ಕಾವ್ಯ ಸಂಗಾತಿ
ಜ್ಯೋತಿ , ಡಿ.ಬೊಮ್ಮಾ
ಪ್ರೇಮದ ಹಲವು ಆಯಾಮಗಳು.
ಯೌವನದ ಪ್ರೇಮದ ಪರಿಗೆ ಅದೇಷ್ಟು ಬಣ್ಣಗಳು.
ಕಣ್ಣಂಚಿನ ನೋಟಕೆ , ಒಲವಿನ ಪಿಸುಮಾತಿಗೆ , ತುಟಿಯಂಚಿನ ನಸುನಗುವಿಗೆ , ಆ ಕತ್ತಿನ ಕೊಂಕಿಗೆ
ಬಳುಕಿನ ನಡುವಿಗೆ , ಗೆಜ್ಜೆಯ ಲಯಕ್ಕೆ
ಅದೇಷ್ಟು ಪುಳುಕಗಳು.
ಮಾಗಿದಂತೆಲ್ಲ ಪ್ರೇಮ ಬರಿ ಯಾಂತ್ರಿಕ.
ಒಂದೊಮ್ಮೆ ನಿನ್ನ ಸಾಂಗತ್ಯ ಕ್ಕೆ ಅದೇಷ್ಟು ಹಂಬಲಿಸುತಿದ್ಧೆ.
ಈಗ ಜೋತೆಗಿದ್ದರೂ ಇಬ್ಬರೂ ಎಕಾಂಗಿಗಳು.
ನಿನ್ನೊಂದಿಗೆ ಬೆಸೆಯಲು ಪ್ರೀತಿ ಪಾತ್ರರನ್ನೂ ಧಿಕ್ಕರಿಸಿದೆ.
ಈಗ ಬೆಸುಗೆ ಕಳಚದಂತಿರಲು ಹೆಣಗಬೇಕಾಗಿದೆ.
ಪ್ರೇಮಿಸುವಾಗ ಹಸಿವೆ ನೀರಡಿಕೆಗಳೆಲ್ಲ ಗೌಣವಾಗಿದ್ದವು.
ಬದುಕಿಗೆ ಅವು ಅನಿವಾರ್ಯ ಎಂದರಿವಾದದ್ದು
ಪ್ರೇಮದ ಕಾವು ಆರಿದಾಗಲೇ.
ಒಂದು ಸಿಹಿ ಮುತ್ತಿಗೆ ಮುನಿಸು ದೂರ ಮಾಡುವ
ಹುಕಿ ಇತ್ತಲ್ಲವೇ..
ಈಗ ಮುನಿಸುಗಳು ದ್ವೇಷಕ್ಕೆ ತಿರುಗುತ್ತಿರುವದು
ವಿಷಾದವೆ.
ನಮ್ಮ ಪ್ರೇಮದ ಕಾವಿಗೆ ಜಗಳಕ್ಕೂ ಝಳ ಬಡಿಯುತಿತ್ತು.
ಈಗ ಜಗಳವಿಲ್ಲ ದಿನಗಳು ಉಂಟೇ..
ನಮ್ಮ ಪ್ರೇಮಕ್ಕಾಗ ಜಗತ್ತನೆ ಎದುರಿಸುವ ಶಕ್ತಿ ಇತ್ತು.
ನಮ್ಮಿಬ್ಬರ ಹಠದಲ್ಲಿ ಪ್ರೇಮಕ್ಕೆಲ್ಲಿದೆ ಈಗ ಶಕ್ತಿ.
ಪ್ರೀತಿ ಬದಲಾಗುವದೋ..ಪ್ರೀತಿಸುವವರೋ..
ಪ್ರೀತಿಗೆ ಆಯಸ್ಸು ಕಡಿಮೆಯೇ..!
ಇಲ್ಲದಿದ್ದರೆ ಪ್ರೀತಿ ಏಕೆ ಬತ್ತಬೇಕು , ಪ್ರೀತಿಸುವರೇಕೆ ದೂರಾಗಬೇಕು.
ಪ್ರೀತಿಗೆ ಸದಾ ಹೊಸತನದ ತುಡಿತ
ಆಕರ್ಷಣೆಯ ಸೆಳೆತ.
ಪ್ರೀತಿಯ ಚಿಗುರು ಬತ್ತುವದು ಬಂಧನಕ್ಕೊಳಪಟ್ಟಾಗ.
ಪ್ರೀತಿ ಬಂಡಾಯ ಸಾರುವದು
ಹಕ್ಕು ಚಲಾಯಿಸಲು ಪ್ರಯತ್ನಿಸಿದಾಗ.
ಪ್ರೀತಿ ಬಿಕರಿಯಾಗುವದು
ವ್ಯವಹಾರಕ್ಕೊಳಪಟ್ಟಾಗ.
ಪ್ರೀತಿಗೆ ಬಂಧನದ ಅಗತ್ಯ ವಿದೆಯೇ..
ನೀವೇದಿಸದೆ ಪ್ರೇಮಿಸಲಾಗದೇ..!
ಕೊಟ್ಟು ಪಡೆಯಲೇಬೇಕೆ..
ಅಷ್ಟಕ್ಕೂ ಪ್ರೀತಿ ಎಂದರೇನು..!
ಹುಡುಕಾಟ ಸದಾ ಜಾರಿಯಲ್ಲಿದೆ.
ಜ್ಯೋತಿ , ಡಿ.ಬೊಮ್ಮಾ.