“ಅದೇ ಭೂಮಿ ಅದೇ ಬಾನು.-ಈ ಪಯಣ ನೂತನ” ಪ್ರೇಮ ಲಹರಿ,  ಜಯಶ್ರೀ.ಜೆ. ಅಬ್ಬಿಗೇರಿ ಬರಹ

 ಮನದಲ್ಲಿ ಮುಗಿಲೆತ್ತರದ ಆಸೆಗಳನ್ನಿಟ್ಟುಕೊಂಡು ಇಂದಲ್ಲ ನಾಳೆ ನಿನ್ನ ಹೃದಯವೆಂಬ ನೆಲದಲ್ಲಿ ಪ್ರೀತಿಯ ಹೂವು ಅರಳುತ್ತದೆಂದು ಕಾದದ್ದೇ ಬಂತು ಕಾಯುವುದರಲ್ಲೂ ಅದೇನೋ ಸವಿಯಾದ ಸುಖವಿದೆ. ಆ ಸವಿನೆನಪುಗಳ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು.  ಕಾಡುವುದೇ ನೆನಪುಗಳ ಕೆಲಸ. ಅವುಗಳ ಕಾಡುವಿಕೆಯಲ್ಲೂ ಏನೋ ಒಂದು ಹಿತವಿದೆ ಅನಿಸುತ್ತೆ. ಅದರಲ್ಲೂ ನಿನ್ನ ನೆನಪುಗಳಲ್ಲಿ ಮುಗಿಯದ ಸೆಳೆತವಿದೆ. ನೆನಪುಗಳಲ್ಲಿ ಅಷ್ಟೇ ಅಲ್ಲ ನಿನ್ನಲ್ಲೂ. ಎಲ್ಲೂ ಕಾಣದ, ಯಾರಲ್ಲೂ ನೋಡದ ಪ್ರೀತಿಯ ಸೆಳೆತವಿದೆ.

ಜೀವನದಲ್ಲಿ ಕೇವಲ  ದುಃಖ ನೋವು ನುಂಗುವುದಲ್ಲ. ಅದರ ಆಚೆಗೆ ಒಂದು ಚೆಂದದ ಬದುಕು ಇದೆ. ಅದರಲ್ಲಿ ಅಗಾಧವಾದ ಸಡಗರ ಸಂಭ್ರಮ ಸಂತಸಗಳಿವೆ ಅಂತ ತೋರಿಸಿಕೊಟ್ಟವಳೇ ನೀನು. ಪ್ರೀತಿ ಪ್ರೇಮ ಅಂತ ಹೇಳುವಾಗಲೆಲ್ಲ ತಟ್ ಅಂತ ಕಣ್ಮುಂದೆ ಬರುವ ದೃವತಾರೆ ನೀನೇ ಕಣೆ. ಸಂಜೆಯ ವೇಳೆಯೇ ವಿರಹದ ಸುಳಿವು ಸುಳಿ ಸುಳಿಯಾಗಿ ಸುಳಿಯುತ್ತದೆ. ರಾತ್ರಿಯ ನಿದಿರೆಯಲ್ಲಿ ನಿದಿರೆಯ ಮಂಪರಿನಲ್ಲಿ ನೀ ಬಂದರೆ ಮುಗಿದು ಹೋಯಿತು. ಅಂದು ನಿನ್ನ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಕಣ್ರೆಪ್ಪೆಗಳು ಒಂದಕ್ಕೊಂದು ಅಂಟುವುದೇ ಇಲ್ಲ.

‘ಅದೇ ಭೂಮಿ ಅದೇ ಬಾನು ಈ ನಯನ ನೂತನ ಅದೇ ದಾರಿ ಅದೇ ತಿರುವು ಈ ಪಯಣ ನೂತನ’ ಎನ್ನುವ ನಿನ್ನಿಷ್ಟದ ಹಾಡು ಗುನುಗುತ್ತ ದಿಂಬಿನ ಮುಖದ ಮೇಲೆ ನನ್ನ ಮುಖವಿಕ್ಕಿ ದಿಂಬನ್ನು ನೀನೇ ಅಂತ ತಿಳಿದು ಅಯ್ಯೋ! ಅದೇನು ಅಂತ ಹೇಳಲಿ ಹೀಗೇ ಏನೇನೋ ಮುಂದೆ ಮುಂದೆ ಸಾಗುತ್ತದೆ ಮುದ್ದಿನಾಟ. ಮುದ್ದಿನಾಟದಿಂದ ಮುಂದಿನಾಟಕ್ಕೆ ಮುಂದುವರೆಯುವ ಕುತೂಹಲ ‘.ಛೀ! ಬಿಡು ಇದೇನು ಮಂಗನಾಟ.’ ಅಂತ ನೀನು ಅಂದ್ಹಾಗೆ ಅನಿಸಿ, ನಿನ್ನ ಮೇಲಿನ ಮೋಹದ ಸುಗಂಧದ ಪ್ರವಾಹ ಉಕ್ಕುತ್ತದೆ.
ಹೃದಯದ ತಾಳ ತಪ್ಪುತ್ತದೆ. ಚಿತ್ತಾಕರ್ಷಕ ಚಿತ್ತಾರದ ರಂಗೋಲಿಯ ಹೊಂಗನಸುಗಳು ಕಣ್ಮುಂದೆ ರಪ್ ಅಂತ ಸುಳಿಯುತ್ತವೆ.  

ಮೈ ಕೈ ತುಂಬಿಕೊಂಡು ಬೆಳೆದ ಬಿಳಿ ಮಂದಾರ ಹೂವಿನಂತಹ  ಬೆಳ್ಳನೆಯ ಪೋರಿ.ಅದೊಂದು ದಿನ ಗುಲಾಬಿ ಬಣ್ಣದ ಲಂಗ ತೊಟ್ಟು ಅದಕ್ಕೊಪ್ಪುವ ರೇಷ್ಮೆ ಹಸಿರು ಜರಿಯ ರವಿಕೆ ತೊಟ್ಟು ಉದ್ದನೆಯ ಜಡೆಗೆ ಸುಗಂಧ ಸೂಸುವ ಕೇದಿಗೆ ಮುಡಿದು ಗೆಳತಿಯರೊಂದಿಗೆ ವನಭೋಜನವೆಂದು ಸುಳ್ಳು ಹೇಳಿ ನನ್ನ ಭೇಟಿಗೆ ಬಂದದ್ದನ್ನು ಮರೆಯುವುದಾದರೂ ಹೇಗೆ?  ಗಿಡ ಮರಗಳ ಮಧ್ಯೆ ಮಧ್ಯೆ ಇರುವ ಜಾಗದಲ್ಲಿ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ ಹಕ್ಕಿಗಳು ಚಿಲಿಪಿಲಿಗುಟ್ಟುತ್ತ ನಮ್ಮನ್ನು ನೋಡಿ ತಾವೂ ಜೊತೆಯಾಗಲು ಹಾರತೊಡಗಿದವು. ದೊಡ್ಡ ಮರಕ್ಕೆ ಬಳ್ಳಿಯೊಂದು ಸುತ್ತುವರೆದು ನಿಂತಂತೆ ಅದ್ಯಾವಾಗ ತೋಳುಗಳು ನಿನ್ನನ್ನು ಸುತ್ತುವರೆದಿದ್ದವೋ ಗೊತ್ತೇ ಆಗಲಿಲ್ಲ. ಹಕ್ಕಿಗಳ ಹಾರಾಟ ತೇಲಾಟಕ್ಕೆ ಇಬ್ಬರ ಮನಸ್ಸು ಮತ್ತಷ್ಟು ಉಲ್ಲಸಿತವಾದವು. ಜಿರಲೆ ಹಲ್ಲಿ ಕಂಡರೆ ಭಯ ಪಡುವ ನೀನು ಚಿಟ್ಟೆ ಹಿಡಿಯಲು ಓಡಾಡುತ್ತಿ. ಅಚ್ಚರಿಯೆಂಬಂತೆ ಚಿಟ್ಟೆಯೊಂದು ಭುಜದ ಮೇಲೆ ಬಂದು ಕುಳಿತಿತ್ತು ಏನೋ ಒಂಥರಾ ಬದಲಾದೆ. ರೋಮಾಂಚಿತಳಾದೆ. ಬಾಹುಗಳು ಯಾವಾಗ ತೆರೆದುಕೊಂಡವೋ ನನ್ನ ತೆಕ್ಕೆಯಲ್ಲಿ ಅದು ಹೇಗೆ ಬಂಧಿಯಾದಿಯೋ ತಿಳಿಯಲೇ ಇಲ್ಲ. ಖುಷಿಯಲ್ಲಿ ತಬ್ಬಿಕೊಂಡಿದ್ದೆ.  ಅದೆಲ್ಲ ಕ್ಷಣಾರ್ಧದಲ್ಲಿ ನಡೆಯಿತು.  ಅದೆಲ್ಲ ಕಂಡ ನಾನು ಮಧುರ ಸುಖ ಅನುಭವಿಸುತ್ತಿದ್ದೆ. ಅಬ್ಬಾ! ಆ ಚಿಟ್ಟೆ ಮತ್ತೆ ಬಂದು ನಿನ್ನ ಭುಜದ ಮೇಲೆ ಮತ್ತೆ ಕುಳಿತುಕೊಳ್ಳಬಾರದೇ ಅಂತ ಮನಸ್ಸು ಬಯಸುತ್ತಿತ್ತು.

.

ನಿನ್ನೆಗಳಲ್ಲಿ ಕಳೆದುಹೋಗಬಾರದು ಎನ್ನುವುದನ್ನೇ ಕವಿವಾಣಿಯು ‘ ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಎಂದಿದೆ. ನನಗೇನೂ ತಿಳಿಯುವುದಿಲ್ಲ, ನನಗೇನೂ ಗೊತ್ತಿಲ್ಲ, ನನ್ನಿಂದ ಈ ಕೆಲಸ ಆಗದೆಂದು ಚಿಂತಿಸುತ್ತ ಕುಳಿತರೆ ಚೆನ್ನಾಗಿರಲು ಸಾಧ್ಯವಾಗದೇ ಋಣಾತ್ಮಕವಾಗಿಯೇ ಇರುತ್ತೇವೆ. ಜೀವನ ಮತ್ತಷ್ಟು ಹಳಿ ತಪ್ಪುತ್ತದೆ. ಯಾವುದೇ ಸಾಧನೆ ಮಾಡಲು ಮುಂದಾಗುವುದಿಲ್ಲ. ಮುಂದಿರುವ ಸವಾಲು ಎಂಥ ಕಷ್ಟದಿಂದ ಕೂಡಿದ್ದರೂ ಅದನ್ನು ಧನಾತ್ಮಕವಾದ ಮನೋಪ್ರವೃತ್ತಿಯಿಂದ ನಿವಾರಿಸಿಕೊಳ್ಳಬಹುದು. ಆದ್ದರಿಂದ ‘ನಿನ್ನೆ ಸತ್ತಿಹುದು. ನಾಳೆ ಇನ್ನೂ ಹುಟ್ಟಿಲ್ಲ. ಇಂದು ಕೈಯಲ್ಲಿಹುದು.’ ಎಂಬ ಹೊನ್ನುಡಿಯನ್ನು ಪರಿಪಾಲಿಸಬೇಕು. ಎಂದೆಲ್ಲ ಹೊನ್ನುಡಿಗಳನ್ನು ಹೇಳಿದ ಜಾಣೆ ನೀನೇನಾ ಎಂಬ ಅಚ್ಚರಿಯೊಂದಿಗೆ ನಿನ್ನನ್ನೇ ದಿಟ್ಟಿಸುತ್ತಿದ್ದೆ.

ದೈನಂದಿನ ಬದುಕಿನ ಅಗತ್ಯ ವಸ್ತುಗಳ ಬೆಲೆ ಗಗನದೆತ್ತರಕ್ಕೆ ಏರಿರುವಾಗ ಬಾಳ ಬಂಡಿ ನೂಕುವುದಾದರೂ ಹೇಗೆ? ದುಬಾರಿ ಕಾಲದಲ್ಲಿ ಇಷ್ಟೊಂದು ಕಡಿಮೆ ಆದಾಯದಲ್ಲಿ ಹಾಲು ನೀರು ಇನ್ನಿತ್ಯಾದಿಗಳಿಗೆ ಖರ್ಚು ಮಾಡಿ ಎಷ್ಟು ಉಳಿಸಲು ಸಾಧ್ಯ. ಉಳಿಸುವುದು ದೂರದ ಮಾತು ತಿಂಗಳದ ಕೊನೆಯಲ್ಲಿ ಅವರಿವರ ಮುಂದೆ ಕೈ ಚಾಚಿ ನಿಲ್ಲುವ ಪರಿಸ್ಥಿತಿ ಬಾರದಿರಲೆಂದು ದಿನವೂ  ದೇವರಿಗೆ ಕೈ ಜೋಡಿಸುವ ವಾಸ್ತವ ಆರ್ಥಿಕ ಸಂಕಷ್ಟದ ಯಾತನೆ ಬಾಯಲ್ಲಿ ಬಂಗಾರದ ಚಮಚ ಹುಟ್ಟಿದವರಿಗೆ, ಲಕ್ಷಾಂತರ ಸಂಬಳ ಪಡೆಯುವವರಿಗೆ ಹೇಗೆ ಅರ್ಥವಾದೀತು ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ಹೇಗೆ ತಿಳಿದೀತು? ಬಡವರ ಬದುಕಿನ ಬವಣೆ ತಿಳಿಸುವ ಪರಿ ಎಂತು? ಎಂಬ ಪ್ರಶ್ನೆ ಚಿಕ್ಕಿಂದಿನಿಂದಲೂ ಕಾಡುತ್ತಲೇ ಇರುವ ಪ್ರಶ್ನೆಯಾಗಿತ್ತು ಎಲ್ಲ ಹೊರೆಗಳ ಭಾರಗಳತ್ತ ಗಮನಹರಿಸಿ, ಬದುಕಿನ ಭಾರಗಳ ಹೊರೆ ಇಳಿಸಬೇಕೆಂದು ಕಲಿಸಿದೆ.

ಪ್ರೀತಿಯ ಹೊಸ ಪರಿಭಾಷೆಗಳನ್ನು ತಿಳಿಸಿದೆ.
ಚಿಗುರು ಮೀಸೆ ಮೂಡುತ್ತಿರುವ ಹೊತ್ತಿನಲ್ಲೇ ತಂದೆಯ ತೀವ್ರ ಕಾಯಿಲೆಯಿಂದಾಗಿ ಕುಟುಂಬದ ನೊಗ ಹೊರಬೇಕಾಗಿ ಬಂತು. ಹಡೆದವ್ವನ ಆರೈಕೆಗಾಗಿ ಬೇರೆ ಊರಿಗೆ ಉದ್ಯೋಗ ಅರಸಿ ಹೋಗಲಾಗದೆ, ಒಲ್ಲದ ಮನಸ್ಸಿನಿಂದ ಅಪ್ಪ ಮಾಡುತ್ತಿದ್ದ ವ್ಯಾಪಾರವನ್ನೇ ಶುರು ಮಾಡಿದೆ. ದಿನಕಳೆದಂತೆ ನೋಡು ನೋಡುತ್ತಿದ್ದಂತೆ ಊಹೆಗೂ ಮೀರಿ ವ್ಯಾಪಾರ ವೃದ್ಧಿಸಿತು. ಬಂಧು ಬಾಂಧವರು ಬೆರಗಾಗುವಂತೆ ಸಿರಿವಂತಿಕೆಯ ಶಿಖರ ಏರಿದೆ. ನನ್ನ ತಾಯಿಗೂ ಮಹದಾಶ್ವರ್ಯ. ಅಪ್ಪ ದಿನವೂ ಕರೆದು ವ್ಯಾಪಾರ ಕಲಿಸಲು ನೋಡಿದಾಗ ಉದಾಸೀನ ತೋರಿದ ಮಗ ಇಂದು ಅದರಲ್ಲಿ ಗಣನೀಯ ಸಾಧನೆ ಮಾಡಿದ್ದನ್ನು ಕಂಡು ಅಪ್ಪ ಮತ್ತೆ ಚೇತರಿಸಿಕೊಂಡರು.

ಇದಕ್ಕೆಲ್ಲ ಕಾರಣ ನಿನ್ನ ಶ್ರದ್ಧೆ ಎಂದು ಬೆನ್ನು ಚಪ್ಪರಿಸಿ ಭೇಷ್ ಎಂದು ಸಂತಸ ಪಡುತ್ತಿದ್ದಾರೆ. ದೂರದ ಊರಿಗೆ ಹೋಗಿ ಸಂಪಾದಿಸಬೇಕು ಎಂದುಕೊಂಡಿದ್ದ ಹಣಕ್ಕಿಂತ ಹೆಚ್ಚು ಹಣ ಇದ್ದೂರಲ್ಲಿಯೇ ಬರಲಾರಂಭಿಸಿದೆ.

ನೀನೀಗ ನಮಗೆ ಆಸರೆಯಾಗಿ ಇದ್ದರೆ ಸಾಕು ಎನ್ನುತ್ತಿದ್ದಾಳೆ ಅವ್ವ.
ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಆದರೆ ಮದುವೆ ಮಾತ್ರ ನಿನ್ನಿಷ್ಟದಂತಾಗಲೆಂದು ಅಪ್ಪ ಅವ್ವ ಹರಿಸುತ್ತಿರುತ್ತಾರೆ. ಆಗೆಲ್ಲ ನನ್ನ ಮುಖದಲ್ಲಿ ಸಂತೋಷ ಕುತೂಹಲ ಸಂಭ್ರಮ ಕಂಡುಬರುತ್ತಿದ್ದವು. ಅಪ್ಪ ಅವ್ವ ಜೊತೆಗಿದ್ದರೂ ಈಗೀಗ ನೀನಿಲ್ಲದೇ ನಾನು ಏಕಾಂಗಿ ಅನಿಸುತ್ತಿದೆ.

ಕಳೆದ ತಿಂಗಳಿನಿಂದ ಮನೆಯಲ್ಲಿ ನನ್ನ ಮದುವೆ ವಿಷಯ ಚರ್ಚೆಯ ವಿಷಯವಾಗಿದೆ. ಇಷ್ಟು ದಿನ ಕಷ್ಟದಲ್ಲಿದ್ದಾಗ ನಮ್ಮತ್ತ ತಿರುಗಿಯೂ ನೋಡದ ಅತ್ತೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ಮುಂದಾಗಿದ್ದಾಳೆ. ಈ ಸಂಗತಿ ಅಚ್ಚರಿ ತಂದರೂ ತೋರಿಸಿಕೊಟ್ಟಿಲ್ಲ. ಹೆತ್ತವರು ಮದುವೆ ನಿರ್ಧಾರ ನನಗೇ ಬಿಟ್ಟಿದ್ದಾರೆ. ಅತ್ತೆಯ ಮಾತುಗಳು ನನಗೆ ರುಚಿಸಲಿಲ್ಲ.

 ನಿನಗೀಗಾಗಲೇ ಮನಸ್ಸು ಒಪ್ಪಿಸಿಯಾಗಿದೆ. ನೀನಿಲ್ಲದೇ ನಾನಿಲ್ಲ ಹೀಗಾಗಿ ಮದುವೆ ನಿನ್ನೊಂದಿಗೆ ಕಣೆ ಬಂದುಬಿಡು  ವನಭೋಜನದ ಸ್ಥಳಕ್ಕೆ ಕಾದಿರುವೆ ನಿನಗಾಗಿ ಮೂರು ಗಂಟಿನ ನಂಟು ಬೆಳೆಸಲು. ಮುದ್ದಿನಾಟದ ಮುಂದಿನಾಟವ  ಮುಂದುವರೆಸೋಣ ಬಾಳಿನ ನೂತನ ಪಯಣ ಆರಂಭಿಸೋಣ.

ಇಂತಿ ನಿನ್ನ ಮನ
ಮೋಹಿನ


Leave a Reply

Back To Top