿರಿಯ ಗೆಳತಿ ಅವರ ಅಪ್ಪನಿಗೆ ಇರುವ ವಿಷಯ ಹೇಳಿ ನಾರಾಯಣನ್ ರವರ ಜೊತೆ ಮಾತನಾಡಲು ತಿಳಿಸಿದಳು. ಸುಮತಿಗೆ ಈಗಲೇ ಮದುವೆ ಮಾಡುವುದು ಬೇಡ. ಅವಳಿಗೆ ಕೆಲಸ ಮಾಡುವ ಆಸೆ ಇದೆ. ಹಾಗಾಗಿ ಒಂದೆರಡು ವರ್ಷಗಳ ನಂತರ ಮದುವೆ ಮಾಡಿ ಎಂದು ಕೇಳಿಕೊಳ್ಳಲು ವಿನಂತಿಸಿ ಕೊಂಡಳು. ಅದರಂತೆ ಆ ಹಿರಿಯರು ಕೂಡಾ ನಾರಾಯಣನ್ ರವರನ್ನು ಸಮೀಪಿಸಿ ಸುಮತಿಯ ಮನದ ಇಂಗಿತ ತಿಳಿಸಿದರು.

ನಯ ವಿನಯದಿಂದಲೇ ಹಿರಿಯರ ಮಾತಿಗೆ ಗೌರವ ಕೊಡುತ್ತಾ  “ನಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗಿ ದುಡಿಯುವ ಪರಂಪರೆ ಇಲ್ಲ…. ಒಳ್ಳೆಯ ವರನನ್ನು ನೋಡಿದ್ದೇನೆ…. ಮಿಲಿಟರಿಯಲ್ಲಿ ಕೆಲವು ಕಾಲ ಕೆಲಸ ಮಾಡಿದ್ದಾನೆ….ಸುಮತಿಯನ್ನು ಖಂಡಿತಾ ಚೆನ್ನಾಗಿ ನೋಡಿಕೊಳ್ಳುತ್ತಾನೆ…. ಅವಳು ದುಡಿದು ನನ್ನನ್ನು ನೋಡಿಕೊಳ್ಳಬೇಕಾಗಿಲ್ಲ…. ಅವಳನ್ನು ಒಬ್ಬ ಒಳ್ಳೆಯ ವ್ಯಕ್ತಿಗೆ ಮದುವೆ ಮಾಡಿದರೆ ಜೀವನ ಪೂರ್ತಿ ಅವಳನ್ನು ಕಾಪಾಡುವ, ನೋಡಿಕೊಳ್ಳುವ ಹೊಣೆ ಅವನದಾಗಿರುತ್ತದೆ.

ನನಗೂ ನಿರಾಳ… ಒಬ್ಬ ಯೋಗ್ಯನ ಕೈಗೆ ಅವಳ ಜವಾಬ್ದಾರಿಯನ್ನು ಒಪ್ಪಿಸಿದರೆ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ನನಗೆ ಇರುತ್ತದೆ ಅಲ್ಲವೇ” ಎಂದರು. ಅವರ ಮಾತಿಗೆ ಆ ಹಿರಿಯರು ಏನೂ ಹೇಳುವಂತೆ ಇರಲಿಲ್ಲ. ಸುಮತಿಯ ಮದುವೆಯ ತಯಾರಿ ಭರದಲ್ಲಿ ನಡೆಯಿತು. ಅವಳ ಮದುವೆಯ ನಿಶ್ಚಿತಾರ್ಥಕ್ಕೂ ಕೂಡಾ ಕಲ್ಯಾಣಿಯನ್ನು ನಾರಾಯಣನ್ ಕತೆತರಲೇ ಇಲ್ಲ. 

ಕಲ್ಯಾಣಿಯ ಇಚ್ಛೆಗೆ ವಿರುದ್ಧವಾಗಿ ಆಸ್ತಿ ಮಾರಿದ ಬೇಸರ ಹಾಗೂ ಪಶ್ಚಾತ್ತಾಪ ಇದ್ದ ಕಾರಣ ಪತ್ನಿಗೆ ಮುಖ ತೋರಿಸಲು ಹಿಂಜರಿದರು. ಮನದಲ್ಲೇ ಕೊರಗುತ್ತಾ ತನ್ನ ಪ್ರೀತಿಯ ಮಡದಿಯನ್ನು ನೆನೆಯುತ್ತಾ ಒಂಟಿಯಾಗಿಯೇ ಕರ್ತವ್ಯ ನೆರವೇರಿಸಲು ತಯಾರಾದರು. ಆದರೆ ಮನದಲ್ಲಿ ಮಾತ್ರ ತಾನು ಮಾಡಿದ್ದು ಬಹಳ ದೊಡ್ಡ ತಪ್ಪಾಯಿತು ಎನ್ನುವ ಚಿಂತೆ ಅವರನ್ನು ಕಾಡುತ್ತಲೇ ಇತ್ತು. ಪತ್ನಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಂಡ ತನ್ನ ನಡೆಯನ್ನು  ತಾನೇ ಮನಸಾರೆ ಹಳಿದುಕೊಳ್ಳುತ್ತಾ ಪತ್ನಿಯನ್ನು ಮರೆಯಲಾರದೇ ಅವರನ್ನು ಕೇರಳದಿಂದ ಕರೆತರಲೂ ಆಗದೇ ಇಕ್ಕಟ್ಟಿಗೆ ಸಿಲುಕಿ ನಾರಾಯಣನ್ ಒದ್ದಾಡುತ್ತಾ ಇದ್ದರು. ಕೇರಳದಲ್ಲಿ ಊರಿನವರ ಹಾಗೂ ನೆಂಟರಿಷ್ಟರ ಕುಹಕದ ಮಾತುಗಳನ್ನು ಕಲ್ಪಿಸಿಕೊಂಡು ಊರಿಗೆ ಹೋಗಲು ಹಿಂಜರಿದರು.

ತನ್ನ ಇಷ್ಟಕ್ಕೆ ವಿರುದ್ಧವಾಗಿ ಅಪ್ಪ ಮದುವೆ ತಯಾರಿ ನಡೆಸಿರುವುದನ್ನು ತಿಳಿದು ಸುಮತಿ ಮನದಲ್ಲಿಯೇ ಕೊರಗಿದಳು. ಈಗ ಅಮ್ಮ ಇಲ್ಲಿ ಇದ್ದಿದ್ದರೆ ಇದೆಲ್ಲಾ ನಡೆಯುತ್ತಾ ಇರಲಿಲ್ಲ. ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಅಮ್ಮ ನಡೆದುಕೊಂಡವರೇ ಅಲ್ಲ. ತಮ್ಮ ಕುಟುಂಬದಲ್ಲಿ ಹೆಂಗಸರ ತೀರ್ಮಾನಕ್ಕೆ ಬೆಲೆ ಇಲ್ಲ ಎನ್ನುವುದು ಸುಮತಿಗೆ ಎಂದೋ ಅರ್ಥವಾಗಿ ಹೋಗಿತ್ತು. ಆದರೆ ಅಮ್ಮ ಹೇಗಾದರೂ ಮಾಡಿ ಸಂಬಾಳಿಸಿಸುತ್ತಾ ಇದ್ದರೋ ಏನೋ ಎನ್ನುವ ಸಣ್ಣ ಆಸೆ ಅವಳ ಮನಸ್ಸಿನ ಮೂಲೆಯಲ್ಲಿ ಈಗಲೂ ಇತ್ತು. ಅಮ್ಮನನ್ನು ನೆನೆದು ಅವಳ ಮನ ಮುಕವಾಗಿ ರೋಧಿಸಿತು.

ಅಕ್ಕ ಕೂಡಾ ಈಗ ಜೊತೆಯಲ್ಲಿ ಇಲ್ಲದ್ದು ನೆನೆದು ಅವಳಿಗೆ ಬಹಳ ಸಂಕಟವಾಯಿತು. ಒಂಟಿತನದ ಅನುಭವ ಅವಳನ್ನು ಕಂಗೆದಡಿಸಿತು. ತಮ್ಮಂದಿರಿಗೆ ಇವೆಲ್ಲಾ ಅರ್ಥವಾಗುವ ವಯಸ್ಸು ಕೂಡಾ ಆಗಿಲ್ಲ. ಅಮ್ಮ ಇಲ್ಲ ಅಕ್ಕ ಇಲ್ಲ ಇನ್ನು ತಾನೂ ಇವರಿಬ್ಬರ ಜೊತೆ ಇರುವುದಿಲ್ಲ. ಇನ್ನೂ ಚಿಕ್ಕವರಾದ ತಮ್ಮಂದಿರು ಹೇಗೆ ಬದುಕುವರೋ ಎನ್ನುವುದನ್ನು ಊಹಿಸಿ ಅವಳಿಗೆ ಕರುಳು ಹಿಂಡಿದಂತೆ ಆಯ್ತು. ತನ್ನ ನಿಸ್ಸಹಾಯಕ ಪರಿಸ್ಥಿತಿಯನ್ನು ನೆನೆದು ಪರಿತಪಿಸಿದಳು. ಆದರೆ ಅವಳಿಂದ ಏನೂ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಕಡೆ ತಮ್ಮಂದಿರ ಮುಂದಿನ ಸ್ಥಿತಿ ಹಾಗೂ ಕೆಲಸಕ್ಕೆ ಸೇರಬೇಕು ಎನ್ನುವ ತನ್ನ ಮನದ ಆಸೆ ಫಲಿಸದೇ ಇರುವುದು ನೆನೆದು ಅತೀವ ದುಃಖವಾಯಿತು. ತನ್ನ ಮುಂದಿರುವ ಎಲ್ಲಾ ದಾರಿಯೂ ಮುಚ್ಚಿ ಹೋಗಿದೆ. ಇನ್ನು ಅಮ್ಮನನ್ನು ಕೇರಳದಿಂದ ಕರೆತರುವ ತನ್ನ ಆಸೆ ನೆರವೇರದು ಎಂದು ಸುಮತಿಗೆ ಮನದಟ್ಟಾಯಿತು.


Leave a Reply

Back To Top