ಡಾ ಡೋ.ನಾ.ವೆಂಕಟೇಶ ಕವಿತೆ “ಬಾರದಿರ ಬೇಡಿ”

ಅರಳಿದ್ದ ಹೂವು ಮುದುಡಿ
ಹೋಗುವ ಸಮಯ,
ಬೀರಿದ ಸುಗಂಧದ ಪುವಾಸನೆ
ಕಳೆದು ಹೋಗುವ ಸಮಯ,
ಪುಟ್ಟ ಪೆಟ್ಟಿಗೆಯಲ್ಲಿಟ್ಟ ದ್ರವ್ಯ
ತನ್ನ ಜೀವಿತಾವಧಿ ಮೀರುವ ಸಮಯ,
ಅವನ ಬರವಿಗೆ ಕಣ್ಣ ಮೇಲೆ
ಕೈ ನೆರಳಾಗಿಸಿ ಕಾದಿದ್ದೇನೆ
ಶಬರಿ ಕಾದಂತೆ.

ಹುಟ್ಟಿಸಿದ ದೇವ ಬಂದೇ ಬರುವ
ನಾ ಹುಟ್ಟಿಸಿದ ಸುತ ಬರದಿದ್ದರೂ
ನನ್ನ ಸಂಜಾತೆ ಬರದಿದ್ದರೂ ದೂರದೂರಿಂದ!

ತನ್ನ
ದಿನಚರಿ ಬದಲಿಸಿ ಕೊಳ್ಳದೇ
ತಮ್ಮ ಪೂರ್ವಜರ, ತಾವು ಹುಟ್ಟಿದ
ಬಿಡದಿಯ ಆಸರೆಯ
ತಾ ಮೆರೆದ ತನ್ನದೇ ನೆಲದ
ಮಣ್ಣಿನ ಸೆಲೆಯ ಆಘ್ರಾಣಿಸಲೇ ಇಲ್ಲ
ನಮ್ಮ ತರಂಗಗಳು!

ಡಬ್ಬಿಯಲ್ಲಿಟ್ಟ ಸುಗಂಧ ಸೌಂದರ್ಯದ
ಅಲೆಯಲ್ಲಿ ತೇಲಾಡಲೇ ಇಲ್ಲ

ಇಲ್ಲಿಂದ ಹೋಗೇ ಬಿಡುವ
ಮುನ್ನ ಕಾಡವುದೇ ಇಲ್ಲ ಅವರಿಗೆಲ್ಲ
ಅಪ್ಪ ಅಮ್ಮರ ನೆನಪು!
ಒನಪು
ಜೀವಿಸಿದ್ದ ಜೀವನದ ಹೊಳಪು!

ಜೀವನ ಸಂಧ್ಯೆಯ ಗಂಧ ಒಮ್ಮೆ ಕಡೆಯ ಬಾರಿ
ಅನುಭವಿಸುತ್ತಿರುವ ನಮ್ಮ ಅನುಭೂತಿಯ ಕಾಣಲಿಲ್ಲ

ಮಗ ಮೊಮ್ಮಗ ಮಗಳು
ಮೊಮ್ಮಗಳ ಚಕ್ರ
ಮುರಿದು ಹೋಗವ ಮುನ್ನ
ಬನ್ನಿ.
ಕಾದಿರಿಸಿರುವ,
ತಾರೀಕು ಕಾಣಿಸದಿರುವ
ಟಿಕೀಟು ಬಂದಾಗಿದೆ,
ಬನ್ನಿ!
ಈ ನೆಲದ ಋಣದ ನಮ್ಮ ಪಾಲಿನ ದ್ರವ್ಯ ಸಂದಾಯ
ಮಾಡಲು ಬನ್ನಿ,
ಹೇಗಾದರೂ ಬನ್ನಿ!

ಈ ಸಂಬಂಧಗಳ ಈ ಋಣಗಳ
ತೀರುವಿಕೆಯ ಪರಿಗಳ
ಕಾಣಲಾದರೂ ಬನ್ನಿ,
ಕಡೆಗೆ ಚರಣ ಗೀತೆ
ಹಾಡಿಗಾದರೂ ಬನ್ನಿ

ಬನ್ನಿರೋ ಬನ್ನಿ
ಬಾರದಿರ ಬೇಡಿ!!


3 thoughts on “ಡಾ ಡೋ.ನಾ.ವೆಂಕಟೇಶ ಕವಿತೆ “ಬಾರದಿರ ಬೇಡಿ”

  1. ನಾವು ಈ ಅದ್ಭುತವಾದ
    ಕವಿತೆಯನ್ನು ನಿಮ್ಮ ಜತೆಯಲ್ಲಿ ಹಾಡಲು ಅವಕಾಶ ಸಿಗಲಿ ಎಂದು
    ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.

  2. ನಾವು ಈ ಅದ್ಭುತವಾದ
    ಕವಿತೆಯನ್ನು ನಿಮ್ಮ ಜತೆಯಲ್ಲಿ ಹಾಡಲು ಅವಕಾಶ ಸಿಗಲಿ ಎಂದು
    ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.

Leave a Reply

Back To Top