ನಾದಸ್ವರಕೆ ಸೋತ ಮನವು
ಬೇಯುತಿದೆ ದಿನ ದಿನ
ಕೊಳಲಿನುಲಿಗೆ ನಲಿದ ತನುವು
ಅಲೆಯುತಿದೆ ಬನ ಬನ

ಗೋವ್ಗಳಿಲ್ಲ ಗೋಪರಿಲ್ಲ
ಬಿಡದೆ ಕಾಡ್ವ ಕೋತಿ ಇಲ್ಲ
ಹಚ್ಚ ಹಸಿರು ತಳಿರು ಇಲ್ಲ
ಬೆಚ್ಚನೆಯ ಒಡನಾಟವಿಲ್ಲ

ಕದ್ದು ನೋಡ್ವ ಕಣ್ಗಳಿಲ್ಲ
ಚಾಡಿ ಹೇಳ್ವ ಬಾಯ್ಗಳಿಲ್ಲ
ಬೆಂದ ಒಡಲು ನೊಂದ ಮಡಿಲು
ಕಡಲಾದರು ಮುತ್ತೆ ಇಲ್ಲ

ಸೊರಗಿದೆಮುನೆ ತೆವಳಿ ಸಾಗಿ
ಶರಧಿ ಸೇರದಳುತಿದೆ
ಭಾವ ತಂತಿ ಹರಿದ ವೀಣೆ
ನನ್ನ ಬಳಿಯೆ ಕುಳಿತಿದೆ

ನೀನು ಬರದೆ ಹೇಗೆ ಇರಲಿ
ಸಾಯುತಿರುವೆ ಕ್ಷಣ ಕ್ಷಣ
ಒಮ್ಮೆ ಬಂದು ವದನ ತೋರು
ನೀಗಿಬಿಡುವೆ ಮರುಕ್ಷಣ

ಜೀವವಿರದ ಕಾಯ ನನದು
ಸುಟ್ಟು ಬೂದಿಯಾಗಲಿ
ಹೊತ್ತು ತಿರುಗಿ ದಣಿದೆ ನಾನು
ಬಾನ ಚುಕ್ಕಿಯಾಗಲಿ


One thought on “

Leave a Reply

Back To Top