ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಬದುಕಿದು ನಿನ್ನದು”
ನೀನಾರೆಂದು ಜಗಕೆ ತೋರಿಸಲು ಹೋಗದಿರು
ಅಸಾಧ್ಯವದು ಸುತ್ತುವರಿದಿರುವಾಗ ತಪ್ಪು ಹುಡುಕುವ ಜನರು
ಇದ್ದು ಬಿಡು ನಿನ್ನಿಷ್ಟದಂತೆ ತೊರೆದು ಲೋಕದ ಚಿಂತೆ
ಸಕಲವೂ ಅಡಗಿರುವ ಸಾಗರದ ಗರ್ಭದಂತೆ
ನಿನ್ನೊಳು ಸದಾ ಜಿನುಗಿರಲಿ ಸತ್ ಚಿಂತನೆಗಳ ಝರಿ
ಬೇಡ ಜಗಕೆ ಅರ್ಥ ಮಾಡಿಸುವ ತರಾತುರಿ
ಹಾಲನುಂಡು ಹಾಲಾಹಲವ ಕಕ್ಕುವ ಜನರ ನಡುವೆ
ಧರಿಸು ಸದಾ ನಿನ್ನೊಳಿತಿಗೆ ಮೌನದ ಒಡವೆ
ಒಳಗೆ ಬೇಗುದಿ ಜಗದೆದುರು ಮುಖವಾಡದ ನಗೆ
ಸರಿಸಿಬಿಡು ತೆರೆಯನು ದುಃಖದ ಕಡಲು ಉಕ್ಕಲಿ ಹಾಗೆ
ಒಂದೊಂದು ಮನಕೂ ಸಾವಿರ ಸಾವಿರ ಚಿಂತೆ
ನಿನಗಾಗಿ ಬದುಕು ಇದು ಎಂದೂ ಮುಗಿಯದ ಸಂತೆ
—————————————————————-
ಮಧುಮಾಲತಿರುದ್ರೇಶ್
ತುಂಬಾ ಸುಂದರ ಕವನ ಮನದಾಳದ ಮಾತುಗಳಿಂದ ತುಂಬಿದ ಸಂದೇಷ.ತಮ್ಮ ಸಾಹಿತ್ಯ ಹೀಗೆ ಮುಂದುವರಿಯಲಿ