ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ವೈರುಧ್ಯವೋ? ಚೋದ್ಯವೋ?
ನಮ್ಮ ದೇಶದಿ ಕಳ್ಳರಿಗಾಗಿ ಮಾಡುವರು ಕಾನೂನು
ಆದರೆ ಹೇಗೋ ಆಗಿ ಬಿಡುವರು ಕಳ್ಳಕಾಕರು ಬಚಾವು
ಪರಿತಪಿಸುವವರು ಮಾತ್ರ ಅಕ್ಷರಶಃ ಅಮಾಯಾಕರು
ಏಕೆಂದರೆ ನಮ್ಮಲ್ಲಿ ಕಾನೂನು ಮಾಡುವವರೇ ಕಳ್ಳರು.!
ನಮ್ಮ ದೇಶದಿ ಬಡಬಗ್ಗರಿಗಾಗಿ ನೀಡುವರು ಪರಿಹಾರ
ಅದರಿಂದ ಏಕೋ ಆಗಿ ಬಿಡುವರು ಬಡವರೇ ವಂಚಿತರು
ಪರಿಹಾರದ ಲಾಭ ಪಡೆವವರು ಮಾತ್ರ ಬಲ್ಲಿದ ಧನಿಕರು
ಏಕೆಂದರೆ ನಮ್ಮಲ್ಲಿ ಯೋಜನೆ ಮಾಡುವವರೇ ಬಲ್ಲಿದರು.!
ನಮ್ಮ ದೇಶದಿ ಮಾಡುವರು ಕಾರ್ಮಿಕರಿಗಾಗಿ ಹೋರಾಟ
ಆದರೆ ಕಾರ್ಮಿಕರ ಬೇಡಿಕೆಗಳೇ ಆಗದು ಎಂದಿಗು ಈಡೇರಿಕೆ
ಮಾಲೀಕರ ಸೌಖ್ಯವನೇ ಮುಖ್ಯವಾಗಿ ಕಾಪಾಡಲಾಗುವುದು
ಕಾರಣ ಕಾರ್ಮಿಕಮುಖಂಡರೇ ಮಾಲೀಕರ ಸ್ವತ್ತಾಗಿರುವುದು.!
ನಮ್ಮ ದೇಶದಿ ದೇವರನು ನಂಬಿ ನಡೆಯುವರು ಗುಡಿಗೆ
ಆದರೂ ನಂಬಿದವರ ಕೂಗು ಕೇಳಿಸದು ಎಂದು ದೇವರಿಗೆ
ನಂಬದವರ ಬದುಕು ನಿತ್ಯ ನಂದನವಾಗಿಯೇ ಇರುವುದು
ಏಕೆಂದರೆ ನಮ್ಮಲ್ಲಿ ದೇವರನು ಕಲ್ಲಿನಿಂದಲೇ ಕೆತ್ತಿರುವುದು.!
ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ
ಏಕೆಂದರೆ ಜಾತಿವಾದಿಗಳೇ ಏರಿ ಕುಳಿತಿರುವರು ಗದ್ದುಗೆ.!
ನಮ್ಮ ದೇಶದಲ್ಲಿ ನೀಡುವರು ಮತವನ್ನು ದಾನವೆಂದು
ಆದರೇಕೋ ಆಗಿ ಬಿಡುವರು ದಾನ ಮಾಡಿದವರೇ ದೀನರು
ದಾನ ಪಡೆದವರ ದಬ್ಬಾಳಿಕೆ ದರ್ಬಾರಿಗೆ ಮೂಕವಾಗುವರು
ಏಕೆಂದರೆ ನಮ್ಮಲ್ಲಿ ಮತ ಮಾರಿಕೊಳ್ಳುವವರೆ ಮತದಾರರು.!
ಎ.ಎನ್.ರಮೇಶ್.ಗುಬ್ಬಿ.
ನಮ್ಮ ದೇಶದ ಸ್ಥಿತಿಗೆ ಕನ್ನಡಿ ನಿಮ್ಮ ಕವನ.