ಅನಸೂಯ ಜಹಗೀರದಾರ, ಸುಲಲಿತ ಭಾಷಾ ಶೈಲಿಯಲ್ಲಿ ಒಟ್ಟು ಕಥನಕ್ರಮದಲ್ಲಿ ಹದವಾದ ವಿಶೇಷ ಕಥೆಗಳು ಪ್ರೊ. ನಾಗ ಎಚ್. ಹುಬ್ಳಿ

ಹಿಂದೂಸ್ಥಾನಿ ಸಂಗೀತ ಕಲಾವಿದೆಯೂ, ಕವಯಿತ್ರಿಯೂ, ಕಥೆಗಾರ್ತಿಯೂ, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಯೂ, ಪ್ರೌಢಶಾಲಾ ಶಿಕ್ಷಕಿಯೂ ಆಗಿರುವ ಬಹುಮುಖ ಪ್ರತಿಭೆಯ ಶ್ರೀಮತಿ ಅನಸೂಯ ಜಹಗೀರದಾರರು ಕನ್ನಡ ಸಾಹಿತ್ಯ-ಸಂಸ್ಕೃತಿ ಲೋಕದಲ್ಲಿ ಸಂಚಲನ ಮೂಡಿಸಿದವರು. ಕಾವ್ಯ ಮತ್ತು ಗದ್ಯ ಕ್ಷೇತ್ರಗಳೆರಡರಲ್ಲೂ ಕಳೆದ ಸುಮಾರು ಎರಡು ದಶಕಗಳಿಂದ ಕೃಷಿ ಮಾಡುತ್ತ ಬಂದಿರುವ ಇವರು ತಮ್ಮ ಹನಿಗವನ, ಕವನ ಹಾಗೂ ಕಥೆಗಳ ಮೂಲಕ ಸಾಹಿತ್ಯಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿದವರು. ಕಾವ್ಯಗಳಷ್ಟೇ ಸಮರ್ಥವಾಗಿ ಕಥೆಗಳನ್ನೂ ಹೆಣೆಯುವ ಕಲೆ ಇವರಿಗೆ ಕರಗತವಾಗಿದೆ. ಕೆಲವೇ ಪಾತ್ರಗಳ ಮೂಲಕ, ಹದವಾದ ಭಾಷೆ, ಸಂಯಮದ ನಿರೂಪಣೆ, ಅಚ್ಚುಕಟ್ಟಾದ ಪರಿಸರದ ವರ್ಣನೆಯೊಂದಿಗೆ ಸಾಗುವ ಇವರ ಕಥೆಗಳು ಪ್ರತಿಯೊಂದು ಹಂತದಲ್ಲಿಯೂ ಕುತೂಹಲವನ್ನು ಕಾಪಾಡಿಕೊಳ್ಳುತ್ತವೆ. ಇಲ್ಲಿನ ಬಹುತೇಕ ಎಲ್ಲಾ ಕಥೆಗಳು ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ ಸಮಸ್ಯೆಯಲ್ಲಾಗಲಿ, ಉಪಮೆಗಳ ಪ್ರಯೋಗದಲ್ಲಾಗಲಿ, ದೃಷ್ಟಿಧೋರಣೆಯಲ್ಲಾಗಲಿ, ಕಥೆಯ ನಿರೂಪಣೆಯಲ್ಲಾಗಲಿ, ಭಾಷೆಯ ಬಳಕೆಯಲ್ಲಾಗಲಿ, ಒಟ್ಟು ಕಥನಕ್ರಮದಲ್ಲಾಗಲಿ ಹದವನ್ನು ಕಾಯ್ದುಕೊಂಡಿವೆ. ಇಲ್ಲಿನ ಕಥೆಗಳಲ್ಲಿರುವ ಗಾಂಭೀರ್ಯ ಓದುಗರ ಸಹನೆಯನ್ನು ಪರೀಕ್ಷೆ ಮಾಡುವುದಿಲ್ಲ; ಬದಲಿಗೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ ಎನ್ನುವುದು ಇನ್ನೊಂದು ವಿಶೇಷ.
ಅನಸೂಯರವರು ಕಳೆದ ಸುಮಾರು ಮೂವತ್ತು ವರ್ಷಗಳ ವಿವಿಧ ಕಾಲಘಟ್ಟದಲ್ಲಿ, ಸನ್ನಿವೇಶಗಳಲ್ಲಿ, ಪರಿಸ್ಥಿತಿಗಳಲ್ಲಿ ತಾವು ಬರೆದಿರುವ ಕಥೆಗಳ ಪೈಕಿ ೧೫ ಕಥೆಗಳನ್ನು ಆಯ್ದು ಒಂದು ಕಡೆಯಲ್ಲಿ ನೀಡುವ ಶ್ಲಾಘನೀಯ ಪ್ರಯತ್ನ ಮಾಡಿದ್ದಾರೆ. ತಮ್ಮ ಸುತ್ತಲಿನ ಪರಿಸರ, ಕುಟುಂಬ ವ್ಯವಸ್ಥೆ, ಚಿಂತನಾ ವಿಧಾನ, ಜೀವನಶೈಲಿ ಇತ್ಯಾದಿಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಕಥೆಗಳ ವಸ್ತುವಿನ ಆಯ್ಕೆಯಲ್ಲಿಯೂ ಜಾಗರೂಕತೆ ಕಂಡುಬರುತ್ತದೆ. ಓದಿದ ನಂತರ ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಕಥೆಗಳನ್ನು ನೀಡಿದ ಅನಸೂಯರವರು ಅಭಿನಂದನಾರ್ಹರು.


ಸುಲಲಿತ ಭಾಷಾ ಶೈಲಿಯಲ್ಲಿ ಲೇಖಕಿಯ ಕನಸು `ಪರಿವರ್ತನೆ’ ಸಂಕಲನ ಸುಂದರವಾಗಿ ಮೂಡಿಬಂದಿದೆ. ಕನ್ನಡ ಪುಸ್ತಕ ಲೋಕಕ್ಕೆ ಈ ಕೃತಿ ಒಂದು ಉತ್ತಮ ಸೇರ್ಪಡೆ. ಅನಸೂಯರವರ ಸಾಹಿತ್ಯ ಕೃಷಿಗೆ ಶುಭ ಹಾರೈಸುವೆ.

————————————————-

One thought on “ಅನಸೂಯ ಜಹಗೀರದಾರ, ಸುಲಲಿತ ಭಾಷಾ ಶೈಲಿಯಲ್ಲಿ ಒಟ್ಟು ಕಥನಕ್ರಮದಲ್ಲಿ ಹದವಾದ ವಿಶೇಷ ಕಥೆಗಳು ಪ್ರೊ. ನಾಗ ಎಚ್. ಹುಬ್ಳಿ

Leave a Reply

Back To Top