ಲೇಖನ ಸಂಗಾತಿ
“ದೂರ ತೀರದ ಹಕ್ಕಿ ಹಾಡು ”
ವಾಣಿ ಭಂಡಾರಿ
ತೀರಗಳೇನೊ ದೂರ ದೂರವೇ ಆದರೆ ಪ್ರೇಮಕ್ಕೆ ತೀರದ ಕಲ್ಪನೆಯಾಗಲಿ ಅಳತೆಯ ಮಾಪನವಾಗಲಿ ಅಥವಾ ವಯಸ್ಸು ಅಂತಸ್ತು ಕಾಲ ಸ್ಥಳ ಮಿತಿ ಇವುಗಳ ಹಂಗೆ ಇರದ ದಿವ್ಯ ಪ್ರಭೆಯ ಅನೂಭೂತಿಯೇ ಪ್ರೀತಿ, ಮಾತಿಗೆ, ನೋಟಕ್ಕೆ,ಸಿಗದೆ ಪರಿಶುದ್ಧವಾಗಿ ಹರಿದು ಸಪ್ರೇಮದೊಂದಿಗೆ ಸಮುದ್ರ ಸೇರುವ ಭಾವಾಲಾಪವೇ ಪ್ರೇಮ.ಇಂತಹ ನಿರ್ಮಲ ಪ್ರೇಮ ಭಾವಕ್ಕೆ ಮುನ್ನುಡಿ ಬರೆಯುತ್ತೇವೆಂದು ನಮಗಾದರೂ ತಿಳಿದಿತ್ತೆ ಹುಡುಗ!.ನಾನೊಂದು ತೀರ,ನೀನೊಂದು ತೀರದಲ್ಲೇ ಇದ್ದ ನಮಗೆ ಪರಿಚಯವೇ ಇರದ ಆ ಸಮಯದಲ್ಲಿ ಕೇವಲ ಕಲ್ಪನೆಯ ಕಾವ್ಯ ಕನ್ನಿಕೆಯಾಗಿಯೇ ನಿನ್ನೆದೆಯ ಪುಟದಲ್ಲಿ ಚಿತ್ತಾರವನ್ನು ಬರೆದು ಸುಗಂಧದ ಘಮವನ್ನು ತೆರೆಮರೆಯಲ್ಲಿ ಪಸರಿಸಿ ನಿಂತವಳು ನಾನು.ಆ ಕ್ಷಣ ತಂಗಾಳಿಯಲ್ಲಿ ನುಲಿದ ನಿನ್ನ ಪ್ರೇಮಭಾಷೆಗೆ ಮತ್ತೇನೆಂದೂ,, ಹೆಸರಿಸಲಾಗದೆ ಮನವು ನಿನ್ನೊಂದಿಗೆ ಆತುಕೊಂಡಿದ್ದು ಈಗಲೂ ಅಚ್ಚರಿ ಮೂಡಿಸುವ ಸೋಜಿಗ ಗೆಳೆಯ. ಬಹುಶಃ ಆ ವಿಧಿಯೆ ನಮ್ಮಿಬ್ಬರನ್ನ ಇಷ್ಟು ಅನ್ಯೋನ್ಯ ರೀತಿಯಲ್ಲಿ ಸಂಧಿಸಿ ಬಿಟ್ಟಿತು ಅನಿಸುತ್ತದೆ. ಕೇದಿಗೆಯ ಘಮದಂತೆ,,ದೇವಲೋಕದ ಪಾರಿಜಾತದಂತೆ,ಪಾವಿತ್ರ್ಯಗೆ ಮತ್ತೊಂದು ಹೆಸರೆ ನೀನೆಂಬಂತೆ,,, ನನ್ನನ್ನು ಪೋಷಿಸುವ ನಿನ್ನ ಆ ಶುದ್ದ ಸಲೀಲ ಅಂತರಂಗದಲ್ಲಿ ನಾನೊಂದು ದೇವತೆ ಅಲ್ಲಿ ನಿತ್ಯ ಪೂಜೆಗೈಯ್ಯುತ್ತಿರುವೆ ಎಂದಾಗ ಯಾವ ಹೆಣ್ಣಿಗೆ ತಾನೆ ಗೌರವಾಧರ ಮೂಡದಿರದು.ತನ್ನ ಜೀವನದ ಸಾರ್ಥಕ್ಯ ಭಾವ ತನ್ನ ಬದುಕಿನ ಸಾರ್ಥಕತೆಗೆ ಒಲವು ಕೂಡ ಒಂದು ಸೇತುವೆಯಂತೆ ಕೊಂಡಿ ಬೆಸೆಯಬಹುದೆಂಬ ಕಲ್ಪನೆ ಸಹ ಇರದ ಹುಚ್ಚು ಹುಡುಗಿ ನಾನು.
ನನ್ನ ಹುಚ್ಚುತನದ ತುಂಟಾಟ ಪೆದ್ದು ಪೆದ್ದಾದ ಮಾತು ಪ್ರಶ್ನೆ,, ಸದಾ ಗೋಳು ಹೋಯ್ದುಕೊಳ್ಳುವ ಕೀಟಲೆ ಇವೆಲ್ಲ ನೀ ಹೇಗೆ ಸಹಿಸಿಕೊಂಡೆ ಎನ್ನುವುದಕ್ಕಿಂತ,, ನೀನೇ ನಾನಾಗಿ,ನಾನೇ ನೀನಾಗಿ ಬೆರೆತ ಮೇಲೆ ನಮ್ಮಿಬ್ಬರ ನಡುವೆ ಎಂದೂ ಸಹ ಇಂತಹ ಕೀಟಲೆ ತುಂಟಾಟಗಳಿಗೆ ರೇಜಿಗೆ ಬಂದಿದ್ದೆ ಇಲ್ಲ.ನಿನ್ನ ಮೌನದಲ್ಲೂ,ನಿನ್ನ ಮಾತಿನಲ್ಲೂ ಸದಾ ಭಾವದಲ್ಲಿ ಬೆರೆತ ಗಂಧವಾದ ಮೇಲೆ ಮುಂದಿನ ನಡೆ ನುಡಿಗೇ ತಕರಾರು ಏನಿರದಿದ್ದರೂ ಎಂದೂ ಹದ್ದು ಮೀರಿ ವರ್ತಿಸದ ನಮ್ಮಿಬ್ಬರ ಭಾವಗಂಗೆಗೆ ಇಬ್ಬರು ಅದೆಷ್ಟು ಪೂಜ್ಯನೀಯತೆಯನ್ನು ನೀಡಿ ಸಲಹುತ್ತಾ ಬಂದಿದ್ದೇವೆ ಅಲ್ಲವೇ.ತಾಳ ತಪ್ಪದ ನೀನು ಹದ ಮೀರದ ಲಯದಲಿ ನಾನು ಎಂಬಂತೆ ವರ್ತಿಸುವ ನಮಗೆ ಪ್ರೀತಿಯ ಆಳವಾದ ಭಾವದ ಅರಿವಿದೆ ಎಂಬುದನ್ನು ಬಹಳ ಹೆಮ್ಮೆಯಿಂದ ವ್ಯಕ್ತಪಡಿಸಬಲ್ಲೆ “ಎರಿಕ್ ಪ್ರಾಂ” ಅವರು ಪ್ರೀತಿಸುವುದೆಂದರೆ,,, ಎಂಬುದಕ್ಕೆ ಬಹಳ ಅದ್ಬುತ ಮಾತನ್ನು ಉಲ್ಲೇಖಿಸುತ್ತಾರೆ. ” ಪ್ರೀತಿಯೆಂಬುದು ತೊಡಗುವಿಕೆ; ನಿಷ್ಕ್ರಿಯತೆಯಲ್ಲ,ಪ್ರೀತಿಯಲ್ಲಿ ನೇರವಾಗಿ ನಿಲ್ಲಬೇಕೆ ಹೊರತು, ಕುಸಿದುಬೀಳಲಾಗದು,ಪ್ರೀತಿ ಒಂದು ಕ್ರಿಯಾತ್ಮಕ ಸ್ಥಿತಿ,, ಪ್ರೀತಿ ಕೊಡುವುದೆ ಹೊರತು ತೆಗೆದುಕೊಳ್ಳುವುದಲ್ಲ”.ಎನ್ನುತ್ತಾರೆ.ಇಲ್ಲಿ ಕೊಡುವುದು ಎಂದಾಕ್ಷಣ ಅದು ಕೇವಲ ಪ್ರೇಮಿಗಳ ಪ್ರೇಮಕ್ಕಷ್ಟೆ ಸಿಮೀತವಾಗಿರದೆ ಎಲ್ಲರ ಪ್ರೀತಿಗೂ ಅನ್ವಯಿಸುವಂತಹ ಪ್ರೀತಿ.”ಪ್ರೀತಿ ಎಂದರೆ ನಾವು ಪ್ರೀತಿಸುವ ವ್ಯಕ್ತಿ ವಸ್ತುವಿನ ಜೀವನದಲ್ಲಿ ಅದರ ಬೆಳವಣಿಗೆಯಲ್ಲಿ ತುಂಬು ಆಸಕ್ತಿಯನ್ನೂ ಗಮನವನ್ನೂ ಹೊಂದಿರುವುದೆಂದಾಗುತ್ತದೆ.ಈ ಆಸಕ್ತಿ ಎಲ್ಲಿರುವುದಿಲ್ಲವೋ ಅಲ್ಲಿ ಪ್ರೀತಿ ಇರುವುದಿಲ್ಲ.” ಎಂಬ ಮಾತನ್ನು ಅರ್ಥೈಸಿಕೊಂಡ ನಮಗೆ ಪ್ರೀತಿ ಸಾಮಿಪ್ಯ ಆಗಾಧತೆಯನ್ನು ಅಮರತ್ವವನ್ನೂ ಔದಾರ್ಯವನ್ನು ಮಾನವೀಯ ಅಂತಃಕರಣದ ಮಿಡಿತವನ್ನು ಹೃದಯದಲ್ಲಿ ಇರಿಸಿಕೊಂಡು ದ್ವೇಷಿಸಲು ಸಮಯವೇ ಇರದಷ್ಟು ಪ್ರೀತಿಸಿಬಿಟ್ಟಿದ್ದು ಬಹುಶಃ ಈ ಪ್ರಕೃತಿ ನಮಗೆ ನೀಡಿದ ವರ ಎನ್ನಬಹುದು ಅಲ್ಲವೆ ಗೆಳೆಯ!.
ಪ್ರೀತಿ ಎಂಬುದೊಂದು ಸುಂದರ ಅನುಭೂತಿ ಎಂಬುದಕ್ಕೆ ನಮಗಿಂತ ಅರ್ಥಪೂರ್ಣ ನಿದರ್ಶನ ನೀಡಲು ಸಾಧ್ಯವಾಗುವುದಾದರೂ ಹೇಗೆ? ಪ್ರೀತಿ ಕೇವಲ ದೇಹಕ್ಕೊ ಮನಸಿಗೊ ಸಂಬಂಧಿಸಿದಷ್ಟೆ ಅಲ್ಲ,,ನಮ್ಮ ಜೀವನದ ಅವಿಭಾಜ್ಯ ಅಂಗವೆ ಪ್ರೀತಿ. ಪ್ರೀತಿ ಎಂಬುದು ಒಂದು ಧ್ಯಾನ,, ಆ ಧ್ಯಾನದಿಂದಲೇ ತಾನೆ ನಾವಿಷ್ಟು ದೂರವಿದ್ದರೂ ಸಹ ಹತ್ತಿರವಿದ್ದಷ್ಟೆ ಭಾವಪೂರ್ಣ ಬದುಕನ್ನು ಜೀವಿಸಲು ಸಾಧ್ಯವಾಗಿದ್ದು,ದೂರ ಅಂತರವಿದ್ದರೂ ಕೂಡ ಸಾಮಿಪ್ಯದ ಸೌಖ್ಯವನ್ನುಣ್ಣಲು ಸಾಧ್ಯವಾಗಿದ್ದು,,
ಹಾಗಂತ ದೂರ ಇದ್ದಾಗ ಮನಸು ಭಾರವೆನಿಸಿದ್ದು ಸುಳ್ಳಲ್ಲ ಹುಡುಗ,ಯಾಕೆಂದರೆ ನಾವು ಕೂಡ ಮನುಷ್ಯರೇ ತಾನೆ,,ಅದೇನೆ ಇರಲಿ ದೈವಿಕತೆಯ ಪ್ರೇಮಕ್ಕೆ ಹಲವು ಮುಖಗಳಂತೆ,ಅಂತಹ ದೇದೀಪ್ಯಮಾನದಂತೆ ಕಂಗೊಳಿಸುವ ದೇವರ ಗುಡಿಯ ಕಾಂತಿಯುತ ದೀಪದಂತೆ ನಮ್ಮಿಬ್ಬರ ಪ್ರೀತಿ ಎಂದೂ ಅಮಂಗಳಕರವಾಗಿದ್ದಿಲ್ಲ ಕಳಂಕವಾಗಿದ್ದಿಲ್ಲ ಸೂತಕ ಬಡಿದರೂ ಮತ್ತೆ ಶುದ್ದೋದಕ ಸಿಂಪಡಿಸಿ ಬೇಂದ್ರೆಯವರು ಹೇಳುವಂತೆ,,
“ತಾಳ್ಯಾಕ ತಂತ್ಯಾಕ,ರಾಗದ ಚಿಂತ್ಯಾಕ ಹೆಜ್ಯಾಕ ಗೆಜ್ಯಾಕ ಕುಣಿಯೋಣ ಬಾರ” ಎಂಬ ಕಾವ್ಯದ ಸೊಗಸಿನಂತೆ ಮತ್ತೆ ಸೊಗವುಂಡು ಮೊಗದಲ್ಲಿ ನಗೆ ಹೊತ್ತು ಉಲ್ಲಾಸ ಬೀರಿದವರು.
ನಡೆಯುವವ ಎಡುವುತ್ತಾನೆ ಅನ್ನುವಂತೆ ಈ ಜೀವನವೆಂಬ ಪಯಣದಲ್ಲಿ ನೋವು ನಲಿವು ಸಹಜವೆಂಬಂತೆ ಆತುಕೊಂಡು ಕಲ್ಲುಮುಳ್ಳು ಎಡತಾಕಿದರೂ ಸಾವರಿಸಿಕೊಂಡು
“ನಾ ನಿನಗೆ,ನೀನೆನಗೆ ಜೇನಾಗುವ,
ರಸದೇವ ಗಂಗೆಯಲ್ಲಿ ಮೀನಾಗುವ,
ಹೂವಾಗುವ,ಹಣ್ಣಾಗುವ
ಪ್ರತಿರೂಪಿ ಭಗವತಿಗೆ ಮುಡಿಪಾಗುವ”!!
ಎನ್ನುವ ಕುವೆಂಪು ಅವರ ಕವಿವಾಣಿ ಭಾವೋಲ್ಲಾಸದ ನಾವಿನ್ಯತೆ ಇಂದಿಗೂ ಎಂದಿಗೂ ಸಹ ಪ್ರೇಮಮಯ ಜಗತ್ತನ್ನು ಬರಸೆಳೆದು ಅಪ್ಪಿದ ನಮ್ಮಂತವರಿಗೆ ಸದಾ ಜೇನಾಗಿ ಹೂವಾಗಿ ಹಣ್ಣಾಗಿ ಬಿಡುವ ಹಂಬಲಿಕೆ,
ಕೊನೆಗೊಮ್ಮೆ ದೈವತ್ವಕ್ಕೇರಿಸಿ ಪೂಜಿಸುವ ಸಂಭ್ರಮವೇ ಪ್ರೀತಿ.ನೀನು ಆಗಾಗ ಹೇಳುತ್ತಿದ್ದೆ ನೆನಪಿದ್ಯಾ ಗೆಳ್ಯ,, ನನ್ನ ಮುಗ್ದ ಹುಚ್ಚು ಪ್ರಶ್ನೆಗಳಿಗೆಲ್ಲ ನಿನ್ನ ಹತ್ತಿರವೇ ಉತ್ತರವೆಂಬ ಸಮಾಧಾನದ ಜೇನು ದೊರಕಿದ್ದು.ಪ್ರೀತಿ ಕೊನೆಗೊಮ್ಮೆ ದೈವತ್ವಕ್ಕೇರುವುದು ಕಣೆ ಪೆದ್ದು ತಿಳ್ಳೊ ಅಂತ ನನ್ನ ತಿವಿದಾಗ ನಾ ಮುದ್ದಾಗಿ ಕಣ್ಣರಳಿಸಿ ಸಂಭಾಳಿಸಿಕೊಂಡೇ,, ಆಕಾಶದಲ್ಲಿ ಕಾಮನಬಿಲ್ಲು ಕಟ್ಟಿ ಅಲ್ಲೆ ಮನೆ ಮಾಡಿ ನಲಿದಿದ್ದು ಸುಳ್ಳಲ್ಲ ಮಾರಾಯ.
ನಮ್ಮದು ಏಳು ಜನ್ಮದ ಪ್ರೇಮಬಂಧ, ನೀ ಪಾರ್ವತಿ, ನಾ ಶಿವ, ನೀ ರಾಧೆ, ನಾ ಕೃಷ್ಣ ಹೀಗೆ ಏನೇನೋ ಬಡಬಡಿಸಿದರೂ ನನಗೆ ಅರಿವಾಗಿದ್ದು ಮಾತ್ರ ನೀ ನನ್ನ ಅಂತರಂಗದ ನಿನಾದ,ನನ್ನ ಜೀವನಾಡಿ, ನಾ ನಿನ್ನ ಭಾವಾಂತರಂಗದಲಿ ಮೀಯುವ ಸಖಿ ದೇವತೆಯೆಂದರಿತ ಮೇಲೆ ಒಲವ ಬದುಕು ಎಂದೂ ಹಳಿಸಲಿಲ್ಲ ಸದಾ ಸ್ವಾದಭರಿತ ಮೃಷ್ಟಾನ್ನವೆಂಬಂತೆ ನಿತ್ಯನೂತನವಾಯ್ತು ನೋಡು.
“ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳುಬಂದಿ ಕೆನ್ನೆ ತುಂಬಾ ಮುತ್ತು”. ಬೇಂದ್ರೆಯವರು ಹೇಳುವಂತೆ,,ನೀ ನೀಡಿದ್ದು,ನಾ ತೆಗೆದುಕೊಂಡಿದ್ದು,ನಾ ಕೊಟ್ಟಿದ್ದು, ನೀ ತೆಗೆದುಕೊಂಡಿದ್ದು ಈ ಪ್ರೇಮಕಷ್ಟೆ ಗೊತ್ತು ಜಗದ ಗೊಡವೆ ಬೇಡ ಈ ನಿರ್ಮಲ ಬಾಂಧವ್ಯಕ್ಕೆ.ಪ್ರೇಮ ಜಲದಲ್ಲಿ ಮಿಂದ ನಮಗೆ ಜಗತ್ತು ಸುಂದರ ಲೋಕ.ಈ ಪ್ರೇಮಲೋಕಕ್ಕೆ ನಾನೆ ಒಡತಿ ನೀನೆ ಒಡೆಯ,ನಿನ್ನ ಕಂಗಳ ಕಾಂತಿಗೆ,ಹೃದಯದ ಮಾತಿಗೆ ಸೋತು ಮೌನವಾದ ಒಲುಮೆ ಹಕ್ಕಿ ನಾನು.ನನ್ನ ಭಾವಾಂಕುರದಲ್ಲಿ ಅರಳಿ ನೆಲೆ ನಿಂತ ದೇವದುಂದುಬಿ ನೀನು. ನನ್ನ ಪ್ರೇಮಕಾವ್ಯಕೆ ಭಾಷ್ಯಕಾರ,ಅಂತರಂಗದ ಗುಡಿಯಲ್ಲಿ ನಿತ್ಯ ಪೂಜಿಸಿಕೊಳ್ಳುವ ಪ್ರೀತಿದೈವ,ಮೋಡಿಯಲ್ಲೇ ಮನಸೆಳೆದ ಮೌನಮೂರ್ತಿ,ಪ್ರೀತಿಯನ್ನು ಆರಾಧಿಸಲು ಪೂಜಿಸಲು ಧ್ಯಾನಿಸಲು ಎಷ್ಟು ದೂರವಿದ್ದರೇನು ಹತ್ತಿರವಿದ್ದರೇನು ಪ್ರೀತಿ ಭಾವಕ್ಕೆಲ್ಲಿದೆ ಎಲ್ಲೆ ಅಂತರದ ಮೈಲಿಗೆ, ನೀನು ಎಂದೆಂದಿಗೂ ನನ್ನವನೇ ನನ್ನ ಹೃದಯದ ಹಮ್ಮಿರ ಆತ್ಮಸಂಗಾತಿ ನೀ.
————————–
ವಾಣಿ ಭಂಡಾರಿ
ಸೂಪರ್
ವಾವ್…….. ನಿಷ್ಕಲ್ಮಶ, ನಿಷ್ಕಳಂಕ ಪ್ರೀತಿಯಲ್ಲಿ ಮಿಂದೆದ್ದ ಅನುಭವ….ವಾಣಿ… Your writing is simply superb….no other words…
Congratulations dear .
Super