ಕಾವ್ಯಸಂಗಾತಿ
ನಿಂಗಮ್ಮ ಭಾವಿಕಟ್ಟಿ ಹುನಗುಂದ
‘ನಲುಮೆ’
ಮನೆ ಬೆಳಗಿಸಬಂದು ಮನದಲಿಡಿ ಇರಿಸಿದಿರಲ್ಲ
ಮನಕೆ ಬೆಳಕಾಗದಿರಲ್ಲ ಏನಂತಾರಿದಕೆ?
ಮಕ್ಕಳಾದರೂ ಕೂಡ ಜಗಳವಾಡುತ್ತೀವಲ್ಲ
ಮರೆತು ಬಾಳುತ್ತೀವಲ್ಲ ಏನಂತಾರಿದಕೆ?
ಮೌನವೇ ಸಮ್ಮತಿ ಮುಗುಳ್ನಗೆ ಮೆಚ್ಚುಗೆ
ಚಿನ್ನದ ಆಸೆಯೇ ಇಲ್ಲ ಏನಂತಾರಿದಕೆ?
ಮಳೆ ಚಳಿ ಬಿಸಿಲಲೂ ಹಿತ ನಿನ್ನ ನೆನಪು
ನೆನಪಿನೊಡೆಯನೇ ಹೇಳು ಏನಂತಾರಿದಕೆ?
ನಿನ್ನ ತಪ್ಪುಗಳನ್ನು ನಾನೇ ಒಪ್ಪಿಕೊಳ್ಳುತ್ತೀನಲ್ಲ
ಗೊತ್ತಿದ್ದು ಗೊತ್ತಿರದಂತಿರುತ್ತೀರಲ್ಲ ಏನಂತಾರಿದಕೆ?
ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?
ನಿಮ್ಮೊಲುಮೆಯಾಳದಲಿ ಅಮ್ಮ ತಮ್ಮರ ಮರೆತೆ
ತವರಿನ ಆಸೆಯೇ ಇಲ್ಲ ಏನಂತಾರಿದಕೆ ?
ನೋವ ಮರೆತು ನಿದ್ದೆ ಬಿಟ್ಟು ನಮಗಾಗಿರುತ್ತೀರಲ್ಲ ಸವೆಯುತ್ತೀರಲ್ಲ ಹೇಳು ಏನಂತಾರಿದಕೆ ?
ಕೋಪವಿದ್ದರೂ ಕೊಂಚ ಕರುಣೆ ತೂಕವೇ ಹೆಚ್ಚು
ಅದಕ್ಕೆ ಮೆಚ್ಚಿದೆ ನಾ ನಿಮ್ಮ ಏನಂತಾರಿದಕೆ ?
ಸುಳ್ಳಲ್ಲ ಕೈ ಮುಗಿದಾಗೊಮ್ಮೆ ಮನಸು ಹಾರೈಸುತಿದೆ
ಸುಖವಾಗಿರಲಿ ಎಂದು ಏನಂತಾರಿದಕೆ?
ನಲುಮೆ ಎಂದರಾದೀತೆ?
ನಿಂಗಮ್ಮ ಭಾವಿಕಟ್ಟಿ ಹುನಗುಂದ