ವ್ಯಾಲಂಟೈನ್ಸ್ ವಿಶೇಷ
ವೀಣಾ ಹೇಮಂತಗೌಡ ಪಾಟೀಲ್
ಪ್ರೀತಿಯ ಹಲವು ಮುಖಗಳು
ಪ್ರೀತಿ ಏಕೆ ಭೂಮಿ ಮೇಲಿದೆ?? ಎಂದ ತಕ್ಷಣ ಬರುವ ಮುಂದಿನ ಸಾಲು ಬೇರೆ ಎಲ್ಲೂ ಜಾಗವಿಲ್ಲದೆ!! ಎಂದು . ಚಲನ ಚಿತ್ರದ ಈ ಗೀತೆ ಖಂಡಿತವಾಗಿಯೂ ನಿಜ. ಏಕೆಂದರೆ ಭೂಮಿಯನ್ನು ಹೊರತುಪಡಿಸಿ ಬೇರೆಲ್ಲೂ ಜೀವ ಸಂಕುಲದ ಉಳಿವಿನ ಅವಶೇಷಗಳು ನಮಗೆ ಪತ್ತೆಯಾಗಿಲ್ಲ .ಚಂದ್ರ ಗ್ರಹ ಮಂಗಳ ಗ್ರಹಗಳಲ್ಲಿ ಜೀವಿಗಳು ಜೀವಿಸಲು ಬೇಕಾದ ಅವಶ್ಯಕತೆಗಳು ಇವೆ ಎಂಬುದೇನೋ ಪತ್ತೆಯಾಗಿದೆ ಆದರೆ ಯಾರಾದರೂ ಜೀವಿಸಿದ್ದರೆ ಎಂದರೆ ನಮಗೆ ಇನ್ನೂ ಅದರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ ..ಹಾಗಾಗಿ ಸದ್ಯಕ್ಕೆ ಪ್ರೀತಿ ಏಕೆ ಭೂಮಿ ಮೇಲಿದೆ ಎಂದು ಕೇಳಿದರೆ ಬೇರೆ ಎಲ್ಲೂ ಜಾಗವಿಲ್ಲದೆ ಎಂಬುದೇ ಸರಿ.
ಜಗದ ಸಾಮಾನ್ಯ ಜನರ ಪಾಲಿಗೆ ಪ್ರೀತಿ ಎನ್ನುವುದು ಮಾಯೆಯಾದರೆ , ತಾಯಂದಿರ ಪಾಲಿಗೆ ಪ್ರೀತಿ ಮಮತೆಯ ರೂಪ, ಪತಿ- ಪತ್ನಿಯರ ನಡುವಿನ ಪ್ರೀತಿಗೆ ಪ್ರೇಮ, ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ನಡುವಿನ ಪ್ರೀತಿ ಸಹೋದರ ವಾತ್ಸಲ್ಯ ಎಂದೂ , ಹಿರಿ ಕಿರಿಯರ ನಡುವಿನ ಪ್ರೀತಿಗೆ ವಾತ್ಸಲ್ಯ ಎಂದು ಹೆಸರು. ಕೆಲವೊಮ್ಮೆ ನಮ್ಮ ಪ್ರೀತಿ ಕರುಣೆಯಿಂದಲೂ ಸಾಧ್ಯವಾದರೆ ಇನ್ನೂ ಹಲವು ಬಾರಿ ನಮ್ಮ ಪ್ರೀತಿ ಭಕ್ತಿ ಯಾಗಿಯೂ ಮಾರ್ಪಾಡಾಗುತ್ತದೆ . ಇಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾನಂದ ಶೆಣೈಯವರ ಮಾತು ನೆನಪಾಗುತ್ತದೆ. ಜಗತ್ತಿನ ಎಲ್ಲ ರಾಷ್ಟ್ರಗಳು ದೇಶದ ಬಗೆಗಿನ ಪ್ರೀತಿಯನ್ನು ಹೊಂದಿರುವ ವ್ಯಕ್ತಿಯನ್ನು ದೇಶಪ್ರೇಮಿ ಎಂದು ಕರೆದರೆ ಕೇವಲ ನಮ್ಮ ಭವ್ಯ ಭಾರತ ದಲ್ಲಿ ಓರ್ವ ವ್ಯಕ್ತಿ ಹೊಂದಿರಬಹುದಾದ ದೇಶದ ಬಗೆಗಿನ ಅತ್ಯುನ್ನತ ಪರಾಕಾಷ್ಠೆಯ ಪ್ರೀತಿಯನ್ನು, ಅಭಿಮಾನವನ್ನು ದೇಶಭಕ್ತಿ ಎಂದು ಹೇಳುತ್ತಾರೆ . ಅಂದರೆ ದೇಶದ ಬಗೆಗಿನ ಪ್ರೀತಿ, ಅಭಿಮಾನ ಅತ್ಯಂತ ಗರಿಷ್ಠ ಮಟ್ಟದಲ್ಲಿ ಇದ್ದಾಗ ಮಾತ್ರ ಆ ವ್ಯಕ್ತಿ ದೇಶಭಕ್ತ ಎಂದೆನಿಸಿಕೊಳ್ಳಬಲ್ಲ .ಹಾಗೆ ದೇಶಕ್ಕಾಗಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಸಹಸ್ರಾರು ಸಂಖ್ಯೆಯ ದೇಶಭಕ್ತರ ಪ್ರೀತಿಯ ನಾಡು ನಮ್ಮದು. ಹಾಗಾದರೆ ಪ್ರೀತಿ ಎಂಬುದು ಕೇವಲ ಒಂದು ಆಯಾಮದಿಂದ ನೋಡುವ ವಿಷಯವಲ್ಲ.ಪ್ರೀತಿ ಎಂಬುದು ಕೇವಲ ಗಂಡು ಹೆಣ್ಣಿನ ಮಧ್ಯದ ಬಾಂಧವ್ಯ, ಹಾರ್ಮೋನುಗಳ ತುಡಿತ , ಹದಿಹರೆಯದ ಮಿಡಿತ ಎಂದು ನಾವು ತಿಳಿದರೆ ನಮ್ಮಷ್ಟು ಮೂರ್ಖರು ಬೇರಾರೂ ಇಲ್ಲ .ಪ್ರೀತಿ ದೈವಿಕ , ಪ್ರೀತಿ ಕಾಳಜಿಯನ್ನು , ಕರುಣೆಯನ್ನು ,ಮಮತೆಯನ್ನು, ವಾತ್ಸಲ್ಯವನ್ನು ಬೇಡುತ್ತದೆ. ತನ್ನ ಯಾವುದೇ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲದ ಹಸುಗೂಸಿಗೆ ಹೊಟ್ಟೆ ತುಂಬಿಸುವ ,ಮಲಮೂತ್ರಾದಿಗಳನ್ನು ತೊಳೆಯುವ, ಬಳಿಯುವ ಮಗುವನ್ನು ಸಿಂಗರಿಸಿ, ಮುದ್ದು ಮಾಡುವ, ಪೊರೆಯುವ ಪ್ರೀತಿ ತಾಯಿಯ ಮಮತೆ ವಾತ್ಸಲ್ಯದ ಪ್ರತೀಕ .ಅಲ್ಲಿ ತಾಯಿಯೇ ಆಗಬೇಕೆಂದಿಲ್ಲ ,ತಾಯಿ ಮನಸ್ಸಿನ ತಂದೆ, ಅಜ್ಜ, ಅಜ್ಜಿ, ಅತ್ತೆ, ಜೀವ ಜಗತ್ತಿನ ಯಾರಾದರೂ ಆಗಬಹುದು ಅದು ಪ್ರೀತಿ ಎಂದೆನಿಸಿಕೊಳ್ಳುತ್ತದೆ .ಆದರೂ ತಾಯಿಯ ಪ್ರೀತಿಯನ್ನು ಎಲ್ಲರೂ ಜಗತ್ತಿನ ಮಹಾನ್ ಪ್ರೀತಿ ಎಂದು ಹೇಳುತ್ತಾರೆ.ನಮ್ಮ ಹಿಂದಿನ ಹಿರಿಯರಂತೂ ತಾಯಿ ಮತ್ತು ಮಗುವಿನ ಮಧ್ಯದ ಪ್ರೀತಿಯನ್ನ ವಾತ್ಸಲ್ಯದ ಮಹಾಕಾವ್ಯ ಎಂದು ಕರೆದರು ಏಕೆ ಗೊತ್ತೆ ??? ತಾಯಿಯ ಪ್ರೀತಿಯಲ್ಲಿ ಸ್ವಾರ್ಥದ ಸುಳಿವಿಲ್ಲ ,ಅದು ನಿಸ್ವಾರ್ಥ,ನಿರ್ವ್ಯಾಜ್ಯ ಪ್ರೇಮ. ದಿನದ ಇಪ್ಪತ್ತನಾಲ್ಕು ಗಂಟೆಯನ್ನು ತನ್ನ ಮಗುವಿಗಾಗಿ ಮೀಸಲಿಡುವ ತಾಯಿ ಹಗಲು -ರಾತ್ರಿ , ತಿಂಗಳು- ವರ್ಷಗಟ್ಟಲೆ ಮಗುವಿನ ಆರೈಕೆ ಮಾಡಿದಾಗ ಮಾತ್ರ ಮಗು ಬೆಳೆಯುತ್ತದೆ .ಹೀಗೆ ಬೆಳೆಸುವಾಗ ಆಕೆ ಕೆಲವೊಮ್ಮೆ ಸಿಡಿಮಿಡಿಗುಟ್ಟಬಹುದು, ಜರ್ಜರಿತಳಾಗಬಹುದು, ಕೂಗಾಡಬಹುದು ಆದರೂ ತನ್ನ ಮಮತೆಯನ್ನ ಬಿಟ್ಟುಕೊಡಳು. ಆದ್ದರಿಂದಲೇ ಆ ದೇವಾಧಿದೇವ ಮಹಾದೇವನು ಹೆಣ್ಣನ್ನು ಮಾತೃ ಸ್ವರೂಪಿ, ಜಗದಂಬೆ ಜಗನ್ಮಾತೆ ಎಂದು ಕರೆದನು. ಇಡೀ ಜಗತ್ತನ್ನು ಪ್ರೀತಿಸುವಷ್ಟು ಮಮತೆಯ ಕಡಲನ್ನು ತನ್ನಲ್ಲಿಟ್ಟು ಪೊರೆಯುತ್ತಾಳೆ ತಾಯಿ . ಮಮತೆಯ ಮಹಾವಾರಿಧಿ ಆಕೆ .
ಇನ್ನು ತಂದೆ ಮಕ್ಕಳ ಪ್ರೀತಿ …ಕೆಲ ದಶಕಗಳ ಹಿಂದೆ ಕೂಡ ತಂದೆಮಕ್ಕಳ ಮಧ್ಯದಲ್ಲಿ ಅಷ್ಟೊಂದು ಹಾರ್ದಿಕವಾದ ಬಾಂಧವ್ಯ ಇರುತ್ತಿರಲಿಲ್ಲ ಕಾರಣವಿಷ್ಟೆ ಅಮ್ಮನ ರಕ್ಷೆ ಅಪ್ಪನ ಶಿಕ್ಷೆ ಎಂಬ ರೂಢಿಬದ್ಧ ನಿಯಮ .(ಬಹುಶಃ ಇಂದು ಅದು ತಿರುಗುಮುರುಗಾಗಿ ರಲೂಬಹುದು ).ಹಿಂದಿನ ಕಾಲದಲ್ಲಿ ಅಂದರೆ ಕೇವಲ ಐವತ್ತು-ಅರುವತ್ತು ವರ್ಷಗಳ ಹಿಂದೆ ತಿರುಗಿ ನೋಡಿದರೆ ಅಪ್ಪ ಮನೆಗೆ ಬಂದರೆ ಗಲಾಟೆ ಮಾಡುತ್ತಿದ್ದ ಎಲ್ಲಾ ಮಕ್ಕಳು ಗಪ್ ಚಿಪ್ . ಪುಸ್ತಕ ಹಿಡಿದು ಓದಲು ಕೂತಿರುವ ಮಕ್ಕಳು, ತನ್ನ ಪಾಡಿಗೆ ತಾನು ಮನೆಕೆಲಸ ಮಾಡುತ್ತಿರುವ ಅಮ್ಮ ಮತ್ತು ಮನೆಯ ಇನ್ನಿತರ ಸದಸ್ಯರು, ಸೂಜಿಬಿದ್ದರೂ ಶಬ್ದ ಕೇಳಿಸೀತು ಎನ್ನುವಂತಹ ಮನೆಯ ವಾತಾವರಣ ಆ ಮನೆಯಲ್ಲಿ ತಂದೆಯ ಉಪಸ್ಥಿತಿಯನ್ನು ಸೂಚಿಸುತ್ತಿತ್ತು. ತಂದೆಯ ಕುರಿತು ಭಯ,ಗೌರವವೇ ಪ್ರೀತಿಯ ಇನ್ನೊಂದು ಮುಖದ ಭಾವವಾಗಿರುತ್ತಿತ್ತು .ಮಕ್ಕಳಿಗೆ ತಂದೆಯ ಬಳಿ ಏನನ್ನಾದರೂ ಕೇಳಬೇಕಾದರೆ ಅಮ್ಮನೇ ಮಧ್ಯವರ್ತಿ .ಅಮ್ಮನನ್ನೇ ಕಾಡಿ-ಬೇಡಿ ತಂದೆಯ ಬಳಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದದ್ದು. ಆದರೆ ಕೌಟುಂಬಿಕ ಮೌಲ್ಯಗಳು ಬದಲಾಗುತ್ತಿರುವ ಇಂದಿನ ಕಾಲದಲ್ಲಿ ತಂದೆ ಓರ್ವ ಸ್ನೇಹಿತನಂತೆ, ಮಾರ್ಗದರ್ಶಿಯಂತೆ ತೋರುತ್ತಿದ್ದಾರೆ ಎಂಬುದು ಕೂಡ ಅತ್ಯಂತ ಸ್ವಾಗತಾರ್ಹ.ಈಗ ಅಮ್ಮನ ಬಳಿ ಹೇಳಿಕೊಳ್ಳದ ಹಲ ಕೆಲವು ವಿಷಯಗಳನ್ನು ಮಕ್ಕಳು ತಂದೆಯ ಬಳಿ ನಿಸ್ಸಂಕೋಚವಾಗಿ, ಸರಾಗವಾಗಿ ಹೇಳಿಕೊಳ್ಳಬಲ್ಲರು,ವಾದಿಸಬಲ್ಲರು. ಅಪ್ಪಂದಿರೂ ಅಷ್ಟೇ .. ಮುಂಚಿನ ಅಪ್ಪಂದಿರಂತೆ ಅಲ್ಲದೆ ತಮ್ಮ ಮಕ್ಕಳ ಜೊತೆ ಸಹಜವಾಗಿ, ಅಷ್ಟೇ ಸರಾಗವಾಗಿ ಬೆರೆತು ಅವರ ಇಷ್ಟಾನಿಷ್ಟಗಳಿಗೆ ಕಿವಿಯಾಗುತ್ತಾರೆ , ಅವರ ಬೇಕು ಬೇಡಗಳಿಗೆ ,ಅವರ ಒಳಿತು ಕೆಡುಕುಗಳಿಗೆ ಕಣ್ಣಾಗುತ್ತಾರೆ ಅವರ ತಪ್ಪು ಸರಿಗಳನ್ನು ನಿಷ್ಟುರತೆ ಎಂಬ ತಕ್ಕಡಿಯಲ್ಲಿ ತೂಗದೆ ನಿಧಾನವಾಗಿ ಪರಾಮರ್ಶೆ ಮಾಡಿ ಸಮಾಧಾನವಾಗಿ ತಿಳಿ ಹೇಳುವ ತಾಳ್ಮೆಯ ದ್ರಷ್ಟಾರರಾಗಿದ್ದಾರೆ …ಅಂತೆಯೇ ಇಂದು ಅಪ್ಪಂದಿರನ್ನು ಎರಡನೇ ತಾಯಿ ಎಂದೆನುವ ಕಾಲ ಬಂದಿದೆ .ಇದು ಕೂಡ ಪ್ರೀತಿಯ ಬದಲಾದ ರೂಪ.
ಇನ್ನು ಮಗುವಾಗಿ ತನ್ನ ಶೈಶವಾವಸ್ಥೆಯನ್ನ ಪೂರೈಸಿ, ಹದಿಹರೆಯಕ್ಕೆ ಕಾಲಿಟ್ಟಾಗ ಕೂಡ ತಂದೆ ಅವರಿಗೆ ಒಳ್ಳೆಯ ಸ್ನೇಹಿತನಾಗುತ್ತಾನೆ, ಹೆಣ್ಣುಮಕ್ಕಳಿಗಂತೂ ಅವರಪ್ಪ ಅವರ ಮೊದಲ ಪ್ರೀತಿ , ಮೊದಲ ಹೀರೋ,ಮೊದಲ ದೈವ. ಈ ವಿಷಯದಲ್ಲಿ ಕೊಂಚ ಗಂಡು ಮಕ್ಕಳು ತಾಯಿಯ ಸೆರಗು ಹಿಡಿಯುವುದೇ ಹೆಚ್ಚು , ತಂದೆಯ ಬಳಿ ಗಂಡು ಮಕ್ಕಳು ತಮ್ಮ ಹದಿಹರೆಯದಲ್ಲಿ ಕೊಂಚ ಬಿಗುಮಾನದಿಂದ ಇರುವುದು ಕೂಡ ಕಂಡುಬರುತ್ತದೆ .ಇಲ್ಲಿ ಪ್ರೀತಿ ಬಿಗುಮಾನದ ರೂಪದಲ್ಲಿ ವ್ಯಕ್ತವಾಗುತ್ತದೆ. ಇನ್ನು ಶಾಲೆಗಳಲ್ಲಿ ಮಕ್ಕಳು ತಮ್ಮ ಶಾಲೆಯನ್ನು, ಸಹಪಾಠಿಯನ್ನು, ಶಿಕ್ಷಕರನ್ನು ಆತ್ಮೀಯವಾಗಿ ಹಚ್ಚಿಕೊಳ್ಳುತ್ತಾರೆ. ಬೇಕಾದರೆ ಯಾರನ್ನಾದರೂ ಕೇಳಿ ನೋಡಿ ‘ನಿಮ್ಮ ಅತ್ಯಂತ ನೆಚ್ಚಿನ ಗುರುಗಳು, ಮೆಚ್ಚಿನ ಸ್ನೇಹಿತರು ಯಾರು’?? ಎಂದು ಕೇಳಿದರೆ ಸಿಗುವ ಉತ್ತರ ಅವರ ಪ್ರಾಥಮಿಕ ಶಾಲೆಯ ಶಿಕ್ಷಕರೇ! .ಕಾರಣ ಅತ್ಯಂತ ಸರಳ ಹಾಗೂ ಸ್ಪಷ್ಟ. ಮೊತ್ತ ಮೊದಲು ಮನೆಯ ಚೌಕಟ್ಟನ್ನು ದಾಟಿ ಮಗು ಹೊರ ಬಂದಾಗ ಅದಕ್ಕೆ ಸಿಗುವ ಪರಿಸರವೇ ಶಾಲೆ .ಅಲ್ಲಿ ಮೌಲ್ಯಗಳನ್ನು ಕಥೆಯ ಮೂಲಕ, ಹಾಡಿನ ಮೂಲಕ, ಪಾಠದ ಮೂಲಕ ಹೇಳಿಕೊಡುವ, ಮಗುವನ್ನು ಒಬ್ಬ ಉತ್ತಮ ಪ್ರಜೆಯನ್ನಾಗಿಸುವ ಕಾಯಕ ಮಾಡುವ ಶಿಕ್ಷಕ ಮಕ್ಕಳಿಗೆ ಅತ್ಯಂತ ಪ್ರೀತಿಪಾತ್ರನಾಗುತ್ತಾನೆ. ತಿದ್ದಿ, ತೀಡಿ,ಮುದ್ದು ಮಾಡಿ ಶಿಕ್ಷೆ ನೀಡಿ ಹೇಗಾದರೂ ಹೇಳಲಿ ಶಿಕ್ಷಕ ಮಗುವಿನ ಮೊತ್ತ ಮೊದಲ ಕುಟುಂಬದ ಹೊರಗಿನ ಪ್ರೀತಿ. ಜೊತೆಗೆ ಸಹಪಾಠಿಗಳು ಮಗುವಿಗೆ ಅತ್ಯಂತ ಆತ್ಮೀಯರಾಗುತ್ತಾರೆ. ಇಲ್ಲಿಯೂ ಕೂಡ ಮಗು ಹೊಸದಾದ, ಸುರಕ್ಷಿತವಾದ ಸುಮಧುರ ಸಂಬಂಧವನ್ನ ,ಮನೆಯ ಹೊರಗೆ ಕಂಡುಕೊಳ್ಳಲು ತನ್ನದೇ ವಯಸ್ಸಿನ ಸ್ನೇಹಿತರನ್ನು ಹೊಂದುವುದು ಗೆಳೆತನವನ್ನು ನಿಭಾಯಿಸುವುದು ಪ್ರೀತಿಯ ಮತ್ತೊಂದು ರೂಪ .
ಪ್ರೌಢ ಮತ್ತು ಹದಿಹರೆಯದ ಅವಸ್ಥೆಯಲ್ಲಿ, ಕಾಲೇಜು ಸಮಯದಲ್ಲಿ ಮಕ್ಕಳು ಪರಸ್ಪರ ವಿರುದ್ಧ ಲಿಂಗಿಗಳ ಆಕರ್ಷಣೆ ಹೊಂದುವುದು ಸಹಜವಾದದ್ದು. ಆದರೆ ಇದು ಅಪೇಕ್ಷಣೀಯವಲ್ಲ ಎಂಬುದು ಸಮಾಜಿಕ ತಿಳುವಳಿಕೆ .ಆದರೆ ಈ ಪ್ರೀತಿ ಎಂಬುದು ಮಾಯೆ ಎಂಬುದು ಸ್ಪಷ್ಟವಾಗುವುದು ಈ ಹದಿಹರೆಯದಲ್ಲಿಯೇ .ಅರಿಯದ ವಯಸ್ಸು, ಕೇಳದ ಮನಸ್ಸು ಮಗುವನ್ನು ಪ್ರೀತಿಯ ಬಲೆಗೆ ದೂಡಬಹುದು ..ಹಾಗೆಂದು ಆ ಪ್ರೀತಿಯ ಆಯಸ್ಸು ತುಂಬ ಕಡಿಮೆ .ಅರಿವಿನ ಕೊರತೆ , ವಯೋ ಸಹಜ ಆಕರ್ಷಣೆಗಳಿಗೆ ಹಲವರು ತುತ್ತಾಗಬಹುದು ,ಮುಂದೆ ಅದೊಂದು ಮಧುರಾನುಭೂತಿ ಯಾಗಿ ಜೀವನಪೂರ್ತಿ ಅವರನ್ನು ಕಾಡಬಲ್ಲದು ….ಆದರೆ ಅದನ್ನು ಕೇವಲ ಆಕರ್ಷಣೆ ಎಂದಲ್ಲದೆ ಪ್ರೀತಿ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಈ ಆಕರ್ಷಣೆಯ ಮೂಲಕವೇ ಆರಂಭವಾದ ಪ್ರೀತಿ ಗಟ್ಟಿಯಾಗಿ ಹೆಮ್ಮರವಾಗಿ ಮನೆಯವರೆಲ್ಲರನ್ನು ಒಪ್ಪಿಸಿ ಅಥವಾ ಒಪ್ಪಿಸಲು ಸಾಧ್ಯವಾಗದೆ ಇದ್ದಾಗಲೂ ಕೂಡ ಮದುವೆ ಎಂಬ ಬಂಧನದಲ್ಲಿ ಒಂದಾಗುವುದು ಪ್ರೀತಿಯ ಇನ್ನೊಂದು ಗಟ್ಟಿತನದ ರೂಪ.
ಮುಂದೆ ಬರುವ ಘಟ್ಟವೇ ಮನುಷ್ಯನ ಜೀವನದ ಅತ್ಯಂತ ಪ್ರಮುಖ ಘಟ್ಟ .ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಸಂಪಾದನೆಯ ದಾರಿಯನ್ನು ಹಿಡಿದ ಮಕ್ಕಳಿಗೆ ಮದುವೆ ಎಂಬ ಸುಮಧುರ ಸಾಂಸಾರಿಕ ಬಂಧಕ್ಕೆ, ಸಾಮಾಜಿಕ ಬದ್ಧತೆಗೆ ತೊಡಗಿಸುವುದು. ಇಲ್ಲಿ ಗಂಡು-ಹೆಣ್ಣು ಪರಸ್ಪರ ಅವಲಂಬನೆ, ಸಹಬಾಳ್ವೆ, ಹೊಂದಾಣಿಕೆ, ಪ್ರೀತಿ- ವಿಶ್ವಾಸಗಳ ಬಂಧನದಲ್ಲಿ ಒಂದಾಗುತ್ತಾರೆ. ನಮ್ಮ ಭಾರತೀಯ ಪರಂಪರೆಯಲ್ಲಂತೂ ವಿವಾಹವೆ೦ಬುದು ಶ್ರೇಷ್ಠ ವಿಧಿ.ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬುದು ಪ್ರಪಂಚದ ಸಾರ್ವಕಾಲಿಕ ಹೇಳಿಕೆ. ಹಾಗೆಯೇ ವಿವಾಹ ಎಂಬುದು ಗಂಡು ಹೆಣ್ಣುಗಳಿಗೆ ಸಾಮಾಜಿಕ ಬಂಧನವನ್ನು, ಚೌಕಟ್ಟನ್ನು, ತನ್ಮೂಲಕ ಪ್ರೀತಿಯ ಮತ್ತೊಂದು ದರ್ಶನವನ್ನು ಮಾಡಿಸುತ್ತದೆ. ಇಲ್ಲಿ ಪ್ರೀತಿಯ ಪರಾಕಾಷ್ಠೆಯನ್ನೇ ಪ್ರೇಮ ಎಂದು ಕರೆಯಬಹುದು . ನಿಷ್ಕಾಮ ಪ್ರೇಮ ಎಂಬ ಮಾತೊ೦ದು ಅಲ್ಲಲ್ಲಿ ಕೇಳಬರುತ್ತದೆ .ಹಾಗಾದರೆ ನಿಷ್ಕಾಮ ಪ್ರೇಮ ಎಂದರೆ ಏನು ??? ಹಲವರು ಹೇಳುವಂತೆ ಹಲವಾರು ವ್ಯಾಖ್ಯಾನಗಳು ಪ್ರೇಮಕ್ಕೆ ಇದ್ದರೂ ಅಂತಿಮವಾಗಿ ಪ್ರೇಮ ಎಂಬುದು….ತನ್ನ ಜೊತೆಗಿನ ವ್ಯಕ್ತಿಯ ಎಲ್ಲಾ ಒಳಿತು – ಕೆಡುಕು, ಸರಿ -ತಪ್ಪುಗಳನ್ನು ಒಳಗೊಂಡಂತೆಯೇ ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದಾದರೆ ಅದು ನಿಷ್ಕಾಮ ಪ್ರೇಮ . ಅಲ್ಲಿ ಯಾವುದೇ ರೀತಿಯ ನಿರೀಕ್ಷೆಗಳು ,ಭರವಸೆಗಳು ಸಲ್ಲದು .ನೀ ನನಗಿದ್ದರೆ ನಾ ನಿನಗೆ ಎಂಬ ವ್ಯಾವಹಾರಿಕ ಭಾವ ವರ್ಜ್ಯ. ಅಂತೆಯೇ ರಾಧಾ ಕೃಷ್ಣರ ಪ್ರೀತಿ ಇಂದಿಗೂ ಜಗಜ್ಜನಿತ. ಅವರ ಪ್ರೀತಿ ನಿಷ್ಕಾಮವಾದುದು. ಯಾವತ್ತೂ ಪ್ರೇಮವನ್ನೇ ಬಯಸಿದ್ದ ಆಂತರಂಗಿಕ ಗೆಳೆತನ. ಅಲ್ಲಿ ಕಾಮನೆಗಳಿಗೆ ಅವಕಾಶವಿರಲಿಲ್ಲ. ಒಂದು ರೀತಿಯ ಪ್ಲೆಟಾನಿಕ್ ಎಂದು ಇಂಗ್ಲಿಷಿನಲ್ಲಿ ಬಳಸಬಹುದಾದ ರೀತಿಯ ನವಿರು ಪ್ರೇಮ. ಪ್ರೀತಿಯ ಇಂಥ ಉತ್ಕಟ ರೂಪವೇ ಪ್ರೇಮ. ತನ್ನ ಪ್ರೀತಿ ತನ್ನ ಜೊತೆಗೆ ಜೀವಿತದ ಕೊನೆಯವರೆಗೆ ಇರಬೇಕೆಂಬ ಸ್ವಾರ್ಥ ಕೂಡ ರಾಧಾ-ಕೃಷ್ಣರಲ್ಲಿ ಇರಲಿಲ್ಲ. ಪರಸ್ಪರ ಏಳಿಗೆಗಾಗಿ ತಮ್ಮ ಪ್ರೀತಿಯನ್ನು ಬಿಟ್ಟುಕೊಟ್ಟ ತನ್ಮೂಲಕ ಅಮರ ಪ್ರೇಮಿಗಳಾದವರು ರಾಧಾ-ಕೃಷ್ಣರು .ಅವರು ಪತಿ ಪತ್ನಿಯರಲ್ಲ…ಆದರೆ ದಾಂಪತ್ಯವನು ಮೀರಿದ ಸಾಂಗತ್ಯ ಅವರಿಬ್ಬರದಾಗಿದ್ದರಿಂದಲೇ ಅವರು ಇಂದಿಗೂ ಪೂಜನೀಯರು.
ಹದಿಹರೆಯದ ಕಾವಿನಲ್ಲಿ ಯಾವುದೋ ಆಕರ್ಷಣೆಗೆ ಒಳಪಟ್ಟು ಒಬ್ಬರನ್ನು ಪ್ರೀತಿಸಿ, ಆ ಪ್ರೀತಿಯನ್ನು ಇನ್ನೊಬ್ಬರು ತಿರಸ್ಕರಿಸಿ ದಾಗ ಅವರ ಮೇಲೆ ದೈಹಿಕ ಹಲ್ಲೆಗಳು ,ಎಸಿಡ್ ದಾಳಿ ಯ೦ತಹ ಕ್ಷುಲ್ಲಕ, ಅಮಾನವೀಯ ಘಟನೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವ ಹದಿಹರೆಯದವರು ಪ್ರೇಮದ ಪೂಜಾರಿಗಳಲ್ಲ ..ಬದಲಾಗಿ ಪ್ರೇಮದ ಪಾತಕಿಗಳು. ಪ್ರೇಮ ತ್ಯಾಗವನ್ನು ಕೂಡ ಬಯಸುತ್ತದೆ ಎಂಬ ಕನಿಷ್ಠ ಸತ್ಯವನ್ನು ಅರಿಯದ ಕ್ಷುದ್ರ ಜೀವಿಗಳು . ತಾನು ಪ್ರೀತಿಸುವ ವ್ಯಕ್ತಿ ಎಲ್ಲೇ ಇರಲಿ ಹೇಗೆ ಇರಲಿ, ಸುಖವಾಗಿ ಇರಲಿ ಎಂಬುದು ನೈಜ ಪ್ರೀತಿಯ ಲಕ್ಷಣ. ಮುಂದೆ ಮಕ್ಕಳು, ಮರಿ, ಮನೆ ಕೆಲಸ , ಉದ್ಯೋಗ, ಸಾಂಸಾರಿಕ ಜೀವನ, ಕೌಟುಂಬಿಕ ಜವಾಬ್ದಾರಿಗಳು ಒಂದು ಹಂತಕ್ಕೆ ಬಂದಾಗ ಪತಿ-ಪತ್ನಿಯರ ಮದ್ಯದಲ್ಲಿರುವ ಹಲವಾರು ಭಿನ್ನಾಭಿಪ್ರಾಯಗಳು,ವಯೋ ಸಹಜ ಹರೆಯದ ಆಸೆ-ಆಕಾಂಕ್ಷೆಗಳು, ಕಾಮನೆಗಳು, ಸಿಟ್ಟು-ಸೆಡವುಗಳು, ಕಾರಣವೇ ಇಲ್ಲದೆ ಕಿರಿಕಿರಿಗಳು ,ಪರಸ್ಪರರ ಅವಶ್ಯಕತೆಯ, ಸಮಯ ಬೇಡುವ ಒಂದು ರೀತಿಯ ಪೊಸೆಸ್ಸಿವ್ ನೆಸ್ ಕಡಿಮೆಯಾಗಿ ಮಾಗಿದ ಪ್ರೇಮ ದಂಪತಿಗಳದಾಗುತ್ತದೆ. ಪರಸ್ಪರಾವಲಂಬನೆ , ಪ್ರೇಮದ ಬಂಧನ, ಕುಟುಂಬದ ಜವಾಬ್ದಾರಿಗಳು ಅವರನ್ನು ಇನ್ನಷ್ಟು, ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ಹರೆಯದಲ್ಲಿ ಸಂಗಾತಿ ದೈಹಿಕವಾಗಿ ಹತ್ತಿರವಾದರೆ, ವಯಸ್ಸಾದಂತೆ ಮಾನಸಿಕವಾಗಿ, ಭಾವನಾತ್ಮಕವಾಗಿ ಪರಸ್ಪರ ಇನ್ನಷ್ಟು ಆಪ್ತರಾಗುತ್ತಾರೆ. ಮುಪ್ಪಾದಂತೆ ಪರಸ್ಪರ ಅವಲಂಬನೆ ಒಂದೇ ದೇಹ ಎರಡು ಜೀವ, ಏಕ ಭಾವ ಎಂಬಂತೆ ಆಗುತ್ತಾರೆ ಆಗಬೇಕು ಕೂಡ. ಆದರೆ ಎಲ್ಲರಿಗೂ ಈ ಪ್ರೇಮ ಮರೀಚಿಕೆಯೇ ಸರಿ.ಕೆಲವರಿಗೆ ದಾಂಪತ್ಯದಲ್ಲಿ ಪ್ರೇಮ ಸಿಗದೇ ಹೋದಾಗ ವಿರಸ , ನೋವು ನಿರಾಶೆ ಸಹಜ .ಇನ್ನು ಪರಸ್ಪರ ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿಯೂ ಕೂಡ ನಮ್ಮ ಹಿಂದಿನ ಜನರು ಕೌಟುಂಬಿಕ ಚೌಕಟ್ಟಿನಲ್ಲಿ ತಮ್ಮ ಜೀವನವನ್ನು ಸವೆಸಿಬಿಡುತ್ತಿದ್ದರು ಕೂಡ. ಕೌಟುಂಬಿಕ ಜೀವನಕ್ಕಿರುವ, ಸಾಮಾಜಿಕ ಬದುಕಿಗಿರುವ ತಾಕತ್ತು ಕೂಡ ಅದೇ ಕೌಟುಂಬಿಕ ಪ್ರೀತಿ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ ,ಹೊಂದಾಣಿಕೆಯ ಬದುಕು ಸಾಧ್ಯವಾಗದೇ ಹೋದಾಗ ಪರಸ್ಪರ ಗೌರವಪೂರ್ವಕವಾಗಿ ವಿಚ್ಛೇದನ ಹೊಂದಿ ತಮ್ಮ ಪಾಡಿಗೆ ತಾವು ಜೀವನ ಸಾಗಿಸುತ್ತಾರೆ .ಇದು ಕೂಡ ಆತ್ಮಗೌರವದ, ಸ್ವಯಂ ಪ್ರೀತಿಯ ಲಕ್ಷಣ .ಬದಲಾಗುತ್ತಿರುವ ಕಾಲಮಾನದಲ್ಲಿ ಬೇಕಿದ್ದರೆ ಬೆರೆತು ನಡೆ, ಬೇಡವಾದರೆ ಸರಿದು ನಡೆ ಎಂಬ ಈ ನಡೆ ಅಪೇಕ್ಷಣೀಯವಲ್ಲದೇ ಹೋದರೂ ಆಕ್ಷೇಪಣೀಯ ವಂತೂ ಅಲ್ಲ . ಕಾಲಾಯ ತಸ್ಮೈ ನಮಃ.
ಈ ಎಲ್ಲದರ ಮಧ್ಯದಲ್ಲಿ ನಾವು ಹುಟ್ಟಿನಿಂದ ಸಾವಿನವರೆಗೂ ಇನ್ನೊಂದು ಜೀವವನ್ನು ಪ್ರೀತಿಸುತ್ತೇವೆ, ಆರಾಧಿಸುತ್ತೇವೆ,ಪೂಜಿಸುತ್ತೇವೆ ನಂಬುತ್ತೇವೆ… ನಂಬಿ ನಡೆಯುತ್ತೇವೆ ಅದುವೇ ದೈವ ,ಅದುವೇ ದೇವರು .ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲಾ ಕೊಡುವವನು ದೇವರಾದರೆ ,ತಪ್ಪು ಮಾಡದಂತೆ ತಡೆಯಲು ಕಾರಣವಾಗಿರುವವನು ದೇವರಾದರೆ ,ಪರೀಕ್ಷೆಯಲ್ಲಿ ಪಾಸಾಗಲು ಸಹಾಯ ಮಾಡುವವರು ದೇವರಾದರೆ ಮುಂದೆ ವಯಸ್ಸಾದಂತೆ ದೇವರು ಭಾವ – ಭಕ್ತಿ ಯ ಅವ್ಯಕ್ತ ರೂಪವಾಗಿ ಹೊರಹೊಮ್ಮುತ್ತಾನೆ . ವ್ಯಕ್ತಿಯ ಮಾನಸಿಕ, ಭಾವನಾತ್ಮಕ ಪ್ರಪಂಚದ ಇನ್ನೊಂದು ಭಾಗವಾಗಿ ದೈವ ಭಕ್ತಿ ಆತನ ಪ್ರಪಂಚವನ್ನು ಆಳುತ್ತದೆ. ಇದು ಕೂಡ ಪ್ರೀತಿಯ ಇನ್ನೊಂದು ಮುಖವೇ . ಪ್ರಾಕೃತಿಕ ಅವಘಡಗಳಾದ ಭೂಕಂಪ, ಸುನಾಮಿ, ಹಿಮಪಾತ, ಭೂಕುಸಿತಗಳಂತಹ ಸಂದರ್ಭಗಳಲ್ಲಿ ಜಾತಿ,ಮತ, ಕುಲ ಧರ್ಮಗಳ ಹಂಗಿಲ್ಲದೆ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಉಳಿವಿಗಾಗಿ ಹೋರಾಡುತ್ತಾನೆ, ಇದ್ದುದನ್ನು ಹಂಚಿ ಕೊಳ್ಳುತ್ತಾನೆ ,ತನಗಿಲ್ಲದಿದ್ದರೂ ತನ್ನವರಿಗಾಗಿ ಆಹಾರ, ಬಟ್ಟೆ, ವಸತಿ ವ್ಯವಸ್ಥೆ ಮಾಡುತ್ತಾನೆ …. ಅದುವೇ ನಿಜವಾದ ಜಗದ ರೀತಿ.’ಬಾಳು, ಬಾಳಗೊಡು’ ಎಂಬ ಧ್ಯೇಯದಂತೆ ನಡೆಯುತ್ತಾನೆ ಅದೇ ನಿಜವಾದ ಮಾನವ ಪ್ರೀತಿ. ಹೀಗೆ ಪ್ರೀತಿಗೆ ಹಲವಾರು ಮುಖಗಳು ,ಹಲವಾರು ಆಯಾಮಗಳು.ಆದರೂ ಕೂಡಾ ಮತ್ತೊಮ್ಮೆ ಮಗದೊಮ್ಮೆ ವಿಶ್ವಮಾನವ ಕುವೆಂಪು ಅವರ ಹೇಳಿಕೆಯಂತೆ ವಿಶ್ವ ಪ್ರೇಮಿಯಾಗಿ, ವಿಶ್ವಭ್ರಾತೃತ್ವವನ್ನು ಸಾರೋಣ,ವಿಶ್ವ ಮಾನವರಾಗೋಣ, ಮನುಜ ಮತವೇ ವಿಶ್ವಪಥ ಎಂಬ ಹಾದಿಯಲ್ಲಿ ಸಾಗುವ ಪಥಿಕರಾಗೋಣ ಎಂಬ ಆಶಯದೊಂದಿಗೆ
ವೀಣಾ ಹೇಮಂತಗೌಡ ಪಾಟೀಲ್
ಅರ್ಥಪೂರ್ಣ ಲೇಖನ ಮೇಡಂ ಅಭಿನಂದನೆಗಳು ನಿಮಗೆ
ಎಲ್ಲಾ ಸ್ಥರಗಳಲ್ಲಿ ಪ್ರೇಮದ ಹರಿವನ್ನು ವಿವರಿಸಿದ ಪರಿ ಅನನ್ಯ. ಧನ್ಯವಾದಗಳು