ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಪ್ರೀತಿಯ ಸ್ಫೂರ್ತಿ
ನನ್ನ ನಿನ್ನ ಈ ಪ್ರೇಮ ಕವನ
ಮನಸುಗಳ ನಡುವಿನ ಅಮೃತ ಸಿಂಚನ
ನನ್ನ ಕಾಣಲು ನಿನ್ನೆದೆಯಲಿ ಸಮ್ಮೋಹ ಸಂವಹನ
ನಿನ್ನ ನೆನೆಯಲು ನನ್ನ ಮೊಗದಿ ನಗುವಿನ ತನನ
ನನ್ನ ಮನ ಮಂದಿರದಿ ಶಾಶ್ವತ ನೀನು
ನಿನ್ನ ಹೃದಯದ ಶ್ರೀಮಂತಿಕೆ ನಾನು
ನನ್ನ ಮಧುರ ಪ್ರೇಮಕೆ ಭಾಷ್ಯ ನೀನು
ನಿನ್ನೊಲವ ನಿರೀಕ್ಷೆ ಯ ಪರಿಧಿ ನಾನು
ನನ್ನ ಪ್ರೇಮ ಕಾವ್ಯದ ಕುಸುಮ ನೀನು
ನಿನ್ನೊಳಗಿನ ಸಿಹಿ ಮಕರಂದ ನಾನು
ನನ್ನ ಭಾಗ್ಯದ ಬಂಗಾರ ನೀನು
ನಿನ್ನ ಕನಸಿನ ಐಸಿರಿ ನಾನು
ನನ್ನ ಹೃದಯ ಕವಾಟಗಳ ಕಂಪನ ನೀನು
ನಿನ್ನ ಅಬಿಧಮನಿಗಳಲ್ಲಿ ಸಂಚಾರ ನಾನು
ನೀ ಹಾಲಾದರೆ ನಿನ್ನೊಳಗಡಗಿಹ ಬೆಣ್ಣೆ ನಾನು
ನೀ ಹೂವಾದರೆ ನಿನ್ನಯ ಸುಗಂಧ ನಾನು
ನೀ ಮೇಘವಾದರೆ ಬೀಸುವ ತಂಗಾಳಿ ನಾನು
ನೀ ಬಾನಾದರೆ ಮಿಂಚುವ ಚುಕ್ಕಿ ನಾನು
ನನ್ನ ಕೈಗೆಟುಕದ ಮಾಣಿಕ್ಯ ನೀನು
ನಿನ್ನ ಕನಸಿನ ಕನ್ನಿಕೆ ನಾನು
ಅಗೋಚರದಿಂದ ವಾಸ್ತವಕ್ಕಿಳಿದು ಬಾ ಒಮ್ಮೆ ನೀನು
ಸುಪ್ತ ಕಾಮನೆಗಳ ಸ್ಪಷ್ಟ ನೈಜತೆಯಲಿ ಲೀನಳಾಗುವೆ ನಾನು
ಶಾಲಿನಿ ಕೆಮ್ಮಣ್ಣು