ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಅವನು ತನ್ನೆದೆಯ ತಿಜೋರಿಯಲ್ಲಿ
ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

ಅವನು ತಾಯಿಯ ಮಡಿಲಿಗೂ
ಮಿಗಿಲಾಗಿ ತನ್ನ ರಟ್ಟೆಯಲಿ ನನ್ನ
ಬಿಗಿದಪ್ಪಿಕೊಂಡು ಪ್ರೀತಿಯ ಕುಡಿಗೆ
ರಕ್ಷಾ ಕವಚದಂತೆ ಕಾಪಾಡುತ್ತಿದ್ದವನು

ಬೆಚ್ಚನೆಯ ಬೆವರಿನಲಿ ಹರಕು
ಚಪ್ಪಲಿಯಲಿ ಭೂಮಿಗೆ ತಂಪುಣಿಸುತ್ತಿದ್ದರು ನನ್ನ ಕೋಮಲ
ಪಾದಗಳಿಗೆ ಬಿಸಿಕಾವಿನಿಂದ ರಕ್ಷಿಸಿದವನು

ಜೀವನದ ಉದ್ದಗಲಕೂ ಅಪ್ಪ
ದೂರದ ಬೆಳ್ಳಿ ಚುಕ್ಕಿಯಂತೆ ಕಾಣುತ್ತಿದ್ದವನು ತುದಿ ಕಾಣದಷ್ಟು ಎತ್ತರದವನು ಪ್ರೀತಿ ,ಆತ್ಮಬಲ ,ಧೈರ್ಯ ,ಸಾಹಸ ರೀತಿಯವನದು

ದೂರದ ಊರಿನತ್ತ ಪ್ರಯಾಣಿಸುತ್ತಿದ್ದ ನನ್ನಪ್ಪ ನಿತ್ಯವೂ
ದುಡಿಯುವ ಕೂಲಿಕಾರನಾಗಿದ್ದ
ನಡೆಯುತ್ತಾ ನಡೆಯುತ್ತಾ ಹೊರಟ ಅವನ ಬಿಸಿ ಉಸಿರು ಜೋರಾಗುತ್ತಿತ್ತು.

ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು
ಸುರಕ್ಷಿಸಿದೆ ಎಂದು ನಿರಾಳತೆಯ ನಿಟ್ಟುಸಿರು ಬಿಟ್ಟವ

ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ
ಉಸಿರು ತಂಪಾಗೇ ಇತ್ತು. ಬಿಸಿ ಉಸಿರಿನ ಅಪ್ಪುಗೆ ನನಗೆ ಸಿಗಲೇ ಇಲ್ಲ ಕಾರಣ ಅಪ್ಪ ನನ್ನ ಬಿಟ್ಟು ಬಹುದೂರ ಹೋದನಲ್ಲ ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿಗೈದನಲ್ಲ
ಅಪ್ಪ ಮತ್ತೆ ದೂರದ ಊರಿಗೆ ಒಡೆಯನಾದನಲ್ಲ .


Leave a Reply

Back To Top