ಕಾವ್ಯ ಸಂಗಾತಿ
ಭಾಗ್ಯ.ಎಂ.ವಿ.
ಗಜಲ್
ಎನ್ನೆದೆಯ ಪಿಸುಮಾತನೊಮ್ಮೆ ಆಲಿಸಬೇಕಿತ್ತು ನೀ ಮುನಿಯುವ ಮುನ್ನ
ಎನ್ನ ಕಣ್ಣ ಕೊಳದೊಳಗೊಮ್ಮೆ ಇಣುಕಬೇಕಿತ್ತು ನೀ ಮುನಿಯುವ ಮುನ್ನ
ನಿನ್ನ ಗೈರು ಹಾಜರಿಯಲ್ಲಿ ನಿತ್ಯ ನೋವಿನೂಟ ಬಡಿಸಿದ್ದೆ ಈ ಹೃದಯಕ್ಕೆ!
ಕಂಬನಿ ಗೀಚಿದ ಕಥೆಯನೊಮ್ಮೆ ಪಠಿಸಬೇಕಿತ್ತು ನೀ ಮುನಿಯುವ ಮುನ್ನ
ಮುಳ್ಳುಗಳ ನಡುವೆಯೂ ಅರಳಿ ನಗುವ ಕೆಂಗುಲಾಬಿಯಂತೆ ಈ ಪ್ರೀತಿ!
ನಗೆ ಹಿಂದಿನ ನೋವನೊಮ್ಮೆ ಅರಿಯಬೇಕಿತ್ತು ನೀ ಮುನಿಯುವ ಮುನ್ನ
ನಿನ್ನ ನೆನಪುಗಳ ಮಾಲೆ ಧರಿಸಿ ನಡೆವ ನಾನು ಒಂಟಿಯಲ್ಲ ಗೆಳೆಯ!
ಗೆಜ್ಜೆ ಕಟ್ಟಿದ ಕವಿತೆಯನೊಮ್ಮೆ ಗುನುಗಬೇಕಿತ್ತು ನೀ ಮುನಿಯುವ ಮುನ್ನ
ಅಧರದಂಚಿನ ಸಿಹಿ ಸಹಿಗಳ ತೋರಣವ ಕಟ್ಟಿದ್ದೆ ನಿಮಗಾಗಿ!
ಕಹಿ ಕಾರುವ ಚಿಂತೆಯನೊಮ್ಮೆ ದಹಿಸಬೇಕಿತ್ತು ನೀ ಮುನಿಯುವ ಮುನ್ನ
ಭಾಗ್ಯ.ಎಂ.ವಿ.
ತುಂಬಾ ಚೆನ್ನಾಗಿ ಮೂಡಿಬಂದಿದೆ
❤️❤️