ಕಾವ್ಯ ಸಂಗಾತಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ-
ಗಜಲ್
ಓಗರನ ಮನೆಯಲ್ಲಿ ಮರವು ತಾನೂ ಕೂಳು ಬೇಯಿಸುವ, ಕಟ್ಟಿಗೆಯಷ್ಟೇ ಸಖಿ
ಸಮಾಧಿಯಲಿ ಸಿರಿ ಗಂಧದಾ ಮರವು ತಾನೂ ಹೆಣವ ಸುಡುವ, ಕಟ್ಟಿಗೆಯಷ್ಟೇ ಸಖಿ
ಒಕ್ಕಲಿಗನ ಹೊಲದಲ್ಲಿ ಮರವೂ ತಾನೂ ಫಲವ ನೀಡುವ, ಪಸಲಷ್ಟೇ ಸಖಿ
ಗುಡಿಕಾರನ ಮನೆಯಲಿ ತಾನು ಬರಿಯ ಮರವಲ್ಲ ಹೊಸಿಲಾಗುವ, ಬಾಗಿಲ ಚಿತ್ತಾರವಷ್ಟೇ ಸಖಿ
ವಡ್ಡನ ಮನೆಯಲ್ಲಿ ಕಲ್ಲು ತಾನೂ ಬರಿಯ ಚಪ್ಪಡಿಯ ಇಟ್ಟಿಗೆಯಷ್ಟೇ ಸಖಿ
ಶಿಲ್ಪಿಗನಾ ಮನೆಯಲ್ಲಿ ಕಲ್ಲು ತಾನೂ ಬರಿಯ ಕಲ್ಲಲ್ಲಾ ಕಡಿದುಮಾಡುವ, ಶಿಲೆಯಷ್ಟೇ ಸಖಿ
ಧಣಿಗಳ ಹೊಲದ ಮಣ್ಣು ಬಡವನು ನೆಕ್ಕಿ ಬೆವರಲಿ ಬೆಳೆಯುವ ಬೆಳೆವ ಕಪ್ಪುಮಣ್ಣಷ್ಟೇ ಸಖಿ
ಕುಂಬಾರನ ಮನೆಯಲಿ ಮಿಡಿದ ಮಣ್ಣು ಮಣ್ಣಲ್ಲವು ಬೆಳಕ ಚೆಲ್ಲುವ, ಹಣತಿಯಷ್ಟೇ ಸಖಿ
ಬರಿಯ ಹುಟ್ಟನು ಬರಿದೂ ಮಾಡಿ ನೀ ಹೀಗೆ ಬದುಕುವ ಬದುಕಷ್ಟೇ ಸಖಿ
ಏ “ನಾಣಿ”ಬಂದ ಬದುಕಿದು ಬೆಳಗಿಬಿಡು ಜಗವೆಲ್ಲವ, ಇರುವ ಜೀವನ ಇರುವುದಿಷ್ಟೇ ಸಖಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ-