ಆ ನೆನಪುಗಳೆ ಬಿರು ಬೇಸಿಗೆಯ
ದಿನಗಳಲಿ ತಂಗಾಳಿ ಸೋಕಿದ ಹಾಗೆ
ಬರಡಾದ ಇಳೆಯ ಮೈಗೆ ಮೊದಲ
ಮಳೆಯ ಸ್ಪರ್ಶದ ಕಂಪಿನ ಹಾಗೆ

ನೀನಿರದ ತಾಣವೆ ಇಲ್ಲ
ಹೂವಿನೊಳು ಗಂಧದ ಹಾಗೆ
ಗೆಜ್ಜೆಯೊಳು ನಾದದ ಹಾಗೆ
ಎಲ್ಲೆಲ್ಲೂ ಎಲ್ಲರಲೂ ನೀನೆ ನೀನೆ!

ಎದೆಯ ಗೂಡೆಂಬ ಗುಬ್ಬಚ್ಚಿ ಗೂಡಲ್ಲಿ
ಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆ
ನೀ ಒತ್ತಿದ ಮುತ್ತಿನ ಮೊಹರು
ಅಂದು ಹಾರಲು ಕಲಿಸಿದ ಹಾಗೆ

ಹಾರುತ್ತ ಹಗುರಾದಂತೆ
ತೇಲುತ್ತಾ ಬಿಸಿಯಾದಂತೆ
ಬಾನಾಡಿ ಆಗಿದೆ ಬಲಿತ ಹಕ್ಕಿ
ನೀನಿತ್ತ ಮುತ್ತಿನ ಮೊಹರಿನೊಂದಿಗೆ!

ನನ್ನೊಳಗೆ ನೀ ನಿನ್ನೊಳಗೆ ನಾ
ಅರಿತು ಬೆರೆತಿರಲು ಜಗವೆ ಸುಂದರ
ಈ ಲೋಕವೆ ಪ್ರೇಮ ಮಂದಿರ
ಓ ಪ್ರೇಮವೆ ನೀ ಅಜರಾಮರ

ಓ ಪ್ರೇಮವೆ ನೀನೆಷ್ಟು ಮಧುರ
ಎಲ್ಲ ಬಗೆಯ ಗೊಡವೆ ಮೀರಿದ
ಜೀವಕ್ಕೆ ಉಸಿರಾದ ಭಾವಕ್ಕೆ ಜೇನಾದ
ನಿನ್ನಿಂದಲೇ ಲೋಕ ನಿತ್ಯ ಸತ್ಯ ಸುಂದರ


Leave a Reply

Back To Top