ಬೇಸರವನೇ ಅಪ್ಪಿಕೊಂಡಂತೆ
ವಿಶಾಲ ಹರಡಿದ ನೀಲ ಆಕಾಶ
ವಿಷಾದವನ್ನೇ ತೂರಿ
ಹಾಸಿದಂತೆ ಬಟಾ ಬಯಲು.
ಆ ಎರಡು ಕಡು ಮೌನದೊಳಗೆ
ಅತಿಮೌನಿಯಾಗಿ ಒಂಟಿ
ಕುಳಿತವಳ ಹೃದಯದೊಳಗೆ ಕೇಳುವುದು ಯಾವುದೋ ಧ್ವನಿ
ಅದು ಎಂದೋ ತಿರುಗಿ ನೋಡದೆ ಹೋದ ಅವನದೇ….
ತುಟಿಯಂಚ ಡೊಂಕು ನಗು
ಸ್ಪಷ್ಟವಾಗಿ ಹೇಳಿತ್ತು
ನಿನ್ನ ನೆನಪೆಂದರೆ ಸಾಕು
ನೋಡು ನನ್ನ ಮಾತುಗಳು
ಮೌನವಾಗಿ ಬಿಡುತ್ತವೆ
ಕಾಲದ ಬಿಸಿಲಿಗಾಗಲಿ
ಮಳೆಗಾಗಲೀ ನಿನ್ನ ನೆನಪಿನ
ಹೆಜ್ಜೆ ಗುರುತುಗಳು
ಮಾಸುವುದೇ ಇಲ್ಲ ಎಂದು
ನಿಟ್ಟುಸಿರು ಚೆಲ್ಲಿ ಕುಳಿತಳು

ಅವನು ಕಡು ಪ್ರೇಮಿ
ಎಂದುಕೊಂಡಿದ್ದಳು
ಹೃದಯವನ್ನೇ ಒಡೆದು
ಚೂರು ಚೂರು ಮಾಡಿದ
ಆದರೆ ಇವಳು ಆ ಒಡೆದ
ಹೃದಯದ ಎಲ್ಲ ಚೂರುಗಳಲ್ಲೂ
ಅವನನ್ನೇ ಕಂಡುಕೊಂಡಳು
ಲೋಕ ನಿಂದಿಸಿತು ಪ್ರೀತಿಯ ಹುಚ್ಚಿಗೆ
ಅವನು ಸರಿದ ಕಾಲದ ಹಾಗೆ
ತಿರುಗಿ ಬರುವವನಲ್ಲ ದೂರಾಗಿ ಹಾಯಾಗಿ ಉಳಿದ
ಇನ್ನು ಇವಳು ಕಡು ನೋವಿನಲ್ಲೂ
ಒಡೆದ ಹೃದಯದ
ಪ್ರತಿ ಚೂರುಗಳಲ್ಲಡಗಿದ ಅವನ
ಕಂಡು ಮನಸಿಗೆ ತಿಳಿಹೇಳುತ್ತಿದ್ದಳು
ಈ ಅದ್ಭುತ ನೋವೇ
ನಿಜವಾದ ಪ್ರೀತಿ ಕಣೆ ಹೆಣ್ಣೇ…..


Leave a Reply

Back To Top