ಯಮುನಾ.ಕಂಬಾರ ಕವಿತೆ ‘ವಸುಂಧರೆ’

ಸುಡುವ ಬೆಂಕಿಯಲಿ ಬಿದ್ದರೂ
ಕಪ್ಪು ಕರುಕಾಗದೇ,
ಹೊಳೆಯುವ ಚಿನ್ನವಾದೆ
ಚಂದಿರನ ಬೆಳಕಾದೆ.
ಬೆಳಕ ಪರದೆಗಳಲ್ಲಿ ನಕ್ಕು ನಗಿಸಿ
ಕತ್ತಲೆ ರಾತ್ರಿಗಳಲ್ಲಿ ಉಸಿರು ಕಟ್ಟುವ ಬಿಕ್ಕುಗಳಾದೆ.

ಅದಾವ ಗಳಿಗೆಯೋ
ಬರುವಂತೆ ಬಂದದ್ದು
ಸ್ವರ್ಗದ ಮಿಂಚು ಹಾಯಿಸಿದ್ದು
ಮತ್ತೆ ಮಿಂಚದೇ
ಗುಡುಗಾಗಿ ಗದ್ದರಿಸದೇ
ಬಯಲ ಬಾನಿನಲ್ಲಿ ಮರೀಚಿಕೆಯಾಗಿ
ಹೊಳೆಯುತ್ತಿದ್ದದ್ದು
ನಿನ್ನ ಬಾಳ ದಿಗಂತದಲ್ಲಿ
ಬೆಚ್ಚಿ ಬೀಳಿಸುತ್ತಿದ್ದದ್ದು
ಪಿಶಾಚಿಯಾಗಿ ಹೆಜ್ಜೆ ಹೆಜ್ಜೆಗೆ ಹಾಸು ಹೊಯ್ಯುತ್ತಿದ್ದದ್ದು

ಉಂಡದ್ದನ್ನು ಉಗುಳದೇ
ಉದರಕ್ಕೆ ಒತ್ತುತ್ತಿದ್ದದ್ದನ್ನು
ಸಹನೆಯ ಚಿಮ್ಮಟೆಯಿಂದ ಆಗಾಗ
ಕೈಯಾಡಿಸಿ ಕರಗಿಸಿ –
ಓರಗೆಯವರ ಮುಂದೆ ಓರೇಯಾಗದೇ
ನೇರವಾಗಿ ನಿಂತು ನಟಿಸಿ – ಸೈ ಎನಿಸಿಕೊಂಡದ್ದು
ಸರಳವಲ್ಲ – ಅಪ್ಪಟ ವೇದನೆ…!!

“ಕೆರೆಯ ನೀರನು ಕೆರೆಗೆ ಚೆಲ್ಲಿ ” ಎನ್ನುವಂತೆ
ಸಂಕಟಗಳ ಕಟ್ಟಿ
ಕಾಲ ಬುಡ ಒತ್ತಿ
ರೋಗಿಗಳ ನೋವಿಗೆ ‘ ಔಷಧ ‘ ವಾದೆ.
ಬಾಯಿ ಇಲ್ಲದ ಪಶುಗಳ
ಆಕ್ರಂಧನಕ್ಕೆ ‘ ಮುಲಾಮು ‘ವಾದೆ.
ನಿರ್ಗತಿಕರ ನಗೆ ಹೂವಿಗೆ
ಜಿನುಗುವ ‘ ಸೆಲೆ’ಯಾದೆ.
ಬದುಕು ಕುಲುಮೆಯಲಿ ಕುದ್ದು
ತಾಯಿ ನುಡಿಗಳನೇ ಹೊದ್ದು
ನಾಡ ತುಂಬ ‘ಕನ್ನಡ ಅಭಿನೇತ್ರಿ’ಯಾಗಿ ಉಳಿದದ್ದು
ಮಾದರಿ ಫಲಕವಾಗಿದೆ.
ವಸುಂಧರೇ…….,
ನೀನುಟ್ಟ ಸಹನೆದುಡಿಗೆ ಅಜರಾಮರ…….!!.

———————————————————

Leave a Reply

Back To Top